ಗೊಡ್ಲುಮುದ್ದೇನಹಳ್ಳಿಯಲ್ಲಿ ಮಾದರಿ ಆಸ್ಪತ್ರೆ

vjp hospital
Published on

ವಿಜಯವಾಣಿ ಸುದ್ದಿಜಾಲ ವಿಜಯಪುರ
ಸರ್ಕಾರಿ ಆಸ್ಪತ್ರೆಗಳೆಂದರೆ ಮುಖ ಮುರಿಯುವವರು, ಸ್ವಚ್ಛತೆ ಬಗ್ಗೆ ಆರೋಪಿಸುವವರೇ ಹೆಚ್ಚು. ಇನ್ನು ಅಲ್ಲಿನ ವಾತಾವರಣವೆಂದರೆ ನೆಗೆಟಿವ್ ಆಗಿ ಯೋಚಿಸುವವರೇ ಬಹಳಷ್ಟು. ಆದರೆ ಇದಕ್ಕೆಲ್ಲ ಅಪವಾದ ಗೊಡ್ಲುಮುದ್ದೇನಹಳ್ಳಿ ಸರ್ಕಾರಿ ಆಸ್ಪತ್ರೆ!
ರೋಗಿಗಳಿಗೆ ಆತ್ಮವಿಶ್ವಾಸ ತುಂಬುವ, ಉತ್ತಮ ಪರಿಸರದೊಂದಿಗೆ ಮರುರೂಪ ಪಡೆದಿರುವ ಆಸ್ಪತ್ರೆ ಎಲ್ಲರ ನೆಚ್ಚಿನ ಆರೋಗ್ಯಧಾಮ ಎನಿಸಿದೆ. ಇಂಥ ವಾತಾವರಣ ನಿರ್ಮಾಣ ಮಾಡುವಲ್ಲಿ ಶ್ರಮಿಸಿರುವ ವೈದ್ಯೆ ಡಾ.ಎಸ್.ವಾಣಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಆಸ್ಪತ್ರೆಯ ಆವರಣಕ್ಕೆ ಬರುತ್ತಿದ್ದಂತೆ ನೆಮ್ಮದಿ ಎನಿಸುತ್ತದೆ. ಸೋಂಪಾಗಿ ಬೆಳೆದಿರುವ ಗಿಡಮರ, ಅವುಗಳಲ್ಲಿ ವಾಸ ಮಾಡುವ ಹಕ್ಕಿಗಳ ಕಲರವ ಇಂಪು ನೀಡುತ್ತಿದೆ. ನರೇಗಾ ಅನುದಾನ ಬಳಸಿ ಉದ್ಯಾನ ನಿರ್ಮಾಣ ಮಾಡಲಾಗಿದೆ. ಸರ್ಕಾರದಿಂದ ಆಸ್ಪತ್ರೆಗೆ ಬಿಡುಗಡೆಯಾಗುವ ಅನುದಾನದಲ್ಲಿ ಮಕ್ಕಳ ಜಾರುವ ಬಂಡಿ ನಿರ್ಮಿಸಿ ಮಕ್ಕಳ ಆಟಕ್ಕೂ ಅವಕಾಶ ಮಾಡಿಕೊಡಲಾಗಿದೆ. ನೀರಿಗೆ ತೊಂದರೆ ಇಲ್ಲ, ರೋಟರಿ ವತಿಯಿಂದ ಮಳೆ ನೀರು ಕೊಯ್ಲು ಅಳವಡಿಸಿದ್ದು, ಗಿಡ-ಮರಗಳ ಪೋಷಣೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮುಂಭಾಗದಲ್ಲಿ ಧ್ವಜಸ್ತಂಭ ನಿರ್ಮಿಸಲಾಗಿದೆ. ಪ್ರತ್ಯೇಕ ಲಸಿಕಾ ಕೊಠಡಿ, ಆಯುಷ್ಮಾನ್ ಕೊಠಡಿಯೂ ಇದೆ. ಸಿಬ್ಬಂದಿಗೆ ತರಬೇತಿ ನೀಡಲು ಪ್ರತ್ಯೇಕ ಕೊಠಡಿಗಳಿವೆ. ಆರೋಗ್ಯ ಇಲಾಖೆಯಿಂದ ಸಿಗುವಂತಹ ಸೌಲಭ್ಯಗಳ ಕುರಿತು ಜನರಿಗೆ ಅರಿವು ಮೂಡಿಸಲು ಚಿತ್ರಗಳ ಸಮೇತ ಗೋಡೆ ಬರಹಗಳು ಗಮನ ಸೆಳೆಯುತ್ತವೆ.

ಯೋಗಕ್ಕೆ ಪ್ರತ್ಯೇಕ ಕೊಠಡಿ ಸ್ಥಳೀಯರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಯೋಗಾಭ್ಯಾಸ ಮಾಡಲು ಪ್ರತ್ಯೇಕ ಕೊಠಡಿ ಇದೆ. ಪ್ರತಿ ಮಂಗಳವಾರ ತರಬೇತುದಾರರ ಮೂಲಕ ಯೋಗಾಭ್ಯಾಸ ಹೇಳಿಕೊಡಲಾಗುತ್ತದೆ. ಆಶಾ ಕಾರ್ಯಕರ್ತೆಯರಿಗೆ ಅನುಕೂಲವಾಗಲೆಂದು ಆಸ್ಪತ್ರೆ ಹಿಂಭಾಗದಲ್ಲಿ ಲಾರ್ವಾ ಮೀನಿನ ತೊಟ್ಟಿ ನಿರ್ಮಿಸಿ ಮೀನುಗಳು ಸಾಕಾಣಿಕೆ ಮಾಡಿದ್ದಾರೆ. ಸುಸಜ್ಜಿತ ಶೌಚಗೃಹ, ಹಾಗೂ ಸಮರ್ಪಕ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ.

ಪುಟ್ಟ ಗ್ರಂಥಾಲಯ: ಸರ್ಕಾರದ ಯೋಜನೆಗಳ ಕರಪತ್ರಗಳು, ಸ್ಥಳೀಯರಿಗೆ ಸುಲಭವಾಗಿ ಸಿಗಬೇಕೆನ್ನುವ ಕಾರಣಕ್ಕೆ ಪ್ರತ್ಯೇಕವಾಗಿ ಬಾಕ್ಸ್ ಗಳನ್ನು ಮಾಡಿಸಿಟ್ಟಿದ್ದು, ಅವುಗಳನ್ನು ತೆಗೆದು ಓದುವುದಕ್ಕೆ ಅನುಕೂಲ ಮಾಡಿಕೊಡಲಾಗಿದೆ. ರೋಗಿಗಳು ಹಾಗೂ ಜತೆಯಲ್ಲಿ ಬರುವವರಿಗಾಗಿ ಸಮಯ ಕಳೆಯಲು ಹಲವು ಪುಸ್ತಕಗಳನ್ನು ಸಂಗ್ರಹಿಸಿಟ್ಟು ಓದುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಗರ್ಭಿಣಿಯರಿಗೆ ಶಿಬಿರ: ಗರ್ಭಿಣಿಯರ ಆರೋಗ್ಯ ಕಾಳಜಿ ವಹಿಸುತ್ತಿರುವ ವೈದ್ಯೆ ಡಾ.ಎಸ್.ವಾಣಿ, ಆರೋಗ್ಯ ಸುಧಾರಣೆ, ಆಹಾರ ಸೇವನೆ ಕ್ರಮದ ಕುರಿತು ಶಿಬಿರಗಳನ್ನು ನಡೆಸುತ್ತಾರೆ. ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರಿಗೆ ಸ್ಥಳೀಯ ಪಂಚಾಯಿತಿ ಹಾಗೂ ದಾನಿಗಳಿಂದ ಸಹಕಾರ ಕೊಡಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net