ವಿಜೃಂಭಣೆಯ ಶ್ರೀ ಕಲ್ಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ

kdr 1
Published on

ಕಡೂರು: ಸಿಂಗಟಗೆರೆಯ ಇತಿಹಾಸ ಪ್ರಸಿದ್ಧ ಶ್ರೀ ಕಲ್ಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ರುದ್ರಾಭಿಷೇಕ, ನಿತ್ಯಹೋಮ, ರಥಾಧಿದೇವತಾ ಹೋಮ, ರಥ ಸಂಪ್ರೋಕ್ಷಣೆ ನಂತರ ಶ್ರೀಕಲ್ಲೇಶ್ವರ ಸ್ವಾಮಿ ಮತ್ತು ಪಾರ್ವತಿ ದೇವಿ ಉತ್ಸವ ಮೂರ್ತಿಯೊಂದಿಗೆ ಗ್ರಾಮದ ರಾಜ ಬೀದಿಗಳಲ್ಲಿ ಅದ್ಧೂರಿಯ ಮೆರವಣಿಗೆ ನಡೆಸಲಾಯಿತು. ಜಾನಪದ ಡೊಳ್ಳು, ವೀರಗಾಸೆ ಕಲಾ ತಂಡಗಳ ಪ್ರದರ್ಶನ ಗಮನ ಸೆಳೆದವು.

ರಥದ ಬೀದಿ ಸಮೀಪ ಕರೆತಂದ ಉತ್ಸವಮೂರ್ತಿಯನ್ನು ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಟಾಪಿಸಿ ಬಲಿಪ್ರದಾನ ಪೂಜೆ ನೆರವೇರಿಸಲಾಯಿತು. ಭಕ್ತರು ಜಯ ಘೋಷಗಳೊಂದಿಗೆ ಸ್ವಾಮಿ ರಥವನ್ನು ಎಳೆದು ಸಂಭ್ರಮಿಸಿದರು. ರಥದ ಕಳಶಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಕೆಲ ಭಕ್ತರು ರಥಕ್ಕೆ ಎಸೆದ ಮೆಣಸಿನ ಕಾಳನ್ನು ಭಕ್ತರು ಸಂಗ್ರಹಿಸಿದರು.

ರಥೋತ್ಸವ ನಂತರ ಒಂದು ಗಂಟೆಗೂ ಹೆಚ್ಚು ಮಳೆ ಸುರಿದ ಪರಿಣಾಮ ವಾತಾವರಣ ತಂಪಾಗಿಸಿತು. ಜಾತ್ರಾ ಮಹೋತ್ಸವದ ಅಂಗವಾಗಿ ವಾಹನ ಸಂಚಾರದ ದಟ್ಟಣೆ ಹೆಚ್ಚಾಗಿತ್ತು. ಸಿಂಗಟಗೆರೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

ಧರ್ಮದರ್ಶಿ ಬಿ.ಕೆ.ನಾಗರಾಜ್ ಮಾತನಾಡಿ, ಅಸಂಖ್ಯಾತ ಭಕ್ತರ ಸಹಕಾರದಿಂದ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆದಿದೆ. ಸುಮಾರು 10 ಕೋಟಿ ವೆಚ್ಚದ 58 ಅಡಿ ಎತ್ತರದ ಕಲ್ಲಿನ ರಾಜಗೋಪುರದ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ 20ಅಡಿ ಎತ್ತರದ ಕಾಮಗಾರಿ ಮುಕ್ತಾಯಗೊಂಡಿದೆ ಎಂದರು.

ದೇವಾಲಯ ಸಮಿತಿ ಕಾರ್ಯದರ್ಶಿ ರಮೇಶ್, ಪದಾಧಿಕಾರಿಗಳಾದ ಉದಯ್‌ಕುಮಾರ್, ಎಚ್. ಕಲ್ಲೇಶಪ್ಪ, ಎನ್.ಪಿ.ಶಿವಕುಮಾರ್, ಲೋಕೇಶಪ್ಪ, ದಕ್ಷ್ರಿಣ ಮೂರ್ತಿ, ದೇವರಾಜ್, ಬಿ.ಜೆ.ಕುಮಾರ್, ಶಿವಣ್ಣ, ಕೆ.ಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net