

ಬೆಂಗಳೂರು ಗ್ರಾಮಾಂತರ: ಸದಾ ಹೊಸತನಕ್ಕೆ ತುಡಿಯುವ, ಹೊಸ ಹೊಸ ಪ್ರಯೋಗಗಳ ಮೂಲಕ ಓದುಗರ ಮನಮುಟ್ಟುವ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಈ ಬಾರಿ 75ನೇ ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವದ ವಿಶೇಷವಾಗಿ ಶನಿವಾರ ಹಮ್ಮಿಕೊಂಡಿದ್ದ ಸ್ಥಳದಲ್ಲೇ ಪ್ರಬಂಧ ಬರೆಯಿರಿ ಬಹುಮಾನ ಗೆಲ್ಲಿ ಸ್ಪರ್ಧೆಗೆ ಜಿಲ್ಲೆಯ ನಾಲ್ಕೂ ತಾಲೂಕುಗಳ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಬೇಗೂರು, ತ್ಯಾಮಗೊಂಡ್ಲು ಮುಖ್ಯರಸ್ತೆ, ಬೈರನಹಳ್ಳಿಯ ಸೌಂದರ್ಯ ಅಂಬಿಕಾ ಪಿಯು ಹಾಗೂ ಪದವಿ ಕಾಲೇಜಿನಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ನಿಗದಿಪಡಿಸಿದ ವೇಳೆಗೆ ಅರ್ಧ ತಾಸು ಮುನ್ನವೇ ಸ್ಥಳದಲ್ಲಿ ಹಾಜರಿದ್ದ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಗೆ ಅಣಿಯಾದರು. ಬೆಳಗ್ಗೆ 10.30ಕ್ಕೆ ಸ್ಪರ್ಧೆ ಆರಂಭವಾಗಿ 1 ತಾಸಿನ ಅವಧಿ ನಿಗದಿಪಡಿಸಲಾಗಿತ್ತು. ಜಿಲ್ಲೆಯ ವಿವಿಧ ಕಾಲೇಜುಗಳಿಂದ 225 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬಹರಗಳಲ್ಲಿ ಮೂಡಿದ ಕಲ್ಪನೆ: ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮದಲ್ಲಿರುವ ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ಅಂದರೆ ಮುಂದಿನ 25 ವರ್ಷಗಳಲ್ಲಿ ಸಾಧಿಸಬೇಕಿರುವುದೇನು?, ಇದರಲ್ಲಿ ಯುವಜನರ ಪಾತ್ರವೇನು? ಈ ವಿಷಯದ ಕುರಿತಾಗಿ ವಿದ್ಯಾರ್ಥಿಗಳು ಸ್ವಂತ ಕಲ್ಪನೆ, ಯೋಜನೆ, ಚಿಂತನೆಗಳನ್ನು ಬರಹ ರೂಪಕ್ಕೆ ಇಳಿಸಿದರು.
ಜಗತ್ತನ್ನು ಮುನ್ನಡೆಸುವ ಸಾಲಿನಲ್ಲಿರಲಿ ಭಾರತ: ನಮ್ಮ ದೇಶ ಸ್ವತಂತ್ರವಾಗಿ 75 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಯವಜನರಲ್ಲಿನ ಭಾವನೆಗಳನ್ನು ವ್ಯಕ್ತಪಡಿಸಿ ಅದಕ್ಕೆ ರೂಪು ಕೊಟ್ಟು ಪ್ರಬಂಧ ಮಂಡಿಸುವುದಕ್ಕೆ ವೇದಿಕೆ ರೂಪಿಸಿಕೊಟ್ಟಿರುವ ವಿಜಯವಾಣಿ ಬಳಗದ ಕೆಲಸ ಪ್ರಶಂಸನೀಯ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೊಂಬಯ್ಯ ಹೇಳಿದರು.
ಸಮೃದ್ಧ ಭಾರತ ನಿರ್ಮಿಸೋಣ: 25 ವರ್ಷದಲ್ಲಿ ಸಮೃದ್ಧ ಭಾರತ ನಿರ್ಮಾಣ ಮಾಡೋಣ. ಇದರಲ್ಲಿ ಯುವಪೀಳಿಗೆ ಪಾತ್ರ ಮುಖ್ಯವಾಗಿದೆ ಎಂದು ಸಾಹಿತಿ ಹಾಗೂ ಅಂಕಣಕಾರ ಮಣ್ಣೆ ಮೋಹನ್ ಹೇಳಿದರು.ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಇಂತಹ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿದ್ಯಾರ್ಥಿಗಳ ಮನದಲ್ಲಿನ ಚಿಂತನೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇದಾಗಿದೆ. ಈ ವಿಷಯದಲ್ಲಿ ಮಾಧ್ಯಮ ಲೋಕದ ವಿಜಯವಾಣಿ ಹಾಗೂ ದಿಗ್ವಿಜಯ ಪ್ರಯೋಗ ಔಚಿತ್ಯಪೂರ್ಣವಾಗಿದೆ ಎಂದರು. ಭಾರತದ ಇತಿಹಾಸ ಪರಂಪರೆಯನ್ನು ಸರಿಗಟ್ಟುವ ಮತ್ತೊಂದು ದೇಶ ಈ ಜಗತ್ತಿನಲ್ಲಿ ಮತ್ತೊಂದು ಇರಲು ಸಾಧ್ಯವಿಲ್ಲ. ವೈವಿಧ್ಯತೆಯಲ್ಲಿ ಏಕತೆ ಸಾರುವ ನಮ್ಮ ದೇಶದ ವೈಶಿಷ್ಟ್ಯವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.
ಪರಿಕಲ್ಪನೆ ಒಡಮೂಡಲಿ: ವಿದ್ಯಾರ್ಥಿಗಳಿಂದ ಮುಂದಿನ ಭಾರತದ ಪರಿಕಲ್ಪನೆ ಒಡಮೂಡಿಸುವ ಪ್ರಯತ್ನವಾಗಲಿ
ಎಂದು ಕಾಲೇಜು ಸಂಸ್ಥಾಪಕ ಸೌಂದರ್ಯ ರಮೇಶ್ ಹೇಳಿದರು. ಸ್ಪರ್ಧೆಯಲ್ಲಿ ನಿಮ್ಮ ಚಿಂತನೆ, ಯೋಜನೆ, ಆಗಬೇಕಿರುವುದೇನು, ಈಗಿನ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆಗಳೇನು ಮತ್ತಿತರ ವಿಷಯಗಳ ಬಗ್ಗೆ ನಿಮ್ಮದೇ ಶೈಲಿಯ ಬರವಣಿಗೆಗಳು ಒಡಮೂಡಲಿ ಎಂದರು.
ಇದು ಅರ್ಥಪೂರ್ಣ ಕಾರ್ಯಕ್ರಮ: ಪ್ರಸ್ತುತ ಸನ್ನಿವೇಶದಲ್ಲಿ ಇಂಥ ಕಾರ್ಯಕ್ರಮ ಅರ್ಥಪೂರ್ಣ ಎನಿಸುತ್ತದೆ ಎಂದು ಪ್ರಾಂಶುಪಾಲ ಮೋಹನ್ ಕುಮಾರ್ ಹೇಳಿದರು. ಸ್ವಾತಂತ್ರ್ಯ ಬಂದು 75 ವರ್ಷ ಪೂಸರೈಸುತ್ತಿರುವ ಇಂದಿನ ದಿನಮಾನದಲ್ಲಿ ನಾವೆಲ್ಲರು ಸ್ವಾತಂತ್ರ್ಯ ನಡೆದು ಬಂದ ಹಾದಿಯನ್ನು ಸ್ಮರಿಸಬೇಕು ಎಂದರು.
ಇಂಥ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನಮಗೆ ಖುಷಿ ಎನಿಸುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಇಂಥದ್ದೊಂದು ಪ್ರಯೋಗ ಶ್ಲಾಘನೀಯ ಎನಿಸಿದೆ ವಿಜಯವಾಣಿಯಿಂದ ಇಂಥ ಮತ್ತಷ್ಟು ಪ್ರಯೋಗಗಳನ್ನು ನಿರೀಕ್ಷಿಸುತ್ತೇವೆ.
| ದರ್ಶನ್ ವಿದ್ಯಾರ್ಥಿ
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಆಗಿದೆ ಎಂಬುದೇ ಒಂದು ರೋಮಾಂಚನ ವಿಷಯವಾಗಿದೆ. ಇಷ್ಟು ವರ್ಷದಲ್ಲಿ ಅಖಂಡ ಭಾರತ ಸಾಧಿಸಿದ್ದು ಕಡಿಮೆ ಏನಲ್ಲ. ಮುಂದಿನ 25 ವರ್ಷಗಳಲ್ಲಿ ಭಾರತ ಮತ್ತಷ್ಟು ಪ್ರಕಾಶಿಸಲಿ ಎಂಬುದು ನಮ್ಮೆಲ್ಲರ ಆಶಯ.
| ಪುಷ್ಪಲತಾ ವಿದ್ಯಾರ್ಥಿ
ನಿಜಕ್ಕೂ ಭಾರತ ಬದಲಾಗಿದೆ, ಬದಲಾಗುತ್ತಿದೆ. ನಾವು ಶಾಲಾ-ಕಾಲೇಜುಗಳಲ್ಲಿ ಓದಿದಂತೆ ಸ್ವಾತಂತ್ರ್ಯ ಪೂರ್ವದಲ್ಲಿನ ಚಿತ್ರಣ ಹಾಗೂ ಪ್ರಸ್ತುತ ಸನ್ನಿವೇಶ ಸಾಕಷ್ಟು ಅಂತರವಿದೆ. ಸ್ವತಂತ್ರ ಭಾರತದ ಪ್ರಜೆಗಳು ಎನ್ನಲು ನಮಗೆಲ್ಲ ಹೆಮ್ಮೆ ಅನಿಸುತ್ತದೆ.
| ದರ್ಶನ್ ವಿ.ಸಿ. ವಿದ್ಯಾರ್ಥಿ
ಸ್ವಾತಂತ್ರ್ಯ ಅಮೃತ ಮಹೋತ್ಸವ ಸನ್ನಿವೇಶದಲ್ಲಿ ವಿಜಯವಾಣಿ ಪ್ರಬಂಧ ಸ್ಪರ್ಧೆಗೆ ಆಯ್ಕೆ ಮಾಡಿಕೊಂಡಿರುವ ವಿಷಯ ಮಹತ್ವದ್ದಾಗಿದೆ. ಈ ವಿಷಯ ನೋಡಿಯೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಮೂಡಿತು. ಯುವ ಜನಾಂಗ ಮನಸ್ಸಿನಲ್ಲಿ ಭವಿಷ್ಯದ ಭಾರತ ಹೇಗಿರಲಿದೆ ಎಂಬುದರ ತುಲನೆಗೆ ಈ ಸ್ಪರ್ಧೆ ಸಹಕಾರಿಯಾಗಲಿದೆ.
| ಸುಚಿತ್ರಾ ಆರ್. ವಿದ್ಯಾರ್ಥಿ
ಸಾಮಾಜಿಕ ಕಾರ್ಯಕ್ರಮ ಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ ವಿಜಯವಾಣಿ ಹಾಗೂ ದಿಗ್ವಿಜಯ ಇಂಥ ವಿನೂತನ ಕಾರ್ಯಕ್ರಮಗಳ ಮೂಲಕ ಮತ್ತಷ್ಟು ಓದುಗರಿಗೆ ಹತ್ತಿರವಾಗುತ್ತಿದೆ. ಇಂಥ ಕಾರ್ಯಕ್ರಮಗಳನ್ನು ಮತ್ತಷ್ಟು ಎದುರು ನೋಡುತ್ತೇವೆ.
| ಕವಿತಾ ವಿದ್ಯಾರ್ಥಿ