

ಉಡುಪಿ: ಕೇಂದ್ರ ಸರ್ಕಾರದ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದೆ. ಕೇಂದ್ರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳಿಗೆ ಭಾಗವಹಿಸದಂತೆ ರಾಜ್ಯ ಸರ್ಕಾರ ಮೌಕಿಕ ಆದೇಶ ನೀಡಿದೆ ಎಂದು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪಕ್ಷದ ಕಾರ್ಯಕ್ರಮವಲ್ಲ. ಕೇಂದ್ರ ಸರ್ಕಾರದ ಯೋಜನೆಗಳಿಂದ ರಾಜ್ಯಕ್ಕೆ ಅನುಕೂಲ ಆಗಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ಹಿಂದಿನ ಸರ್ಕಾರ ಕೊಟ್ಟ ನಾಲ್ಕು ಸಾವಿರ ರೂ. ನಿಲ್ಲಿಸಲಾಗಿದೆ. ಸಿದ್ದರಾಮಯ್ಯ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ಜನರಿಗೆ ಆಗುವ ಅನುಕೂಲ ತಪ್ಪಿಸುತ್ತಿದ್ದಾರೆ ಎಂದರು.
ಇವರಿಗೆ ಕೇಂದ್ರದ ದುಡ್ಡು ಬೇಕು.ಯೋಜನೆಗಳು ಬೇಕು. ಯಾತ್ರೆ ಬೇಡ. ಈ ಬಗ್ಗೆ ವಿಧಾನಸಭೆಯಲ್ಲಿ ಶಾಸಕರು ವಿಷಯ ಪ್ರಸ್ತಾಪಮಾಡಲಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರಿಗಳು ಕಾಂಗ್ರೆಸ್ ಸ್ವತ್ತಲ್ಲ. ಯಾವುದೇ ಸರ್ಕಾರ ಬಂದರೂ ಅವರು ಕೆಲಸ ಮಾಡಬೇಕು. ಫೆಡರಲ್ ವ್ಯವಸ್ಥೆಯಲ್ಲಿ ಪರಸ್ಪರ ಸಹಕಾರ ಅಗತ್ಯ. ಎಲ್ಲ ಯೋಜನೆಗಳು ರಾಜ್ಯ ಸರ್ಕಾರದ ಮೂಲಕವೇ ಜಾರಿಯಾಗುತ್ತವೆ. ಆದರೆ ಇಂದು ಬ್ಯಾಂಕ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿ ಮಾಡಿ ಕೆಲಸ ಮಾಡುವ ಸ್ಥಿತಿ ಬಂದಿದೆ ಎಂದರು.
ರಾಜ್ಯದಲ್ಲಿ ಕಳ್ಳರ ಕೈಗೆ ಬೀಗದ ಕೈಕೊಟ್ಟಿದ್ದೇವೆ. ಕಳ್ಳರ ತಂಡ ಕ್ಯಾಬಿನೆಟ್ನಲ್ಲಿ ಕೂತಿದೆ. ಡಿಕೆಶಿ ಸಿಬಿಐ ತನಿಖೆ ಹಿಂಪಡೆದ ರೀತಿಯಲ್ಲಿ ಕೇಸು ವಾಪಸ್ ತಗೊಳ್ತಾರೆ, ಅವರೇ ಜವಾಬ್ದಾರಿ ಹಂಚಿಕೊಳ್ಳುತ್ತಾರೆ. ಅವರೇ ದುಡ್ಡು ತಿಂತಾರೆ ಅವರೇ ಸಂಗ್ರಹ ಮಾಡುತ್ತಾರೆ. ಬೇರೆ ರಾಜ್ಯಗಳಿಗೆ ಚುನಾವಣೆ ನಡೆಸಲು ಹಣ ಹಂಚುತ್ತಾರೆ. ನಿರ್ಣಾಯಕ ಹಂತದಲ್ಲಿ ಕೇಸು ವಾಪಸು ತೆಗೆದುಕೊಳ್ಳುವುದು ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡಿದಂತೆ. ನ್ಯಾಯಾಂಗ, ಸಿಬಿಐ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.