ಬಾಡಿಗೆ ನೀಡದ ಮಳಿಗೆಗಳಿಗೆ ಬೀಗ

vijayvapura lockout
Published on

ವಿಜಯವಾಣಿ ಸುದ್ದಿಜಾಲ ವಿಜಯಪುರ
ಪಟ್ಟಣದ ಸಂತೆ ಮೈದಾನ, ಹೊಸ ಬಸ್ ನಿಲ್ದಾಣ, ಕೋಲಾರ ರಸ್ತೆ, ಪಂಪ್‌ಹೌಸ್ ಹಿಂಭಾಗ, ಮಂಡಿಬೆಲೆ ರಸ್ತೆಯಲ್ಲಿ ಪುರಸಭೆಯಿಂದ ಹರಾಜಿನ ಮೂಲಕ ಪಡೆದಿರುವ ವಾಣಿಜ್ಯ ಮಳಿಗೆಗಳಿಗೆ ಬಾಡಿಗೆ ಪಾವತಿಸಿದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಬೀಗ ಜಡಿದರು.
ಪುರಸಭೆ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಸಿ.ತ್ಯಾಗರಾಜ್ ಮಾತನಾಡಿ, ಹರಾಜಿನಲ್ಲಿ ಪಡೆದ ಮಳಿಗೆಗಳಿಗೆ ಪ್ರತಿ ತಿಂಗಳ 10ರೊಳಗೆ ಪುರಸಭೆಯಿಂದ ಚಲನ್ ಪಡೆದು ಬ್ಯಾಂಕ್‌ನಲ್ಲಿ ಬಾಡಿಗೆ ಹಣ ಪಾವತಿಸಬೇಕು. ಹರಾಜಿನಲ್ಲಿ ಪಡೆದ ಮಳಿಗೆಯನ್ನು ಬೇರೆಯವರಿಗೆ ವರ್ಗಾವಣೆ ಮಾಡುವಂತಿಲ್ಲ. ಬಾಡಿಗೆ ಹಣವನ್ನು 6 ತಿಂಗಳ ಒಳಗೆ ಪಾವತಿಸದಿದ್ದಲ್ಲಿ ಮುಂಗಡ ಹಣ ಮತ್ತು ಕರಾರು ಪತ್ರ ವಜಾ ಮಾಡಿ ಕ್ರಮಕೈಗೊಳ್ಳಲಾಗುತ್ತದೆ. ಹರಾಜಿನಲ್ಲಿ ಮಳಿಗೆ ಪಡೆದ ಮಾಲೀಕರು ಸರ್ಕಾರದಿಂದ ಬರುವ ಸುತ್ತೋಲೆ ಪಾಲಿಸುವಂತೆ ಷರತ್ತಿನಲ್ಲಿ ತಿಳಿಸಲಾಗಿದೆ. ಆದರೆ ಕೆಲ ವಾಣಿಜ್ಯ ಮಳಿಗೆಯ ಮಾಲೀಕರು ವರ್ಷಗಳ ಕಾಲ ಬಾಡಿಗೆ ಬಾಕಿ ಇರಿಸಿಕೊಂಡಿರುವುದು ಕಾನೂನು ಬಾಹಿರವಾಗಿದೆ ಅಂಥವರ ಮೇಲೆ ಕ್ರಮ ಕೈಗೊಂಡು ಮಳಿಗೆಗಳಿಗೆ ಬೀಗ ಹಾಕಲಾಗಿದೆ ಎಂದರು.
ಕಂದಾಯಾಧಿಕಾರಿ ಎಂ.ಚಂದ್ರ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ವಾಣಿಜ್ಯ ಮಳಿಗೆ ಮಾಲೀಕರು ಸಹಕರಿಸಬೇಕು. ಸಕಾಲಕ್ಕೆ ಬಾಡಿಗೆ ಪಾವತಿಸುವ ಜತೆಗೆ ಅಂಗಡಿ ಪರವಾನಿಗೆ ಪಡೆಯುವುದು, ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಸಹಕರಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net