

ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಮದ್ದೂರಮ್ಮ ದೇವಾಲಯ ಆವರಣದಲ್ಲಿ ಸಿಡಿರಾಯಣ್ಣ ಮದ್ದೂರಮ್ಮನ ಸಾಕು ಮಗ) ಉತ್ಸವ ಭಕ್ತರ ಸಮ್ಮುಖದಲ್ಲಿ ಗುರುವಾರ ಸಡಗರ ಮತ್ತು ಸಂಭ್ರಮದಿಂದ ನೆರವೇರಿತು.
ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಸಿಡಿರಾಯಣ್ಣನ ಉತ್ಸವದಲ್ಲಿ ಭಾಗವಹಿಸುವ ಮೂಲಕ ಧನ್ಯತಾಭಾವ ಮೆರೆದರು.
ಮಕ್ಕಳಾಗದವರು ಸಿಡಿರಾಯಣ್ಣನ ಉತ್ಸವದಲ್ಲಿ ಪಾಲ್ಗೊಂಡು ಮಕ್ಕಳಾಗುವಂತೆ ಹರಕೆ ಕಟ್ಟಿಕೊಳ್ಳುತ್ತಾರೆ. ಅಲ್ಲದೆ ದಂಪತಿ ತಮ್ಮ ಮಕ್ಕಳನ್ನು ಕರೆತಂದು ಸಿಡಿ ಆಡಿಸುವ ಮೂಲಕ ಹರಕೆ ತೀರಿಸುತ್ತಾರೆ. ಸಿಡಿ ಉತ್ಸವದಲ್ಲಿ ಭಾಗವಹಿಸುವುದರಿಂದ ಮಕ್ಕಳಿಗೆ ಒಳ್ಳೆಯದಾ ಗುತ್ತದೆ ಮತ್ತು ಇಷ್ಟಾರ್ಥ ಈಡೇರುತ್ತದೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ಸಿಡಿರಾಯಣ್ಣ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಸಂಜೆ 4 ಗಂಟೆಗೆ ಮಠಮನೆಯಿಂದ ಭಕ್ತರು ಬಾಯಿ ಬೀಗ ಸೇವೆ ಸಮೇತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದರು. ಸಿಡಿರಾಯಣ್ಣನ ಉತ್ಸವ ಬಂದಾಗ ಸಿಡಿರಾಯಣ್ಣ ಮೇಲೆ ಪುರಿಯನ್ನು ಹಾಕಿ ವಿಶೇಷ ಪೂಜೆ ಸಲ್ಲಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಮದ್ದೂರಮ್ಮನ ದೇವಾಲಯ ಆವರಣದಲ್ಲಿ ಸಿಡಿರಾಯಣ್ಣನ ಉತ್ಸವ ಅದ್ದೂರಿಯಾಗಿ ನೆರವೇರಿತು.
ಉತ್ಸವದಲ್ಲಿ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಭಕ್ತರಿಗೆ ಮಜ್ಜಗೆ, ಪಾನಕ, ಪ್ರಸಾದ ವಿತರಣೆ ಮಾಡಿದರು.
ಮೇ 3ರಂದು ಸಂಜೆ 4 ಗಂಟೆಗೆ ಮದ್ದೂರಮ್ಮನವರಿಗೆ ಓಕಳಿ ಸೇವೆ, ಸಂಜೆ 6.30ಕ್ಕೆ ಉಯ್ಯಲೆ ಉತ್ಸವ, ರಾತ್ರಿ 9 ಗಂಟೆಗೆ ಮುತ್ತಿನ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಮೇ 4ರಂದು ಸಂಜೆ 4 ಗಂಟೆಗೆ ಮದ್ದೂರಮ್ಮನವರಿಗೆ ಎಣ್ಣೆ ಮಜ್ಜನ ಸೇವೆ, ಪುಷ್ಪಾಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ರಾತ್ರಿ 9 ಗಂಟೆಗೆ ಮೂಲ ದೇವಸ್ಥಾನದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಮಠಮನೆ ತಲುಪುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.