

ರಟಕಲ್: ನರೇಂದ್ರ ಮೋದಿ ಸರ್ಕಾರ ದೇಶದ ಜನರ ಹಿತ ಕಾಪಾಡುತ್ತಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಜನರನ್ನು ಕತ್ತಲೆಗೆ ತಳ್ಳಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ದೂರಿದರು.
ಅರಣಕಲ್ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ೨೦೦೪ರಿಂದ ೨೦೧೪ರವರೆಗೆ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಯುವಕರು ಉದ್ಯೋಗಕ್ಕಾಗಿ ಹೊರ ದೇಶಗಳಿಗೆ ಹೊಗುತ್ತಿದ್ದರು. ಆದರೀಗ ಸಮಯ ಬದಲಾಗಿದೆ. ಮೋದಿ ಪ್ರಧಾನಿಯಾದ ಬಳಿಕ ದೇಶ ಪ್ರಗತಿಯತ್ತ ಸಾಗಿದೆ. ನಮ್ಮದು ಬಡವರ ಸರ್ಕಾರವಾಗಿದ್ದು, ಪ್ರತಿಯೊಬ್ಬರೂ ಮರ‍್ನಾಲ್ಕು ಯೋಜನೆ ಲಾಭ ಪಡೆದಿದ್ದಾರೆ. ೮೧ ಕೋಟಿ ಜನರಿಗೆ ಯೋಜನೆಗಳ ಲಾಭ ತಲುಪಿದ್ದು, ೧೩ ಕೋಟಿ ಜನರು ಬಡತನದಿಂದ ಮುಕ್ತಿ ಹೊಂದಿದ್ದಾರೆ ಎಂದರು.
ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಪಿಎಂ ಕಿಸಾನ್, ಪ್ರತಿ ತಿಂಗಳು ಉಚಿತ ಅಕ್ಕಿ, ವಿಮಾನಯಾನ, ರೈಲ್ವೆ, ಪಾಸ್‌ಪೋರ್ಟ್ ಕಚೇರಿ ಸೇರಿ ಸಾಕಷ್ಟು ಸೌಕರ್ಯ ಕಲ್ಪಿಸಲಾಗಿದೆ. ಯುವಕರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಸಿಪೇಟ್ ಕಾಲೇಜು ಪ್ರಾರಂಭಿಸಲಾಗಿದೆ. ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬೀದರ್-ಕಲಬುರಗಿ ರೈಲ್ವೆ ಲೈನ್ ಪೂರ್ಣಗೊಳಿಸಿ ನಿತ್ಯ ದೂರದ ಊರುಗಳಿಗೆ ರೈಲು ಓಡಿಸಲಾಗುತ್ತಿದೆ ಎಂದು ವಿವರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮಣಿ ರಾಠೋಡ್, ಉಪಾಧ್ಯಕ್ಷ ಗುಂಡಪ್ಪ ರಟಕಲ್, ಪ್ರಮುಖರಾದ ಸಂತೋಷ ಗಡಂತಿ, ಮೋತಿರಾಮ ಚಿಮ್ಮನಚೋಡ, ವಿಜಯಕುಮಾರ ಚೆಂಗಟಾ, ರಾಮು ರಾಠೋಡ್, ಶಿವರಾಜ ಪಾಟೀಲ್ ಗೊಣಗಿ, ಶಿವರಾಜ ಪಾಟೀಲ್ ಅರಣಕಲ್, ರೇವಣಸಿದ್ದ ಬಡಾ, ರವಿ ಪಾಟೀಲ್, ಶರಣಗೌಡ ಕಂದಗೂಳ, ಸಿದ್ದು ಪಾಟೀಲ್, ರವಿ ಸಿಂಗೆ, ಶಿವಕುಮಾರ ಪಾಟೀಲ್ ಹೇರೂರ, ಸಿದ್ದು ಮಾನಕಾರ, ಅಧಿಕಾರಿಗಳಾದ ರವಿ ಸುಬ್ರಮಣ್ಯ, ಲೋಹಿತ್, ಶಿವಕುಮಾರ, ಗೋಪಾಲ ಕುಲಕರ್ಣಿ ಇತರರಿದ್ದರು.
ಉಜ್ವಲ ಯೋಜನೆ ಫಲಾನುಭವಿಗಳಿಗೆ ಗ್ಯಾಸ್, ಅಂಚೆ ಇಲಾಖೆ ಖಾತೆ ಪುಸ್ತಕ, ಬ್ಯಾಂಕ್ ಚೆಕ್ ವಿತರಿಸಲಾಯಿತು.
ರೇವಗ್ಗಿಯಲ್ಲಿ ನಮೋ ನವ ಮತದಾನ ಅಭಿಯಾನ: ರೇವಗ್ಗಿ (ರಟಕಲ್) ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ `ನಮೋ ನವ ಮತದಾನ' ಅಭಿಯಾನಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಚಾಲನೆ ನೀಡಿದರು. ಹೊಸ ಮತದಾರರಿಗೆ ಹೆಸರು ನೋಂದಣಿ ಮತ್ತು ಮತದಾನದ ಮಹತ್ವ ತಿಳಿಸಲಾಯಿತು. ಹೊಸ ಮತದಾರರು ಮೊ.೭೮೨೦೦ ೭೮೨೦೦ಗೆ ಮಿಸ್ಡ್ ಕಾಲ್ ಕೊಟ್ಟು ವೋಟಿಂಗ್ ಲಿಸ್ಟ್ನಲ್ಲಿ ಹೆಸರು ಸೇರಿಸಬಹುದು ಎಂದು ತಿಳಿಸಿದರು.
೨ ಸಾವಿರ ರೂ. ಕೊಟ್ಟು, ೬ ಸಾವಿರ ರೂ. ವಸೂಲಿ !: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜನರ ಸುಲಿಗೆ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳು ಕೆಲವರಿಗೆ ಮಾತ್ರ ತಲುಪುತ್ತಿವೆ. ಸಾಕಷ್ಟು ಅರ್ಹರು ಯೋಜನೆಗಳಿಂದ ದೂರ ಉಳಿದಿದ್ದಾರೆ. ಮನೆ ಯಜಮಾನಿಗೆ ೨ ಸಾವಿರ ರೂ. ಕೊಟ್ಟು ಖುಷಿಪಡಿಸುತ್ತಿದೆ. ಇನ್ನೊಂದೆಡೆ ಮದ್ಯದ ಬೆಲೆ ಹೆಚ್ಚಿಸಿ ಮನೆ ಯಜಮಾನನಿಂದ ೬ ಸಾವಿರ ರೂ. ವಸೂಲಿ ಮಾಡುತ್ತಿದೆ ಎಂದು ಸಚಿವ ಖೂಬಾ ವ್ಯಂಗ್ಯವಾಡಿದರು.
ರಾಜ್ಯದಲ್ಲಿರುವುದು ವಸೂಲಿ ಸರ್ಕಾರ. ಇಂತಹ ಸರ್ಕಾರದ ಜನಪ್ರತಿನಿಧಿಗಳ ಸುಳ್ಳು ಮಾತುಗಳಿಗೆ ಯಾರೂ ಮರಳಾಗಬಾರದು. ದೇಶಕ್ಕೆ ಮೋದಿ ಅವರ ಅಗತ್ಯವಿದೆ. ಹೀಗಾಗಿ ಮತ್ತೊಮ್ಮೆ ಅವರನ್ನು ಬೆಂಬಲಿಸಬೇಕು. ಚಿಂಚೋಳಿ, ಕಾಳಗಿ, ಆಳಂದ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ನಿಮ್ಮೆಲ್ಲರ ಆಶೀರ್ವಾದದಿಂದಲೇ ಕೇಂದ್ರದಲ್ಲಿ ಮಂತ್ರಿಯಾಗಿದ್ದೇನೆ.
| ಭಗವಂತ ಖೂಬಾ ಕೇಂದ್ರ ಸಚಿವ