

ಬೆಂಗಳೂರು: ಯುವತಿಯರ ಜತೆ ಡೇಟಿಂಗ್ ಮಾಡಿಸುವ ಆಮಿಷವೊಡ್ಡಿ ಟೆಕ್ಕಿಯನ್ನು ಪರಿಚಯಿಸಿಕೊಂಡ ಸೈಬರ್ ವಂಚಕರು 4 ಲಕ್ಷ ರೂ. ಪಡೆದು ವಂಚಿಸಿದ್ದಾರೆ.
ಕೋಡಿಚಿಕ್ಕನಹಳ್ಳಿಯ 46 ವರ್ಷದ ವ್ಯಕ್ತಿ ವಂಚನೆಗೆ ಒಳಗಾದ ವ್ಯಕ್ತಿ. ಡೇಟಿಂಗ್ ಫ್ರೆಂಡ್ಸ್ ಆಂಡ್ ಡೇಟಿಂಗ್ ಟೆಲಿಮಾರ್ಕೆಟಿಂಗ್ ಕಂಪನಿ ಹಾಗೂ ಶ್ರೇಯಾ ಶರ್ಮಾ ಮತ್ತು ನಿಶಾ ಗುಪ್ತ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬೊಮ್ಮನಹಳ್ಳಿ ಪೊಲೀಸರು ತಿಳಿಸಿದ್ದಾರೆ.
ಟೆಕ್ಕಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ‘ಡೇಟಿಂಗ್ ಫ್ರೆಂಡ್ಸ್ ಆಂಡ್ ಡೇಟಿಂಗ್ ಟೆಲಿಮಾರ್ಕೆಟಿಂಗ್’ ಕಂಪನಿ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ. ಕಂಪನಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡರೆ ಯುವತಿಯರಿಂದ ವಿಶೇಷ ಸೇವೆ ಒದಗಿಸುತ್ತೇವೆ ಎಂದು ನಂಬಿಸಿದ್ದ. ಕಳೆದ ಡಿ.20ರಂದು ಆನ್ಲೈನ್ ಮೂಲಕ 2 ಸಾವಿರ ರೂ. ಪಾವತಿಸಿ ಟೆಕ್ಕಿ ನೋಂದಾಯಿಸಿಕೊಂಡಿದ್ದರು. ಕೆಲ ದಿನಗಳ ಬಳಿಕ ಡೇಟಿಂಗ್ ಕಂಪನಿಯಿಂದ ಟೆಕ್ಕಿಗೆ ಸಂದೇಶ ಬಂದಿದ್ದು, ಶ್ರೇಯಾ ಶರ್ಮಾ ಎಂಬ ಯುವತಿಯ ಫೋನ್ ನಂಬರ್ ನೀಡಿ ಆಕೆಯನ್ನು ಸಂರ್ಪಸುವಂತೆ ಸೂಚಿಸಲಾಗಿತ್ತು.
ಶ್ರೇಯಾಗೆ ಕರೆ ಮಾಡಿದ್ದ ಟೆಕ್ಕಿ ಡೇಟಿಂಗ್ ಕುರಿತು ವಿಚಾರಿಸಿದ್ದಾರೆ. ಈ ವೇಳೆ ಆಕೆ ಗ್ರೀನ್ ಕಾರ್ಡ್ ಹಾಗೂ ಹೋಟೆಲ್ನಲ್ಲಿ ರೂಮ್ ಬುಕಿಂಗ್ಗೆಂದು ಎರಡು ಲಕ್ಷ ರೂ. ಜಮೆ ಮಾಡಿಸಿಕೊಂಡಿದ್ದು ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ನಂತರ ಕಂಪನಿಯವರು ಮತ್ತೊಂದು ಫೋನ್ ನಂಬರ್ ಕಳುಹಿಸಿದ್ದಾರೆ. ಆ ಸಂಖ್ಯೆಗೆ ಕರೆ ಮಾಡಿದಾಗ ತನ್ನ ಹೆಸರು ನಿಶಾ ಗುಪ್ತ ಎಂದು ಆಕೆ ಪರಿಚಯಿಸಿಕೊಂಡಿದ್ದಾಳೆ. ಆಕೆಯೂ ಹೋಟೆಲ್ ಬುಕ್ಕಿಂಗ್, ಟ್ಯಾಕ್ಸಿ ಖರ್ಚು, ಪಾರ್ಟಿ ಇನ್ನಿತರ ವೆಚ್ಚಗಳಿಗೆಂದು 2 ಲಕ್ಷ ರೂ. ಜಮೆ ಮಾಡಿಸಿಕೊಂಡಿದ್ದಾಳೆ. ಬಳಿಕ ಫೋನ್ ಆಫ್ ಮಾಡಿಕೊಂಡಿದ್ದಾಳೆ. ಕಂಪನಿಯವರು ಮತ್ತೆ ಫೋನ್ ಮಾಡಿ 1 ಲಕ್ಷ ರೂ. ಸಂದಾಯ ಮಾಡುವಂತೆ ಹೇಳಿದಾಗ ವಂಚಿಸುತ್ತಿರುವುದು ಗೊತ್ತಾಗಿ ಟೆಕ್ಕಿ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.