

ಮೈಸೂರು: ಕೃಷಿ ಎಂದರೆ ಹೆಚ್ಚು ದುಡಿಮೆ, ಹೆಚ್ಚು ಖರ್ಚು ಹಾಗೂ ನಷ್ಟವೇ ಹೆಚ್ಚು ಎಂಬ ಮಾತು ಸರ್ವೇ ಸಾಮಾನ್ಯ. ಆದರೆ, ಇದಕ್ಕೆ ವಿರುದ್ಧ ವಾದ ಕೃಷಿ ಮಾದರಿಯನ್ನು ಕಾವೇರಿ ಕಣಿವೆಯ ಜಿಲ್ಲೆಯ ಪ್ರಗತಿಪರ ರೈತರು ತೆರೆದಿಟ್ಟಿದ್ದಾರೆ. ಪ್ರಗತಿಪರ ರೈತರು ಅನುಸರಿಸುತ್ತಿರುವ ಕೃಷಿ ಮಾದರಿಯಲ್ಲಿ ಕಡಿಮೆ ಖರ್ಚು, ಕಡಿಮೆ ದುಡಿಮೆ ಆದರೆ ಆದಾಯ ಮಾತ್ರ ಹೆಚ್ಚು..!
ರಾಷ್ಟ್ರೀಯ ರೈತ ದಿನ ಅಂಗವಾಗಿ ನಗರದ ‘ವಿಜಯವಾಣಿ’ ಕಚೇರಿಯಲ್ಲಿ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಕೊಡಗು ಜಿಲ್ಲೆಯ ನಲ್ಲೂರಿನ ಸೋಮೇಂಗಡ ಗಣೇಶ್ ತಿಮ್ಮಯ್ಯ, ಹಾಸನ ಜಿಲ್ಲೆಯ ಸಂತೇಶಿವರದ ಬಿ. ಬಸವರಾಜ್, ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಪುರದ ಶಿವಕುಮಾರ್ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಪ್ರಗತಿಪರ ರೈತರು ತಾವು ಅನುಸರಿಸುತ್ತಿರುವ ಕೃಷಿ ಮಾದರಿ ತೆರೆದಿಟ್ಟರು.
ಹಾಸನ ಜಿಲ್ಲೆ ಸಂತೇಶಿವರ ಗ್ರಾಮದ ಬಿ. ಬಸವರಾಜ್ ಅವರಿಗೀಗ 70 ವರ್ಷ ವಯಸ್ಸು. ಈ ಇಳಿವಯಸ್ಸಿನಲ್ಲೂ ಅವರು ತಮ್ಮ ಐದೂವರೆ ಎಕರೆ ತೋಟವನ್ನು ಕೃಷಿ ಕಾರ್ಮಿಕರ ಸಹಾಯವಿಲ್ಲದೆ ಪತ್ನಿಯ ಸಹಕಾರದೊಂದಿಗೆ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೆ ಅವರು ಅಳವಡಿಸಿಕೊಂಡಿರುವ ನೈಸರ್ಗಿಕ ಕೃಷಿ ಮಾದರಿ ಕಾರಣ. ಈ ಕೃಷಿ ಪದ್ಧತಿಯಲ್ಲಿ ಕೆಲಸ ಕಡಿಮೆ, ಆದಾಯ ಹೆಚ್ಚು ಎನ್ನುತ್ತಾರೆ ಬಸವರಾಜ್.
ತೋಟದಲ್ಲಿ 60 ಅಡಿ ಅಂತರದಲ್ಲಿ ಟ್ರಂಚ್‌ಗಳನ್ನು ನಿರ್ಮಾಣ ಮಾಡಿದ್ದೇನೆ. ಟ್ರಂಚ್‌ಗಳಿಗೆ ತೋಟದಲ್ಲಿ ದೊರೆಯುವ ತ್ಯಾಜ್ಯ, ಸಗಣಿಯನ್ನು ತುಂಬಿ ಸಾವಯವ ಗೊಬ್ಬರವಾಗಿ ಪರಿವರ್ತಿಸುತ್ತೇನೆ. ಈ ಸಾವಯವಗೊಬ್ಬರದಲ್ಲಿ ಎರೆಹುಳುಗಳು ಸಮೃದ್ಧವಾಗಿ ಬೆಳೆದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತಿವೆ. ಅಲ್ಲದೆ ಭೂಮಿಯ ತೇವಾಂಶ ಕೂಡ ನಾಶವಾಗುತ್ತಿಲ್ಲ. ಹೀಗಾಗಿ ತೋಟಕ್ಕೆ ನೀರು, ಗೊಬ್ಬರದ ಅವಶ್ಯಕತೆ ಕಂಡು ಬರುತ್ತಿಲ್ಲ. ಈ ಕೃಷಿ ಪದ್ಧತಿಯಲ್ಲಿ ತೋಟದ ನಿರ್ವಹಣೆಗೆ ಹೆಚ್ಚಿನ ಸಮಯ ನೀಡಬೇಕಾಗಿಲ್ಲ. ಐದೂವರೆ ಎಕರೆ ಜಮೀನಿನಲ್ಲಿ ತೆಂಗು, ಅಡಿಕೆ, ತೇಗ, ಸಿಲ್ವರ್, ಹಣ್ಣಿನ ಗಿಡಗಳು, ಮೆಣಸು, ವಿಳ್ಳೆದೆಲೆ ಬೆಳೆದಿದ್ದೇನೆ. ವರ್ಷದ ಎಲ್ಲ ಸಮಯದಲ್ಲೂ ಒಂದಲ್ಲ ಒಂದು ಬೆಳೆ ದೊರೆಯುತ್ತದೆ ಎಂದರು.
ಆರು ತಿಂಗಳಿಗೊಮ್ಮೆ ಫಸಲು ಬರುವ ರೀತಿಯಲ್ಲಿ ಬಾಳೆ ಬೆಳೆದಿದ್ದೇನೆ. ಬಾಳೆ ಹಾಕಿ 30 ವರ್ಷಗಳು ಕಳೆದಿವೆ. ಇದುವರೆಗೆ ಹೊಸ ಬಾಳೆ ಕಂದು ನೆಟ್ಟಿಲ್ಲ. ಆದರೆ, ಇಳುವರಿ ಮಾತ್ರ ಕಡಿಮೆ ಆಗಿಲ್ಲ. ಪ್ರಕೃತಿಗೆ ಪೂರಕವಾದ ಕೃಷಿ ಚಟುವಟಿಕೆ ಕೈಗೊಂಡರೆ ಹೆಚ್ಚು ಪರಿಶ್ರಮ ಇಲ್ಲದೆ ಉತ್ತಮ ಆದಾಯ ಗಳಿಸಬಹುದು ಎಂಬುದಕ್ಕೆ ನಾನೇ ಉದಾಹರಣೆ. ಐದೂವರೆ ಎಕರೆ ತೋಟದಿಂದ ವಾರ್ಷಿಕ 10 ರಿಂದ 14 ಲಕ್ಷ ರೂ. ಆದಾಯ ಗಳಿಸುತ್ತಿದ್ದೇನೆ ಎಂದು ಹೇಳಿದರು.
ಹಣ್ಣು ಬೆಳೆದು ಲಕ್ಷ ರೂ. ಸಂಪಾದನೆ:
ಚಾಮರಾಜನಗರದ ಸಂತೆಮರಹಳ್ಳಿಯ ಹೆಗ್ಗವಾಡಿಪುರದ ಪ್ರಗತಿಪರ ಕೃಷಿಕ ಶಿವಕುಮಾರ್ ಸ್ವಾಮಿ ಮಾತನಾಡಿ, ಕೃಷಿ ಚಟುವಟಿಕೆ ಕಷ್ಟ ಎಂಬ ಮಾತು ಇದೆ. ಆದರೆ, ಇಷ್ಟಪಟ್ಟು ಕೃಷಿ ಮಾಡಿದರೆ ಕಷ್ಟ ಇಲ್ಲ. ಸಾವಯವ ಅಥವಾ ನೈಸರ್ಗಿಕ ಕೃಷಿ ಮಾದರಿ ಅನುಸರಿದರೆ ಹೆಚ್ಚು ಪರಿಶ್ರಮವಿಲ್ಲದೆ ಉತ್ತಮ ಆದಾಯ ಪಡೆಯಬಹುದು ಎಂದು ಸಲಹೆ ನೀಡಿದರು.
ಚಾಮರಾಜನಗರ ಜಿಲ್ಲೆಯ ಬಹುಭಾಗ ಒಣಭೂಮಿ ಹೊಂದಿದೆ. ನೀರಿನ ಕೊರತೆಯಿಂದ ಕೃಷಿ ಚಟುವಟಿಕೆ ಕೈಗೊಳ್ಳುವುದು ಸವಾಲಿನ ವಿಚಾರ. ಈ ಸವಾಲಿಗೆ ನನ್ನ ಅನುಭವದಿಂದಲೇ ಪರಿಹಾರ ಕಂಡುಕೊಂಡಿದ್ದೇನೆ. ಇದಕ್ಕೆ ಪರಿಸರ ಸ್ನೇಹಿಯಾದ ಕೃಷಿ ಚಟು ವಟಿಕೆ ಕೈಗೊಂಡಿದ್ದೇನೆ. ನನ್ನ 5 ಎಕರೆ ತೋಟದಲ್ಲಿ ವಿವಿಧ 70 ಬಗೆಯ ಹಣ್ಣಿನ ಗಿಡಗಳನ್ನು ಬೆಳೆದಿದ್ದೇನೆ. ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ತೋಟವನ್ನು ನಿರ್ವಹಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ತೋಟದಲ್ಲಿ ತೇವಾಂಶ ಉತ್ತಮವಾಗಿದ್ದು, ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲ ಎಂದರು.
ನನ್ನ ತೋಟದಲ್ಲಿ ಬೆಳೆದ ಹಣ್ಣುಗಳಿಗೆ ನಾನೇ ಮಾರುಕಟ್ಟೆ ಕಂಡುಕೊಂಡಿದ್ದೇನೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ಗ್ರಾಹಕ ರಿಗೆ ಹಣ್ಣುಗಳನ್ನು ತಲುಪಿಸುತ್ತಿದ್ದೇನೆ, ಇದರಿಂದ ಕಡಿಮೆ ದರದಲ್ಲಿ ಗ್ರಾಹಕರಿಗೆ ಹಣ್ಣು ದೊರೆಯುತ್ತಿದ್ದು, ನನಗೂ ಹೆಚ್ಚಿನ ಆದಾಯ ದೊರೆಯುತ್ತಿದೆ. ಬೆಂಗಳೂರಿನಲ್ಲಿರುವ ಅಪಾರ್ಟ್‌ಮೆಂಟ್‌ಗಳಿಗೆ ಹಣ್ಣುಗಳನ್ನು ಪೂರೈಕೆ ಮಾಡುತ್ತೇನೆ. ಅಲ್ಲದೆ ಚಾಮರಾಜನಗರ ಜಿಲ್ಲೆಯ ಹಣ್ಣಿನ ಅಂಗಡಿಗಳು, ಜ್ಯೂಸ್ ಅಂಗಡಿಗಳಿಗೆ ಹಣ್ಣುಗಳನ್ನು ನಾನು ಬೈಕ್‌ನಲ್ಲೇ ಪೂರೈಕೆ ಮಾಡುತ್ತೇನೆ. ನಾನು ಕೈಗೊಳ್ಳುತ್ತಿರುವ ಕೃಷಿ ಚಟುವಟಿಕೆಗೆ ಕೃಷಿ ಕೂಲಿ ಕಾರ್ಮಿಕರ ಅವಶ್ಯಕತೆ ತೀರಾ ಕಡಿಮೆ. ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಪಡೆಯಬಹುದು. ಯಾವುದೇ ಐಟಿ, ಬಿಟಿ ಉದ್ಯೋಗಿಗೆ ಕಡಿಮೆ ಇಲ್ಲದಂತೆ ದುಡಿಯುತ್ತಿದ್ದೇನೆ. ಮಾಸಿಕ ಒಂದೂವರೆ ಲಕ್ಷ ರೂ. ಆದಾಯ ಗಳಿಸುತ್ತಿದ್ದೇನೆ. ಈ ಹಣದಲ್ಲಿ 10 ಎಕರೆ ಜಾಗ ಖರೀದಿಸಿದ್ದೇನೆ. ಸಾಕಷ್ಟು ರೈತರು ಕೃಷಿಯಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಆದರೆ, ಅಷ್ಟೇ ಪ್ರಮಾಣದಲ್ಲಿ ಹಣವನ್ನು ಬೈಕ್,ಕಾರು ಖರೀದಿ ಮಾಡಿ ದುಂದುವೆಚ್ಚ ಮಾಡುತ್ತಿದ್ದಾರೆ. ಗಳಿಸಿದ್ದನ್ನು ಕೂಡಿಡುವ ಮನಸ್ಥಿತಿಯನ್ನು ಸಹ ರೈತರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಲ್ಲೂರು ಗ್ರಾಮದ ಪ್ರಗತಿಪರ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಮಾತನಾಡಿ, ಕೊಡಗಿನಲ್ಲಿ ಸಾಕಷ್ಟು ರೈತರು ಕಾಫಿ, ಕರಿಮೆಣಸು, ಅಡಿಕೆ, ತೆಂಗು ಹಾಗೂ ಭತ್ತದ ಬೆಳೆಗೆ ಸೀಮಿತವಾಗಿದ್ದಾರೆ. ಹೀಗಾಗಿ ಕೃಷಿ ಭೂಮಿಯಿಂದ ಹೆಚ್ಚು ಆದಾಯ ಪಡೆಯಲು ಸಾಧ್ಯವಾಗುತ್ತಿಲ್ಲ. ಆದರೆ, ನಾನು ಸಮಗ್ರ ಕೃಷಿ ಪದ್ಧತಿ ಹಾಗೂ ಯಾಂತ್ರೀಕರಣದ ಮೂಲಕ ಕಡಿಮೆ ಪರಿಶ್ರಮ, ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ಪಡೆಯುತ್ತಿದ್ದೇನೆ ಎಂದರು.
ಕೊಡಗಿನಲ್ಲಿ ಕೃಷಿ ಕಾರ್ಮಿಕರ ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ಯಾಂತ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದೇನೆ. ಕೊಡಗಿನ ಭತ್ತದ ಗದ್ದೆಗಳಲ್ಲಿ ತರಕಾರಿ ಬೆಳೆಯಲು ಯಾರು ಆಸಕ್ತಿ ತೋರುವುದಿಲ್ಲ. ಆದರೆ, ನಾನು ಬೇಸಿಗೆ ಸಂದರ್ಭ ತರಕಾರಿ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದೇನೆ. ಇದರ ಜತೆಗೆ ಮೀನು, ಕೋಳಿ, ಹಸು, ಜೇನು ಸಾಕುತ್ತಿದ್ದೇನೆ. ಮೀನಿಗೆ ಉತ್ತಮ ಮಾರುಕಟ್ಟೆ ಇದೆ. ಇದೀಗ 1 ಎಕರೆಯಲ್ಲಿ ಕೆರೆ ನಿರ್ಮಾಣ ಮಾಡಿ ಮೀನು ಸಾಕುತ್ತಿದ್ದೇನೆ. ಇದರ ಜತೆಗೆ ಸರ್ಕಾರದ ಸಹಾಯಧನದೊಂದಿಗೆ 1 ಕೋಟಿ ರೂ. ವೆಚ್ಚದಲ್ಲಿ 4 ಎಕರೆಯಲ್ಲಿ 10 ಕೆರೆಗಳನ್ನು ನಿರ್ಮಾಣ ಮಾಡಿ ಅಲಂಕಾರಿಕ ಮೀನು ಹಾಗೂ ವಿವಿಧ ತಳಿಯ ಮೀನುಗಳನ್ನು ಸಾಕುವ ಯೋಜನೆ ರೂಪಿಸಿದ್ದೇನೆ. ಕಾಫಿ ತೋಟ, ಭತ್ತದ ಗದ್ದೆ ಸೇರಿದ 17 ಎಕರೆ ಜಾಗ ಹೊಂದಿದ್ದೇನೆ. ವಾಣಿಜ್ಯ ಬೆಳೆ ಕಾಫಿ, ಕರಿಮೆಣಸು ಹಾಗೂ ಕೃಷಿ ಚಟುವಟಿಕೆಯಿಂದ ವಾರ್ಷಿಕ 20 ರಿಂದ 30 ಲಕ್ಷ ರೂ. ಆದಾಯ ಗಳಿಸುತ್ತೇನೆ. ಇದನ್ನು ಹೇಳಿದರೆ ಯಾರು ನಂಬಲು ಸಹ ಸಿದ್ಧರಿಲ್ಲ. ರೈತರು ಸಾವಯ ಕೃಷಿಗೆ ಮರಳಿದರೆ ಇದೆಲ್ಲವೂ ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೈತರು ಎರೆಹುಳುವಿನ ಶತ್ರುವಾಗಬೇಡಿ
ಎರೆಹುಳು ರೈತನ ಮಿತ್ರ. ಆದರೆ, ರಾಸಾಯನಿಕ ಕೃಷಿ ಪದ್ಧತಿಯಿಂದ ಎರೆಹುಳುಗಳು ನಾಶವಾಗುತ್ತಿದ್ದು, ಅವುಗಳಿಗೆ ರೈತರೇ ಶತ್ರುಗ ಳಾಗುತ್ತಿದ್ದಾರೆ. ಪ್ರಾರಂಭದಲ್ಲಿ ನಾನು ಸಹ ರಾಸಾಯನಿಕ ಕೃಷಿ ಪದ್ಧತಿ ಅನುಸರಿಸಿದ್ದೇನೆ. ಹಾಗಾಗಿ ನನ್ನ ಹೊಲದಲ್ಲಿ ಸೂಕ್ಷ್ಮಾಣು ಜೀವಿಗಳು, ಎರೆಹುಳು ನಾಶವಾಗಲು ಪ್ರಾರಂಭವಾಯಿತು. ಹೀಗಾಗಿ ಮಣ್ಣಿನಲ್ಲಿ ಹುಳಿ ಅಂಶ ಹೆಚ್ಚಾಗಿ ಫಲವತ್ತತೆ ಕಡಿಮೆ ಆಯಿತು. ಸಾವಯವ ಕೃಷಿ ಪದ್ಧತಿಯಿಂದ ಇದೀಗ ನನ್ನ ಹೊಲದಲ್ಲಿ ಸೂಕ್ಷ್ಮಾಣು ಜೀವಿಗಳು, ಎರೆಹುಳು ಸಮೃದ್ಧವಾಗಿದೆ ಎಂದು ಕೊಡಗಿನ ಸೋಮೇಂಗಡ ಗಣೇಶ್ ತಿಮ್ಮಯ್ಯ ಹೇಳಿದರು.
ಕೃಷಿಕರ ಮಿತ್ರ ಗೂಬೆ
ಎರೆಹುಳು ರೈತನ ಮಿತ್ರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಗೂಬೆ ಕೂಡ ರೈತನ ಮಿತ್ರ. ಗೂಬೆ ಕಂಡರೆ ಅಪಶಕುನ ಎಂದು ತಿಳಿಯುವವರೇ ಹೆಚ್ಚು. ಆದರೆ, ಹಾಸನ ಜಿಲ್ಲೆ ಸಂತೇಶಿವರ ಗ್ರಾಮದ ಬಿ. ಬಸವರಾಜ್ ಅವರ ಕೃಷಿ ಚಟುವಟಿಕೆಯ ಯಶಸ್ಸಿನ ಹಿಂದೆ ಗೂಬೆಗಳ ಪಾತ್ರ ಕೂಡ ಇದೆ. ಬಸವರಾಜ್ ಅವರಿಗೆ ದೊರೆತ ಗೂಬೆ ಮರಿಯೊಂದನ್ನು ರಕ್ಷಿಸಿ ಬೆಳೆಸಿದರು. ಇದೀಗ ಅವರ ತೋಟದಲ್ಲಿ 13 ಗೂಬೆಗಳು ಇವೆ. ಈ ಗೂಬೆಗಳು ಇಲಿಗಳನ್ನು ತಿನ್ನುವ ಹಿನ್ನೆಲೆಯಲ್ಲಿ ಬಸವರಾಜ್ ಬೆಳೆದ ಬೆಳೆಗಳಿಗೆ ರಕ್ಷಣೆ ದೊರೆಯುತ್ತಿದೆ.
ಕೃಷಿಯಲ್ಲಿ ಆದಾಯವಿದೆ
ಕೃಷ್ಣದೇವರಾಯನ ಕಾಲವನ್ನು ಸುವರ್ಣಯುಗ ಎಂದು ಕರೆಯಲಾಗುತ್ತದೆ. ಆ ಸಂದರ್ಭ ಮುತ್ತು ರತ್ನಗಳನ್ನು ಸಂತೆಯಲ್ಲಿ ಮಾರಾಟ ಮಾಡಲಾಗುತಿತ್ತು. ಆ ಕಾಲದಲ್ಲಿ ಯಾವುದೇ ಕಾರ್ಖಾನೆ, ಐಟಿ, ಬಿಟಿ ಇಲ್ಲದೆ ಇದ್ದರೂ ಅಷ್ಟೊಂದು ಸಂಪತ್ತು ಸಂಗ್ರಹವಾ ಗಿದ್ದು ಕೃಷಿಯಿಂದ. ಹಾಗಾಗಿ ಕೃಷಿಯಲ್ಲಿ ನಿಜವಾಗಿಯೂ ಲಾಭವಿದೆ. ವೆಚ್ಚಕ್ಕೆ ಕಾರಣವಾಗುವ ಆಧುನಿಕ ಕೃಷಿ ಪದ್ಧತಿ ಕೈಬಿಟ್ಟು ರೈತರು ಸಾವಯವ ಕೃಷಿ ಪದ್ಧತಿ ಮರಳಬೇಕು. ಕಾರ್ಖಾನೆಯಲ್ಲಿ ಒಂದು ಉತ್ಪನ್ನ ತಯಾರಾಗಲು ಅದರ ಹತ್ತುಪಟ್ಟು ಕಚ್ಚಾ ಸಾಮಗ್ರಿ ಬೇಕು. ಆದರೆ, ಭೂಮಿಯಲ್ಲಿ ಒಂದು ಬೀಜ ಬಿತ್ತಿದರೆ ಹಲವು ಫಲವನ್ನು ಪಡೆಯಬಹುದು ಎಂಬುದು ಹೆಗ್ಗವಾಡಿಯ ಶಿವಕುಮಾರ್ ಸ್ವಾಮಿ ಅವರ ಅಭಿಪ್ರಾಯ.
ಗಿಡಗಳನ್ನು ಸೋಂಬೇರಿ ಮಾಡಬೇಡಿ..!
ಗಿಡ, ಮರಗಳು ಪ್ರಕೃತಿ ದತ್ತವಾಗಿ ಬೆಳೆಯುವ ಗುಣ ಹೊಂದಿರುತ್ತವೆ. ಆದರೆ, ಗಿಡ, ಮರಗಳ ಬುಡಕ್ಕೆ ರೈತರು ನೀರು, ಗೊಬ್ಬರ ತಂದು ಸುರಿಯುತ್ತಾರೆ. ಇದು ವ್ಯಕ್ತಿಯೊಬ್ಬರಿಗೆ ಎಲ್ಲ ಸೌಲಭ್ಯಗಳನ್ನು ಬೆಡ್‌ಗೆ ತಂದು ಕೊಟ್ಟಂತೆ. ಗಿಡ, ಮರಗಳನ್ನು ಸೋಂಬೇರಿ ಮಾಡುವ ಪ್ರವೃತ್ತಿಯನ್ನು ರೈತರು ಕೈ ಬಿಡಬೇಕು. ನನ್ನ ತೋಟದಲ್ಲಿ 7 ವರ್ಷದೊಳಗಿನ ಗಿಡಗಳಿಗೆ ಮಾತ್ರ 15 ದಿನಗಳಿಗೊಮ್ಮೆ ನೀರು ನೀಡುತ್ತೇನೆ. ನೀರು ಇದೆ ಎಂಬ ಕಾರಣಕ್ಕೆ ಗಿಡಗಳಿಗೆ ಪ್ರತಿದಿನ ನೀರು ಕುಡಿಸಿದರೆ ಅವುಗಳು ನೀಡುವ ಫಲ ರುಚಿಯಾಗಿರುವುದಿಲ್ಲ. ಅಲ್ಲದೆ ಗಿಡದ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಹೆಗ್ಗವಾಡಿಯ ಶಿವಕುಮಾರ್ ಸ್ವಾಮಿ.
ಕೃಷಿಯ ಬಗ್ಗೆ ಯುವಜನರಿಗೆ ಕೀಳರಿಮೆ ಇದೆ. ಉನ್ನತ ಶಿಕ್ಷಣ ಪಡೆದ ಯುವಜನರು ಕೃಷಿ ಚಟುವಟಿಕೆ ಕೈಗೊಳ್ಳುವುದಿಲ್ಲ. ಆದರೆ, ಕೃಷಿ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂಬುದನ್ನು ಅರಿತುಕೊಳ್ಳಬೇಕು. ನಗರ ಪ್ರದೇಶಗಳ ಹೋಟೆಲ್‌ಗಳು, ಖಾಸಗಿ ಕಂಪನಿಗಳಲ್ಲಿ ದುಡಿಯುವ ಬದಲು ಯುವಜನರು ತಮ್ಮ ಹೊಲದಲ್ಲಿಯೇ ದುಡಿದು ಉತ್ತಮ ಬದುಕು ರೂಪಿಸಿಕೊಳ್ಳಬ ಹುದು ಎಂದು ಮೈಸೂರು ವಿಶ್ವ ವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಇ.ಸಿ. ನಿಂಗರಾಜ್ ಗೌಡ ಹೇಳಿದರು.
ನಿರ್ವಹಣೆ: ಎಂ.ಆರ್. ಸತ್ಯನಾರಾಯಣ, ಸದೇಶ್ ಕಾರ್ಮಾಡ್. ಚಿತ್ರಗಳು: ಕೆ.ಎಚ್. ಚಂದ್ರು