

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ವಿಜಯಪುರ
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಭರಪೂರ ಯೋಜನೆಗಳಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುವ ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಗ್ರಾಮಾಂತರ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇನ್ನಿತರ ಗ್ರಾಹಕರ ಸೇವೆಳಿಗೆ ಪರದಾಡುವಂತಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಯೋಜನೆ, ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆಯ ಹಣ ಸೇರಿ ಪಿಂಚಣಿ ಹಣ ನೇರ ಫಲಾನುಭವಿಗಳ ಖಾತೆಗೆ ಸಂದಾಯವಾಗುತ್ತಿರುವುದರಿಂದ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ನೂಕುನುಗ್ಗಲು ಕಂಡುಬರುತ್ತಿದೆ. ಏತನ್ಮಧ್ಯೆ ಹೆಚ್ಚುತ್ತಿರುವ ಗ್ರಾಹಕರ ಸಂಖ್ಯೆಗೆ ಅನುಗುಣವಾಗಿ ಬ್ಯಾಂಕ್ ಸಿಬ್ಬಂದಿ ಇಲ್ಲದೆ ಗ್ರಾಹಕರು ಇಡೀ ದಿನ ಬ್ಯಾಂಕ್‌ನಲ್ಲೇ ಕಳೆಯುವಂತ ಸನ್ನಿವೇಶ ಕಂಡುಬರುತ್ತಿದೆ.
ಬ್ಯಾಂಕ್‌ಗಳ ವಿಲೀನ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯಿಂದ ಮತ್ತಷ್ಟು ಒತ್ತಡ ಹೆಚ್ಚಾಗಿದೆ, ಇದಕ್ಕೆ ತಕ್ಕಂತೆ ಬ್ಯಾಂಕ್ ಸಿಬ್ಬಂದಿ ನೇಮಿಸಿಕೊಳ್ಳದ ಕಾರಣ ಇರುವ ಸಿಬ್ಬಂದಿ ಮೇಲೆಯೇ ಹೆಚ್ಚಿನ ಒತ್ತಡ ಕಂಡುಬರುತ್ತಿದೆ. ಮುಂಜಾನೆ ಬ್ಯಾಂಕ್ ತೆರೆಯುವ ಮುನ್ನವೇ ಗ್ರಾಹಕರು ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುವ ದೃಶ್ಯಗಳು ಕಂಡುಬರುತ್ತಿವೆ. ಕೂಲಿ ಕಾರ್ಮಿಕರು ಇನ್ನಿತರ ಕೆಲಸಗಳಿಗೆ ತೆರಳುವವರು ತರಾತುರಿಯಲ್ಲಿ ಸೇವೆ ಪಡೆಯಲು ಮುಗಿಬೀಳುತ್ತಾರೆ. ಇದರಿಂದ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಜಟಾಪಟಿ ಏರ್ಪಡುತ್ತಿದೆ. ಗ್ರಾಹಕರನ್ನು ಸಂಭಾಳಿಸುವಷ್ಟರಲ್ಲಿ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ.
ಸರ್ವರ್ ಪ್ರಾಬ್ಲಂ ಇನ್ನು ಹಲವು ಬ್ಯಾಂಕ್‌ಗಳಲ್ಲಿ ಸರ್ವರ್ ಸಮಸ್ಯೆ ಕಾರಣಕ್ಕೆ ಕಾದು ಸುಸ್ತಾದ ಗ್ರಾಹಕರು ಸಿಬ್ಬಂದಿ ಮೇಲೆ ರೇಗಾಡುವ, ಆಕ್ರೋಶ ವ್ಯಕ್ತಪಡಿಸುವ ಪ್ರಕರಣಗಳು ಸಾಮಾನ್ಯವಾಗಿವೆ. ಕೆಲವು ಕಡೆಗಳಲ್ಲಿ ಪಾಸ್‌ಬುಕ್ ಎಂಟ್ರಿ ಮಾಡುವ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಗ್ರಾಹಕರ ಸಹನೆ ಪರೀಕ್ಷಿಸುತ್ತವೆ, ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಎಂಟಿಎಂ ಯಂತ್ರಗಳು ಕೆಟ್ಟು ನಿಂತಿರುವುದರಿಂದ ನಗದು ಪಡೆಯಲು ಗ್ರಾಹಕರು ಬ್ಯಾಂಕ್‌ಗಳಿಗೆ ದೌಡಾಯಿಸುತ್ತಿದ್ದಾರೆ. ಯೋಜನೆ ಲಾನುಭವಿಗಳ ಜತೆಗೆ ನಗದು ಪಡೆಯುವ ಗ್ರಾಹಕರೂ ಜಮಾವಣೆಯಾಗುವುದರಿಂದ ಬ್ಯಾಂಕ್‌ಗಳಲ್ಲಿ ಜನಜಂಗುಳಿ ಕಂಡುಬರುತ್ತಿದೆ.
ಸಂದೇಶ ಪರಿಶೀಲನೆಗೆ ಮುಗಿಬಿದ್ದ ಜನ: ಗೃಹಲಕ್ಷ್ಮಿಯೋಜನೆ ಅನುಷ್ಟಾನದ ಬಳಿಕ ಮತ್ತಷ್ಟು ಒತ್ತಡ ಹೆಚ್ಚಾಗಿದೆ, ಮೊಬೈಲ್ ಸಂದೇಶ ಬರದ ಲಾನುಭವಿಗಳು ಬ್ಯಾಂಕ್‌ಗಳಿಗೆ ಲಗ್ಗೆ ಹಾಕುತ್ತಿದ್ದಾರೆ. ಬ್ಯಾಂಕ್ ಸಿಬ್ಬಂದಿ ಬಳಿ ಸಂದೇಶ ಬರದ ಬಗ್ಗೆ ವಿಚಾರಿಸಲು ಮುಗಿಬೀಳುತ್ತಿದ್ದು ಬ್ಯಾಂಕ್ ಸಿಬ್ಬಂದಿ ಅದನ್ನು ಪರಿಶೀಲಿಸಿ ಸಮರ್ಪಕ ಉತ್ತರ ನೀಡುವಷ್ಟರಲ್ಲಿ ಸುಸ್ತಾಗಿ ಹೋಗುತ್ತಿರುವ ದೃಶ್ಯ ಕಂಡುಬರುತ್ತಿದೆ. ಏಕಕಾಲದಲ್ಲಿ ಎಲ್ಲ ಒತ್ತಡ ನಿಭಾಯಿಸಬೇಕಾಗಿರುವುದರಿಂದ ಬ್ಯಾಂಕ್ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ.
ಸಾಲಸೌಲಭ್ಯಕ್ಕೂ ಕುತ್ತು: ಗ್ರಾಮೀಣ ಪ್ರದೇಶದಲ್ಲಿನ ಈ ಬ್ಯಾಂಕ್‌ಗಳಲ್ಲಿ ಅನಕ್ಷರಸ್ಥ ಗ್ರಾಹಕರೇ ಹೆಚ್ಚಾಗಿದ್ದು, ಬ್ಯಾಂಕ್‌ನಲ್ಲಿ ಪ್ರತಿ ವಿಷಯಕ್ಕೂ ಹತ್ತಾರು ಬಾರಿ ಕೇಳಿ ತಿಳಿದುಕೊಳ್ಳುವ ಪರಿಸ್ಥಿತಿ ಸಾಮಾನ್ಯವಾಗಿದೆ. ಗ್ರಾಹಕರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುತ್ತಾ ಕುಳಿತರೆ ಬ್ಯಾಂಕ್ ಸಿಬ್ಬಂದಿ ಮಾಡಬೇಕಾದ ಇನ್ನಿತರ ಕೆಲಸಗಳು ಮುಂದೆ ಸಾಗುವುದಿಲ್ಲ ಇದರಿಂದ ಮತ್ತಷ್ಟು ಗೊಂದಲ ಏರ್ಪಡುತ್ತಿದೆ ಇವೆಲ್ಲದ ಒತ್ತಡದಿಂದಾಗಿ ಬ್ಯಾಂಕ್‌ಗಳಲ್ಲಿ ದೊರೆಯುವ ಸಾಲಸೌಲಭ್ಯ ಪ್ರಕ್ರಿಯೆ ಪೂರೈಸಲು ಸಿಬ್ಬಂದಿಗೆ ಕಾಲಾವಕಾಶ ಸಿಗುತ್ತಿಲ್ಲ. ಚಿನ್ನಾಭರಣ ಅಡಮಾನ ಇಡುವುದು ಸೇರಿ ಇನ್ನಿತರ ಸಾಲ ಪಡೆಯುವ ಪ್ರಕ್ರಿಯೆ ಸದ್ಯದ ಪರಿಸ್ಥಿತಿಯಲ್ಲಿ ಸುಲಭಸಾಧ್ಯವಲ್ಲ ಎಂಬ ಪರಿಸ್ಥಿತಿ ಕಂಡುಬರುತ್ತಿದೆ.
ದಾಖಲೆ ಪರಿಶೀಲನೆ ಒತ್ತಡ:ಈಗಾಗಲೇ ಅನ್ನಭಾಗ್ಯ ಯೋಜನೆಯಡಿ ಜುಲೈನಲ್ಲಿ ಜಿಲ್ಲೆಯಲ್ಲಿರುವ ಫಲಾನುಭವಿಗಳಿಗೆ ರೂ. 9.84 ಕೋಟಿ ರೂ. ನೇರ ನಗದು ವರ್ಗಾವಣೆ ಮಾಡಲಾಗಿದೆ. ಅದೇ ರೀತಿ ಗೃಹಲಕ್ಷ್ಮೀ ಯೋಜನೆಯಡಿ 1.86 ಲಕ್ಷ ಲಾನುಭವಿಗಳು ಖಾತೆ ತೆರೆದಿದ್ದು ಮೊಬೈಲ್ ಸಂದೇಶ ರವಾನೆಯಾಗಿದೆ. 2.25 ಲಕ್ಷ ಲಾನುಭವಿಗಳನ್ನು ಗುರುತಿಸಿದ್ದು, ಅವರೆಲ್ಲರ ಆಧಾರ್‌ಕಾರ್ಡ್ ಮತ್ತಿತರ ದಾಖಲೆಗಳ ಪರಿಶೀಲನೆ ಕೆಲಸವೂ ಸಿಬ್ಬಂದಿ ಮೇಲೆ ಬಿದ್ದಿದೆ.
ಸರ್ಕಾರದ ಯೋಜನೆಗಳನ್ವಯ ಖಾತೆಗಳಿಗೆ ನೇರ ನಗದು ಜಮೆಯಾಗುತ್ತಿರುವುದರಿಂದ ಖಾತೆ ತೆರೆಯಲು ಹೆಚ್ಚಿನ ಗ್ರಾಹಕರು ಮುಗಿಬೀಳುತ್ತಿದ್ದಾರೆ. ಇದರ ಜತೆಗೆ ಭಾಗ್ಯಲಕ್ಷ್ಮೀ ಯೋಜನೆಗೆ ಸಂಬಂಧಪಟ್ಟಂತೆ ಮೊಬೈಲ್ ಸಂದೇಶ ಕುರಿತ ವಿಚಾರಣೆಗೆ ಹೆಚ್ಚಿನ ಗ್ರಾಹಕರು ಬ್ಯಾಂಕ್‌ಗಳಿಗೆ ಬರುತ್ತಿದ್ದಾರೆ. ಇರುವ ಸಿಬ್ಬಂದಿಗೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಬ್ಯಾಂಕ್‌ನಲ್ಲಿ ಸಿಬ್ಬಂದಿ ಕೊರತೆ ಇದ್ದು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
ಶ್ರೀನಿವಾಸ್, ವ್ಯವಸ್ಥಾಪಕ ನಿರ್ದೇಶಕ ಎಸ್‌ಬಿಐ ಬ್ಯಾಂಕ್ ವಿಜಯಪುರ