

ವಿಜಯವಾಣಿ ಸುದ್ದಿಜಾಲ ವಿಜಯಪುರ
ಮಕ್ಕಳು ಬೆಳವಣಿಗೆಯಾದಂತೆ ಅವರಲ್ಲಿ ಪ್ರತಿಭೆಯೂ ಬೆಳೆಯಲು ಪ್ರಾರಂಭವಾಗಲಿದ್ದು, ಅವರಲ್ಲಿರುವ ಪ್ರತಿಭೆ ಹೊರ ತರುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ ಎಂದು ಉರ್ದು ಇಸಿಒ ರಾಹತ್ ಉನ್ನೀಸಾ ತಿಳಿಸಿದರು.
ಪಟ್ಟಣದ ದೇವನಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಬಾಲಕರ ಪಾಠಶಾಲೆಯಲ್ಲಿ ಜಿಪಂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳ ವತಿಯಿಂದ ಹಮ್ಮಿಕೊಂಡಿದ್ದ ದೇವನಹಳ್ಳಿ ತಾಲೂಕು ಸಿಆರ್‌ಸಿ ಉರ್ದು ವಿಜಯಪುರ ಕ್ಲಸ್ಟರ್‌ನ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಲವು ಮಕ್ಕಳಲ್ಲಿ ಬಹಳಷ್ಟು ಪ್ರತಿಭೆಯಿದ್ದರೂ ತಾವು ಸಾಧಿಸುತ್ತೇವೆಯೋ, ಇಲ್ಲವೋ ಎಂಬ ಕೀಳರಿಮೆಯಿಂದ ಮುಂದೆ ಬರುವುದಿಲ್ಲ. ಅಂತವರನ್ನು ಗುರುತಿಸಿ, ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸಿದರೆ ಹೊಸ ಪ್ರತಿಭಾವಂತರು ಬೆಳಕಿಗೆ ಬರಲು ಸಾಧ್ಯವಾಗುತ್ತದೆ. ಇಂಥ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.
ಸಿಆರ್‌ಪಿ ಕೃಷ್ಣರಾಮ್ ಮಾತನಾಡಿ, ಸ್ಪರ್ಧೆಗಳಲ್ಲಿ ಭಾಗವಹಿಸುವುದು ಯಶಸ್ಸಿನ ಲಕ್ಷಣ. ಸೋಲು- ಗೆಲುವಿನ ಚಿಂತೆ ಬಿಟ್ಟು, ಪ್ರತಿಯೊಬ್ಬರೂ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದರು.
ವಿಜಯಪುರ ಕ್ಲಸ್ಟರ್‌ನ 8 ಶಾಲೆಗಳ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಮದ್, ನಾತ್, ಗೀತೆಗಳು, ಡ್ರಾಯಿಂಗ್, ಫ್ಯಾನ್ಸಿ ಡ್ರೆಸ್ ಮತ್ತು ಇತರ ಸ್ಪರ್ಧಿಗಳಲ್ಲಿ ಭಾಗವಹಿಸಿದ್ದರು.