

ವಿಜಯವಾಣಿ ಸುದ್ದಿಜಾಲ ವಿಜಯಪುರ
ಪಟ್ಟಣದ ಪ್ರಸಿದ್ಧ ಶುಕ್ರವಾರ ಸಂತೆ ನಡೆಯುವ ಸ್ಥಳ ಅವ್ಯವಸ್ಥೆಯ ಆಗರವಾಗಿದ್ದು ‘ಇದು ಸಂತೆಯಲ್ಲ ಹಾಳುಕೊಂಪೆ’ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಕುಡಿಯುವ ನೀರಿಲ್ಲ, ಶೌಚಗೃಹ ವ್ಯವಸ್ಥೆ ಇಲ್ಲ, ವಿದ್ಯುತ್ ದೀಪಗಳಿಲ್ಲ, ಸ್ವಚ್ಛತೆ ಎಂಬುದಕ್ಕೆ ಇಲ್ಲಿ ಅರ್ಥವೇ ಇಲ್ಲ. ಹೀಗೆ ಇಲ್ಲಗಳ ಆಗರವಾಗಿರುವ ಶುಕ್ರವಾರ ಸಂತೆ ಸ್ಥಳದಿಂದ ಕಾಯಂ ಆಗಿ ಸುಂಕ ಪಡೆಯುವ ಪುರಸಭೆ ಅಧಿಕಾರಿಗಳು ಮೂಲಸೌಕರ್ಯ ಕಲ್ಪಿಸುವ ಕಡೆ ಗಮನ ನೀಡುತ್ತಿಲ್ಲ.
ಆಸ್ಪತ್ರೆ ಆವರಣ ತರಕಾರಿ ಗೋದಾಮು:ಸಂತೆಗೆ ಬರುವ ತರಕಾರಿ ದಾಸ್ತಾನುಗಳನ್ನು ಸಮರ್ಪಕವಾಗಿ ಶೇಖರಿಸಲು ಜಾಗದ ವ್ಯವಸ್ಥೆ ಇಲ್ಲದೆ ಸಂತೆ ಮುಂಭಾಗದಲ್ಲಿನ ಆಸ್ಪತ್ರೆ ಮುಂಭಾಗದ ಸ್ಥಳವನ್ನೇ ಆಕ್ರಮಿಸಿಕೊಳ್ಳಲಾಗಿದೆ. ಇದರಿಂದ ಆಸ್ಪತ್ರೆಗೂ ತೊಂದರೆಯಾಗಿದೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಪ್ರಶ್ನಿಸಿದರೆ ಹರಾಜುದಾರರು ಸಿಬ್ಬಂದಿ ವಿರುದ್ಧವೇ ತಿರುಗಿಬೀಳುವ ಪ್ರಸಂಗ ಸಾಮಾನ್ಯವಾಗಿವೆ.
ರಸ್ತೆ ಬದಿ ವ್ಯಾಪಾರ: ಇಲ್ಲಿನ ಅವ್ಯವಸ್ಥೆಯಿಂದಾಗಿ ಹಲವು ವ್ಯಾಪಾರಿಗಳು ಸಂತೆ ಜಾಗ ಬಿಟ್ಟು ರಸ್ತೆ ಬದಿಯಲ್ಲಿ ವ್ಯಾಪಾರ ಶುರುವಿಟ್ಟುಕೊಂಡಿದ್ದಾರೆ. ಇದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ಸಾರ್ವಜನಿಕರಿಗೂ ಕಿರಿಕಿರಿಯಾಗುತ್ತಿದೆ. ಸಂತೆ ಮೈದಾನದಲ್ಲಿ ಸ್ಥಳಾವಕಾಶವಿದ್ದರೂ ಅವ್ಯವಸ್ಥೆ ಕಾರಣದಿಂದ ವ್ಯಾಪಾರಿಗಳು ರಸ್ತೆ ಬದಿ ಅಂಗಡಿಗಳನ್ನು ಆರಂಭಿಸುತ್ತಿದ್ದಾರೆ.
ಅನೈರ್ಮಲ್ಯ ವಾತಾವರಣ: ಸಂತೆ ಆವರಣ ಸಂಪೂರ್ಣ ಅನೈರ್ಮಲ್ಯದಿಂದ ಕೂಡಿದೆ. ಗಲೀಜಾಗಿದೆ, ಕಸ-ಕಡ್ಡಿಗಳ ರಾಶಿ ಕಣ್ಣಿಗೆ ರಾಚುತ್ತಿದೆ, ಅಲ್ಲದೆ ಈ ಭಾಗದಲ್ಲಿ ಶೌಚಗೃಹದ ವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಹಕರು, ವ್ಯಾಪಾರಿಗಳು ಸಂತೆ ಆವರಣವನ್ನೇ ಮೂತ್ರ ವಿಸರ್ಜನೆಯ ಜಾಗ ಮಾಡಿಕೊಂಡಿದ್ದಾರೆ. ಇದರ ಗಬ್ಬುವಾಸನೆಗೆ ಮೂಗುಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಎದುರಾಗಿದೆ.
ಸುಂಕ ವಸೂಲಿಯಲ್ಲೂ ಧೋಖಾ: ಪುರಸಭೆಯಿಂದ ಸಂತೆ ಹರಾಜು ಸಂದರ್ಭದಲ್ಲಿ ಅಂಗಡಿಗೆ ಇಂತಿಷ್ಟು, ಮೂಟೆ ತರಕಾರಿಗೆ ಇಷ್ಟು, ಹೀಗೆ ಪ್ರತಿ ವ್ಯಾಪಾರಕ್ಕೂ ಇಂತಿಷ್ಟು ಸುಂಕ ನಿಗದಿಯಾಗಿದೆ. ಆದರೆ ಸಂತೆಯಲ್ಲಿನ ಸುಂಕದ ವಿವರ ನಮೂದಿಸಿಲ್ಲ. ಅಧಿಕಾರಿಗಳು ಮನಸ್ಸಿಗೆ ಬಂದಂತೆ ಹಣ ವಸೂಲಿ ಮಾಡುತ್ತಿರುವ ಬಗ್ಗೆ ವ್ಯಾಪಾರಸ್ಥರಿಂದ ಆರೋಪ ವ್ಯಕ್ತವಾಗಿದೆ. ಸಂತೆಗೆ ವ್ಯಾಪಾರಕ್ಕೆ ಬರುವ ರೈತರ ಬಳಿ ಯಾವುದೇ ಸುಂಕ ವಸೂಲು ಮಾಡಬಾರದೆಂಬ ನಿಯಮ ಇದ್ದರೂ ಅಧಿಕಾರಿಗಳು ದೌರ್ಜನ್ಯದಿಂದ ರೈತರ ಬಳಿ ಸುಂಕ ವಸೂಲು ಮಾಡುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಗಮನ ನೀಡಬೇಕಿದೆ.
ಮುನಿರಾಜು, ರೈತ ದೇವನಹಳ್ಳಿ
ಇದು ಹೆಸರಿಗೆ ಸಂತೆಯ ಮೈದಾನವಾಗಿದೆ, ಸಂತೆಯಲ್ಲಿ ದುಬಾರಿ ಸುಂಕ ಕಟ್ಟಿ ಕುಳಿತುಕೊಳ್ಳುವ ನಾವು ಯಾವುದೇ ವ್ಯಾಪಾರವಿಲ್ಲದೆ ಪರದಾಡುತ್ತಿದ್ದೇವೆ. ಅದೇ ದೇವನಹಳ್ಳಿ ರಸ್ತೆ, ಹಳೇ ಪುರಸಭಾ ಕಾರ್ಯಾಲಯದ ರಸ್ತೆ, ಸುಬ್ಬಮ್ಮ ಚೆನ್ನಪ್ಪ ಸಮುದಾಯ ಭವನದ ರಸ್ತೆಗಳ ಎರಡೂ ಬದಿಗಳಲ್ಲಿ ಬೀದಿಬದಿ ವ್ಯಾಪಾರಿಗಳು ಚೆನ್ನಾಗಿ ವಹಿವಾಟು ನಡೆಸುತ್ತಿದ್ದಾರೆ. ನಾವು ಪುರಸಭೆ ನಿಗದಿಪಡಿಸಿದ ಜಾಗದಲ್ಲಿ ಕುಳಿತು ವ್ಯಾಪಾರ ಮಾಡಿದರೆ ನಷ್ಟವಾಗುತ್ತಿದೆ.
ವಿನಯ್, ತರಕಾರಿ ವ್ಯಾಪಾರಿ