

ತರೀಕೆರೆ: ತಾಲೂಕಿನ ಹಿರೇಕಾತೂರು ಗ್ರಾಮದ ಶ್ರೀ ಏಕನಾಥ ಯಲ್ಲಮ್ಮ ದೇವಿ ಅವರ ಸಿಡಿ ಮಹೋತ್ಸವ ಶನಿವಾರ ವೈಭವದಿಂದ ನಡೆಯಿತು.
ಸಿಡಿ ಮಹೋತ್ಸವದ ಹಿನ್ನೆಲೆಯಲ್ಲಿ ಆರಂಭವಾದ ಪೂಜಾ ಕಾರ್ಯಗಳನ್ನು ಹಿರೇಕಾತೂರು, ಜೋಡಿಕೋಡಿಹಳ್ಳಿ, ತಿಮ್ಮಾಪುರ, ಹುರುಳಿಹಳ್ಳಿ, ಬೇಲೇನಹಳ್ಳಿ ಇತರ ಗ್ರಾಮಗಳ ಭಕ್ತರು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು. ಶ್ರೀಏಕನಾಥ ಯಲ್ಲಮ್ಮ ದೇವಿ ದೇಗುಲ ಆವರಣದಲ್ಲಿ ಶನಿವಾರ ಬೆಳಗಿನ ಜಾವ 5ಕ್ಕೆ ತೇರು ಎಳೆಯಲಾಯಿತು. ಬೆಳಗ್ಗೆ 8ಗಂಟೆ ನಂತರ ವಿವಿಧ ಪೂಜಾ ಕಾರ್ಯಕ್ರಗಳು ಜರುಗಿದವು. ಮಧ್ಯಾಹ್ನ ವಿವಿಧೆಡೆಯಿಂದ ಆಗಮಿಸಿದ್ದ ಹತ್ತಾರು ಭಕ್ತರು ಬೇವಿನ ಸೀರೆ ಉಟ್ಟು ಹರಕೆ ತೀರಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ಸಂಜೆ 4.30 ರಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಶ್ರೀ ಏಕನಾಥ ಯಲ್ಲಮ್ಮ ದೇವಿ, ಶ್ರೀಕೆಂಡದಮ್ಮ ದೇವಿ, ಶ್ರೀವೀರಭದ್ರಸ್ವಾಮಿ ಇನ್ನಿತರ ದೇವರ ಉತ್ಸವ ಮೂರ್ತಿಗಳ ಉತ್ಸವ ನಡೆಸಿ ಸಂಜೆ 6.30ರ ವೇಳೆಗೆ ಸಿಡಿ ಮಹೋತ್ಸವ ನೆರವೇರಿಸಲಾಯಿತು.
ಹಿರೇಕಾತೂರು, ಬೇಲೇನಹಳ್ಳಿ, ಕಟ್ಟೆಹೊಳೆ, ಬೇಲೇನಹಳ್ಳಿ ತಾಂಡ, ಪಿರಮೇನಹಳ್ಳಿ, ಜೋಡಿಕೋಡಿಹಳ್ಳಿ, ಹುರುಳಿಹಳ್ಳಿ, ಲಕ್ಕೇನಹಳ್ಳಿ, ತರೀಕೆರೆ, ಸೀತಾಪುರ ಕಾವಲು, ದುಗ್ಲಾಪುರ, ಇಟ್ಟಿಗೆ, ರಾಮನಹಳ್ಳಿ ಇನ್ನಿತರ ಕಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಸಿಡಿ ಮೇಲೆ ಹೂವು, ನಿಂಬೆ, ಬಾಳೆಹಣ್ಣು ತೂರಿ ಭಕ್ತಿ ಸಮರ್ಪಿಸಿದರು.