

ಬೆಳ್ತಂಗಡಿ: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅದರಲ್ಲೂ ಪತ್ರಿಕೆಗಳ ಮುಖಾಂತರ ಸಿಗುವ ಅವಕಾಶಗಳು ಬಹಳ ಅಮೂಲ್ಯವಾದುದು. ಅವುಗಳ ಸದುಪಯೋಗ ಬಹಳ ಮುಖ್ಯ ಎಂದು ಉಜಿರೆಯ ಉದ್ಯಮಿ ಪ್ರಸಾದ್ ಹೇಳಿದರು.
ಉಜಿರೆ ಎಸ್‌ಡಿಎಂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಶನಿವಾರ ವಿಜಯವಾಣಿ ವಿದ್ಯಾರ್ಥಿ ಮಿತ್ರ ಮತ್ತು ದಿಗ್ವಿಜಯ ವಾಹಿನಿ ಆಶ್ರಯದಲ್ಲಿ ಆಯೋಜಿಸಿದ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಪ್ರಾಂಶುಪಾಲ ಪ್ರೊ.ದಿನೇಶ್ ಚೌಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಜಾಲತಾಣಗಳು ಇಂದು ಜಗತ್ತನ್ನು ಆಳುತ್ತಿವೆ. ಜಾಲತಾಣಗಳ ಧಾವಂತದಿಂದ ಸುದ್ದಿಗಳ ಮೌಲ್ಯ ಕಡಿಮೆಯಾಗುತ್ತಿರುವುದು ಖೇದಕರ ಎಂದರು.
ವಿಜಯವಾಣಿ ಮಂಗಳೂರು ಬ್ಯೂರೋ ಮುಖ್ಯಸ್ಥ ಸುರೇಂದ್ರ ಎಸ್.ವಾಗ್ಲೆ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಮಹಾವೀರ, ವಿಜಯವಾಣಿ ಬೆಳ್ತಂಗಡಿ ವರದಿಗಾರ ಮನೋಹರ ಬಳಂಜ, ಪ್ರಸರಣ ವಿಭಾಗದ ಸೂರಜ್ ಪೈ, ಗಿರೀಶ್ ಬನ್ನೂರು ಉಪಸ್ಥಿತರಿದ್ದರು. ಉಪನ್ಯಾಸಕ ಸುಭಾಷ್ ರಾವ್ ಬೋಳೂರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ವಿಜಯವಾಣಿ ಹಿರಿಯ ಉಪಸಂಪಾದಕ ಮೋಹನದಾಸ್ ಮರಕಡ ವಂದಿಸಿದರು.
ಬಹುಮಾನ ವಿಜೇತರು:
ಫೈನಲ್‌ನಲ್ಲಿ ಭಾಗವಹಿಸಿದ ಏಳು ತಂಡಕ್ಕೆ ಏಳು ನದಿಗಳಾದ ನೇತ್ರಾವತಿ, ಕುಮಾರಧಾರಾ, ಪಯಸ್ವಿನಿ, ನಂದಿನಿ, ಫಲ್ಗುಣಿ, ಶಾಂಭವಿ, ಸೌಪರ್ಣಿಕಾ ಹೆಸರು ನೀಡಲಾಗಿತ್ತು. ಫಲ್ಗುಣಿ ತಂಡದ ಮದನ್ ಮತ್ತು ಅಲ್ಸ್ಟೈನ್ ಫನಾರ್ಂಡಿಸ್ ಪ್ರಥಮ, ನಂದಿನಿ ತಂಡದ ವೇಣು ಮತ್ತು ಅಲೆನ್ ಜೋಶಿ ದ್ವಿತೀಯ, ಕುಮಾರಧಾರಾ ತಂಡದ ಅಚಲ್ ಪೂಜಾರಿ, ಭುವನ್ ಜೈನ್ ತೃತೀಯ ಬಹುಮಾನ ಪಡೆದರು.