ಫಲಾನುಭವಿಗಳಿಗೆ ಕೇಂದ್ರದ ಯೋಜನೆ ತಲುಪಿಸುವ ಉದ್ದೇಶ

udp-30-shobha 1
Published on

ಉಡುಪಿ: ದೇಶ ವಿಶ್ವದ ನಂ.1 ಸ್ಥಾನಕ್ಕೆ ಏರಬೇಕಾದರೆ ಎಲ್ಲ ಸ್ತರಗಳನ್ನೂ ಅಭಿವೃದ್ಧಿಪಡಿಸಬೇಕು. 2047ಕ್ಕೆ ವಿಕಸಿತ ಭಾರತ ಪ್ರಧಾನಮಂತ್ರಿಯವರ ಕನಸು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅಂಬಲಪಾಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ವಿಕಸಿತ ಭಾರತ ಸಂಕಲ್ಪ ಯಾತ್ರೆ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಮಾಹಿತಿಯನ್ನು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳ ಮುಂಭಾಗ ಎಲ್​ಇಡಿ ಪರದೆ ಮೂಲಕ ಪ್ರಾದೇಶಿಕ ಭಾಷೆಗಳಲ್ಲಿ ಬಿತ್ತರಿಸಲಾಗುತ್ತದೆ. ಆಸಕ್ತರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಗುತ್ತದೆ. ಸ್ಟಾರ್ಟಪ್​ ಇಂಡಿಯಾ, ಉಜಾಲ, ಡ್ರೋಣ್​ ಟೆಕ್ನಾಲಜಿ ಹೀಗೆ ಯಾವುದೇ ಯೋಜನೆ ನಿಜವಾದ ಫಲಾನುಭವಿಗೆ ತಲುಪಿದಾಗ ಅಭಿವೃದ್ಧಿ ಸಾಧ್ಯ. ವಿಕಸಿತ ಭಾರತ ಸಂಕಲ್ಪ ಯಾತ್ರೆ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಅತಿದೊಡ್ಡ ಕಾರ್ಯಕ್ರಮ ಎಂದು ಹೇಳಿದರು.

ಶಾಸಕ ಯಶಪಾಲ್​ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸುರೇಶ್​ ಶೆಟ್ಟಿ ಗುರ್ಮೆ, ಶಾಸಕ ಗುರುರಾಜ್​ ಗಂಟಿಹೊಳೆ, ಅಂಬಲಪಾಡಿ ಗ್ರಾಪಂ ಅಧ್ಯಕ್ಷೆ ಸುಜಾತಾ ಶೆಟ್ಟಿ, ಕೆನರಾ ಬ್ಯಾಂಕ್​ ಮಹಾಪ್ರಬಂಧಕ ಎಂ.ಜಿ.ಪಂಡಿತ್​ ಉಪಸ್ಥಿತರಿದ್ದರು. ಕೆನರಾ ಬ್ಯಾಂಕ್​ ಲೀಡ್​ ಬ್ಯಾಂಕ್​ ಮ್ಯಾನೇಜರ್​ ಪಿ.ಎಂ ಪಿಂಜಾರ್​ ಸ್ವಾಗತಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪ್ರಧಾನಿಯವರು ಫಲಾನುಭವಿಗಳೊಂದಿಗೆ ನಡೆಸಿದ ಸಂವಾದವನ್ನು ನೇರಪ್ರಸಾರದಲ್ಲಿ ವೀಕ್ಷಿಸಲಾಯಿತು. ಮುದ್ರಾ, ಪಿಎಂ ಉಜಾಲ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಯಿತು. ರಾಷ್ಟ್ರೀಯ ಕೆಮಿಕಲ್ಸ್​ ಮತ್ತು ಫರ್ಟಿಲೈಸರ್ಸ್​ ಸಂಸ್ಥೆಯಿಂದ ಕೀಟನಾಶಕ ಸಿಂಪಡಣೆ ಡ್ರೋನ್​ ಪ್ರಾತ್ಯಕ್ಷಿಕೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net