ಯತ್ನಾಳರ ಕುಂಡಲಿ ಬಿಚ್ಚಿಟ್ಟ ವಿಜುಗೌಡ ಪಾಟೀಲ, ಮನೆತನದ ಹೆಸರು ಧರ್ಮಕಡ್ಲಿ, ಮೂಲ ಮಹಾರಾಷ್ಟ್ರ, ಇವರ ತಂದೆ ಪಾನ್‌ಬೀಡಾ ಮಾರುತ್ತಿದ್ದರಂತೆ...!

YATNAL-VIJUGOUDA PATIL
ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ವಿಜುಗೌಡ ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಸಂತೋಷ ಕುರದಡ್ಡಿ, ಈರಣ್ಣ ರಾವೂರ, ವಿಜಯ ಜೋಶಿ ಇದ್ದಾರೆ.
Published on

ವಿಜಯಪುರ: ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಕುಂಡಲಿ ಬಿಚ್ಚಿಟ್ಟಿರುವ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಯತ್ನಾಳ ಮೂಲತಃ ಮಹಾರಾಷ್ಟ್ರದವರಾಗಿದ್ದು ಇವರ ತಂದೆ ರಾಮನಗೌಡರು ಬೀಡಿ ಮಾರುತ್ತಿದ್ದರು. ಇವರ ಮನೆತನದ ಹೆಸರು ಧರ್ಮಕಡ್ಲಿ ಎಂದು ತಿಳಿಸಿದರು.

ಯತ್ನಾಳರ ಅಜ್ಜನ ಹೆಸರು ಬಸನಗೌಡ. ಮೂಲತಃ ಮಹಾರಾಷ್ಟ್ರದ ಜತ್ತ ತಾಲೂಕಿನ ಕಾಗನೇರಿಯವರಾದ ಇವರ ಪುತ್ರ ರಾಮನಗೌಡ ಪಾನ್‌ಶಾಪ್ ಇರಿಸಿಕೊಂಡಿದ್ದರು. ತಂದೆ ತೀರಿಕೊಂಡಾಗ ಹೊಡೆದಾಡಿ ಅವಮಾನಿಸಿ ಇವರು ಯಾವ ಸೀಮೆ ಪಾಟೀಲ? ಎಲ್ಲಿದೆ ಇವರ ಗೌಡಕಿ? ಗೌಡಕಿ ಪದದ ಅರ್ಥವಾದರೂ ಗೊತ್ತೆ? ಬನ್ನಿ ಗೌಡಕಿ ಎಂದರೆ ಹೇಗಿರುತ್ತದೆ ಎಂದು ನಾವು ತೋರಿಸುತ್ತೇವೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಸವಾಲೆಸೆದರು.

ನಮ್ಮ ತಂದೆ ನಗರಸಭೆ ಅಧ್ಯಕ್ಷರಾಗಿ ಮಾಡಿದ ಕಾರ್ಯ ಇನ್ನೂ ಚಿರಸ್ಥಾಯಿಯಾಗಿದೆ. ನಾವೆಲ್ಲ ನಮ್ಮ ಅಪ್ಪಗೆ ಹುಟ್ಟಿದ್ದೇವೆ. ಅಂತೆಯೇ ನನ್ನಣ್ಣ ರಾಜೀನಾಮೆ ನೀಡಿ ಏನೆಂದು ಸಾಬೀತು ಪಡಿಸಿದ್ದಾನೆ. ಪಕ್ಷ ಬೇರೆಯಾದರೂ ಮನೆತನದ ವಿಚಾರಕ್ಕಾಗಿ ನಾನು ಈ ಮಾತು ಹೇಳಲೇಬೇಕಿದೆ. ನಮ್ಮ ಮನೆತನದ ಹೆಸರು ಹಚಡದ ಎಂದು ಹೇಳುವ ಯತ್ನಾಳ ತನ್ನ ಇತಿಹಾಸ ಅರಿಯಲಿ. ಅವರ ತಂದೆ ಬಗ್ಗೆ ನಾನು ಮಾತನಾಡಲ್ಲ. ಅವರ ಬಗ್ಗೆ ನಮಗೆ ಗೌರವವಿದೆ ಎನ್ನುತ್ತಲೇ ಯತ್ನಾಳರ ವಿರುದ್ಧ ಚಾಟಿ ಬೀಸಿದ ವಿಜುಗೌಡರು, ಈ ಯತ್ನಾಳರಂತೆ ರಾಮನಗೌಡರ ಹೆಸರಲ್ಲಿ ಡಬ್ಬಿ ಇಟ್ಟು ನಾವು ರೊಕ್ಕ ಎತ್ತಲ್ಲ, ದನದ ಹೆಸರಲ್ಲಿ ರೊಕ್ಕ ಎತ್ತಲ್ಲ, ಇಡೀ ರಾಜ್ಯದಲ್ಲಿಯೇ ನಮ್ಮ ಮನೆತನಕ್ಕೆ ಹೆಸರಿದೆ ಎಂದರು.

ಯತ್ನಾಳಗೆ ರಾಜಕೀಯ ಜೀವನ ಕೊಟ್ಟಿದ್ದೇ ನಮ್ಮ ಮನೆತನ. ನಮ್ಮ ತಂದೆಯ ಕಾಲಿನ ಮಣ್ಣು ಸಹ ನೀವಾಗಲ್ಲ. 1976 ರಲ್ಲಿ ನಮ್ಮ ತಂದೆ ತೀರಿಕೊಂಡಾಗ ಕುಡಿಯಲು ಹನಿ ನೀರು ಸಹ ಸಿಕ್ಕಿರಲಿಲ್ಲ. ಅಷ್ಟು ಜನ ಸೇರಿದ್ದರು. ಇದು ಇತಿಹಾಸ. ಅಂಥ ನಮ್ಮ ತಂದೆ ಬಗ್ಗೆ ಇನ್ನೊಂದು ಮಾತನಾಡಿದರೂ ಸುಮ್ಮನಿರಲ್ಲ. ತಾಕತ್ ಇದ್ದರೆ ಎದುರು-ಬದುರು ಬಂದು ಮಾತನಾಡು ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯಲ್ಲಿ ಯತ್ನಾಳ ಹೆಸರು ತೆಗೆಯಬಾರದು. ಭಾರತೀಯ ಜನತಾ ಪಕ್ಷ ಸಂಸ್ಕೃತಿ, ಸಂಸ್ಕಾರ ಉಳ್ಳದ್ದು. ತತ್ವ, ಸಿದ್ದಾಂತ ದುರುಪಯೋಗ ಪಡಿಸಿಕೊಂಡ ಹಿನ್ನೆಲೆ ಹೊರಹಾಕಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಯತ್ನಾಳರಿಗೆ ಯಾವ ಮಾನ ಮರ್ಯಾದೆ ಇದೆಯಾ? ಈತನ ಹೆಸರು ಹೇಳಿದರೆ ಪಾದದಿಂದ ತಲೆಯವರೆಗೂ ಉರಿಯುತ್ತದೆ. ಬಬಲೇಶ್ವರದಲ್ಲಿ ಬಿಜೆಪಿ ಸೋಲಲು ಕಾರಣವೇ ಈ ಯತ್ನಾಳ. ಕಾಂಗ್ರೆಸ್‌ನ ಅಭ್ಯರ್ಥಿ ಎಂ.ಬಿ. ಪಾಟೀಲರ ಜೊತೆ ಹೊಂದಾಣಿಕೆ ಇಟ್ಟುಕೊಂಡ ವ್ಯಕ್ತಿ ಈತ. ಮಹಾನಗರ ಪಾಲಿಕೆಯಲ್ಲಿಯೂ ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯದಂತೆ ಮಾಡಿದ್ದರು ಎಂದು ವಿಜುಗೌಡ ಹರಿಹಾಯ್ದರು.

1994ರಲ್ಲಿ ಅಟಲ್‌ಬಿಹಾರಿ ವಾಜಪೇಯಿ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಯತ್ನಾಳ ಅದಕ್ಕೂ ಮುನ್ನ ಒಂದು ಹಳೆಯ ಟ್ರಕ್ ಇರಿಸಿಕೊಂಡಿದ್ದರು. ತಿರುಗಾಡಲು ವಾಹನವೇ ಇಲ್ಲದಾಗ ಸರದೇಶಪಾಂಡೆ ಎಂಬ ನೌಕರ ಸಹಾಯ ಮಾಡಿದ್ದನು. ಸ್ಕಾರ್ಪಿಯೋ ಗಾಡಿ ಕೊಡಿಸಿದ್ದರು. ಇರಲು ಜಾಗ ಕೊಟ್ಟಿದ್ದರು. ಮುಂದೆ ಆ ಅಧಿಕಾರಿ ಅಮಾನತ್ತಾದರು. ಭೀಮಾಶಂಕರ ಹದನೂರ ಆದಿಯಾಗಿ ಅನೇಕ ಬೆಂಬಲಿಗರು ಸಹಾಯ ಮಾಡಿದ್ದನ್ನು ಈ ಯತ್ನಾಳ ಮರೆತರು. ಮುಂದೆ ಸಿದ್ಧೇಶ್ವರ ಬ್ಯಾಂಕ್ ನಿರ್ದೇಶಕರಾದರು. ಆ ಬ್ಯಾಂಕ್ ಸೂಪರ್ ಸೀಡ್ ಮಾಡಿಸಿ ಡಿವಿಡೆಂಟ್ ಫಂಡ್ ಒಯ್ದು ಬೇರೆ ಕಡೆ ಹಾಕಿದರು. ಈಗ 1.5 ಕೋಟಿ ರೂಪಾಯಿ ಕಾರಲ್ಲಿ ತಿರುಗಾಡುವ ಯತ್ನಾಳಗೆ ಎಲ್ಲಿಂದ ಹಣ ಬಂತು? ಏನು ಮಾಡಿ ಗಳಿಸಿದ? ದೇವರು ಕೊಟ್ಟಿದ್ದನ್ನು ಮುಚ್ಚಿಕೊಂಡು ತಿನ್ನುವುದನ್ನು ಕಲಿಯಲಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಸಂತೋಷ ಕುರದಡ್ಡಿ, ಈರಣ್ಣ ರಾವೂರ, ವಿಜಯ ಜೋಶಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net