ವಿಜೃಂಭಣೆಯ ಗಣಪತಿ ಮೂರ್ತಿ ವಿಸರ್ಜನಾ ಮಹೋತ್ಸವ

ವಿಜೃಂಭಣೆಯ ಗಣಪತಿ ಮೂರ್ತಿ ವಿಸರ್ಜನಾ ಮಹೋತ್ಸವ
Published on

ಚನ್ನರಾಯಪಟ್ಟಣ: ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯು ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ನವಗ್ರಹ ಗಣಪತಿ ಮೂರ್ತಿಯ ವಿಸರ್ಜನಾ ಮಹೋತ್ಸವವು ವಿವಿಧ ಕಲಾ ತಂಡಗಳ ಆಕರ್ಷಣೀಯ ಮೆರವಣಿಗೆ ಮೂಲಕ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ಶಾಸಕ ಸಿ.ಎನ್.ಬಾಲಕೃಷ್ಣ ವಿಸರ್ಜನ ಮಹೋತ್ಸವಕ್ಕೆ ಚಾಲನೆ ನೀಡಿದರು. ವಿಶೇಷ ಪೂಜಾ ಕೈಂಕರ್ಯದ ನಂತರ ಪಟ್ಟಣದ ಗಣಪತಿ ಪೆಂಡಾಲಿನಿಂದ ವಿಸರ್ಜನಾ ಮೆರವಣಿಗೆ ಆರಂಭವಾಯಿತು. ಕಲಾವಿದ ರವೀಂದ್ರ ನಿರ್ಮಿಸಿರುವ ವಿಶೇಷವಾದ ದರ್ಬಾರ್ ಪುಷ್ಪ ಮಂಟಪದಲ್ಲಿ ಗಣಪತಿ ಮೂರ್ತಿಯನ್ನು ಕೂರಿಸಿ, ಮಹಿಳಾ ತಂಡದಿಂದ ಮಂಗಳವಾದ್ಯ, ಕಾಡು ಸಿದ್ದೇಶ್ವರ ಮಠದ ಆನೆ, ಚಾಮುಂಡೇಶ್ವರಿ ರಥ, ಕೇರಳದ ಚಂಡೆ ವಾದ್ಯ, ಕೇರಳದ ನರ್ತಕಿಯರು, ಕೇರಳದ ಯಕ್ಷಗಾನ, ಕೇರಳದ ಹುಲಿ, ಪೂಜಾ ಕುಣಿತ, ವೀರಭದ್ರನ ಕುಣಿತ, ಭದ್ರಕಾಳಿ ನರ್ತನ, ನಂದಿ ಧ್ವಜ, ಸಾಗರದ ಡೊಳ್ಳು ಕುಣಿತ, ಓಂ ಶಾಂತಿ ಶಿವನ ದರ್ಶನ, ಕೋಟೆ ಮಾರಮ್ಮ, ಶ್ರೀ ಕೋಟೆ ಚಂದ್ರಮೌಳೇಶ್ವರ, ಶ್ರೀ ಮೇಗಲಗೇರಿ ಕಾಡು ಆಂಜನೇಯ ಉತ್ಸವಮೂರ್ತಿಗಳು, ರೋಡ್ ಆರ್ಕೆಸ್ಟ್ರಾ, ತಮಟೆ ವಾದ್ಯ, ತಾಲೂಕಿನ ಬಜನಾ ತಂಡವರಿಂದ ಭಜನೆ ಮತ್ತು ಕರಾವಳಿ ಕುಣಿತ, ಸೃಷ್ಟಿ ಆರ್ಟ್ಸ್ ತಂಡದಿಂದ ಗೊಂಬೆ ಕುಣಿತ, ಕೀಲು ಕುದುರೆ ಸೇರಿದಂತೆ ವಿವಿಧ ಜಾನಪದ ಕಲಾವಿದ ತಂಡ ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮ ಮೆರವಣಿಗೆಗೆ ಮೆರುಗು ನೀಡಿದವು. ಮೆರವಣಿಗೆಯುದ್ದಕ್ಕೂ ಯುವಕರು ಹೆಜ್ಜೆಹಾಕಿ ಸಂಭ್ರಮಿಸಿದರು.

ಭಾನುವಾರ ಪೆಂಡಾಲ್‌ನಲ್ಲಿ ಹೋಮ-ಹವನ ನೆರವೇರಿಸಲಾಯಿತು. ಪೂಜಾ ಕೈಂಕರ್ಯದಲ್ಲಿ ಜಿ.ಪಂ. ಮಾಜಿ ಸದಸ್ಯರಾದ ಕುಸುಮಾ ಬಾಲಕೃಷ್ಣ, ಪುರಸಭಾ ಅಧ್ಯಕ್ಷ ಕೆ.ಎನ್.ಬನಶಂಕರಿ ರಘು, ಪುರಸಭಾ ಸದಸ್ಯರು ಭಾಗಿಯಾಗಿದ್ದರು. ಗಣಪತಿ ಮೂರ್ತಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ವೇದಬ್ರಹ್ಮ ಬಾಲಕೃಷ್ಣ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಮಧ್ಯಾಹ್ನ ಭಕ್ತರಿಗೆ ಅನ್ನದಾನ ಆಯೋಜಿಸಲಾಗಿತ್ತು.

ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎನ್. ಅಶೋಕ್, ಉಪಾಧ್ಯಕ್ಷ ನಂಜಡ ಮೈಮ್, ಕಾರ್ಯದರ್ಶಿ ಸಿ.ವೈ.ಸತ್ಯನಾರಾಯಣ, ಖಜಾಂಚಿ ಸಿ.ಎಸ್.ಮನೋಹರ್, ಸಹ ಕಾರ್ಯದರ್ಶಿ ಮಹದೇವ್, ಸಹ ಖಜಾಂಚಿ ಲಕ್ಷ್ಮೀನಾರಾಯಣ ಗುಪ್ತ, ಪದಾಧಿಕಾರಿಗಳು ಹಾಗೂ ಸಿ.ಬಿ.ಗಂಗಾಧರ್, ಶಿವಾನಂದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net