ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಫ್ಲೈ ಓವರ್

Vijaypura, public, report, minister, response to problems, fly over,
ವಿಜಯಪುರದ ತಮ್ಮ ನಿವಾಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಮಯದಲ್ಲಿ ಜಾಲಗೇರಿ ಗ್ರಾಮಸ್ಥರು ಕುಂಟುತ್ತ ಸಾಗುತ್ತಿರುವ ನೀರಾವರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಮೊಬೈಲ್‌ನಲ್ಲಿ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಸೂಚಿಸಿದರು. ಎಂ.ಎಂ. ಪಾಟೀಲ, ಡಾ. ಮಹಾಂತೇಶ ಬಿರಾದಾರ, ದಶರಥ ಭೋಸ್ಲೆ ಇತರರಿದ್ದರು.
Published on

ವಿಜಯಪುರ: ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಫ್ಲೈ ಓವರ್ ನಿರ್ಮಾಣದ ಚಿಂತನೆ ನಡೆಯುತ್ತಿದ್ದು, ಈ ಕುರಿತು ಪ್ರಸ್ತಾವನೆ ಸಲ್ಲಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ನಗರದಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು, ನಂತರ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಇದರ ಸಾಧಕ ಬಾಧಕಗಳ ಕುರಿತು ಮಾತನಾಡಿದರು.

ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಮತ್ತು ಸುಗಮ ಸಂಚಾರಕ್ಕಾಗಿ ಶಿವಾಜಿ ಸರ್ಕಲ್‌ನಿಂದ ಜಿಲ್ಲಾ ಕ್ರೀಡಾಂಗಣದವರೆಗೆ 1ಕಿಮೀ ವರೆಗೆ ಫ್ಲೈ ಓವರ್ ನಿರ್ಮಿಸುವ ಚಿಂತನೆಯಿದೆ. ಇದರ ಸಾಧಕ ಬಾಧಕ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳೋಣ ಎಂದು ಸಚಿವರು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಿಗೆ ಸೂಚಿಸಿದರು.

ಕಾಮಗಾರಿ ಪೂರ್ಣಗೂಳಿಸಲು ಸೂಚನೆ: ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಮುಗಿಸಲು ಕ್ರಮ ಕೈಗೊಳ್ಳುವುದು ಸೇರಿದಂತೆ ನಾನಾ ಅಭಿವೃದಿಟಛಿ ಕಾರ್ಯಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಸೋಮದೇವರಹಟ್ಟಿ ಮತ್ತು ಜಾಲಗೇರಿ ಗ್ರಾಮಸ್ಥರು ಸಚಿವರನ್ನು ಭೇಟಿ ಮಾಡಿ ಕುಂಟುತ್ತ ಸಾಗಿರುವ ನೀರಾವರಿ ಯೋಜನೆಗಳ ಕುರಿತು ಸಚಿವರ ಗಮನ ಸೆಳೆದರು. ಕೂಡಲೇ ಕರ್ನಾಟಕ ನೀರಾವರಿ ನಿಗಮದ ಎಂಡಿಗೆ ಕರೆ ಮಾಡಿದ ಸಚಿವರು, ಈ ಯೋಜನೆಯಡಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿರುವ ಕುರಿತು ಚರ್ಚಿಸಲು ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಿಶೀಲನೆ ನಡೆಸಲು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆ ಕರೆಯುವಂತೆ ಸೂಚಿಸಿದರು.

ಕಾರಜೋಳ ಗ್ರಾಮಸ್ಥರ ಅಳಲಿಗೆ ಸ್ಪಂದಿಸಿದ ಸಚಿವರು, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗೆ ಕರೆ ಮಾಡಿ ಕಾರಜೋಳ ಏತ ನೀರಾವರಿ ಯೋಜನೆಯಡಿ ಕಾಲುವೆಗಳಿಗೆ ನೀರು ಹರಿಸುವಂತೆ ನಿರ್ದೇಶನ ನೀಡಿದರು. ಈ ಭಾಗದ ಕಾಲುವೆಗಳಿಗೆ ನೀರು ಹರಿಸುವುದರಿಂದ ಬಬಲೇಶ್ವರ ತಾಲೂಕಿನ ಕಾರಜೋಳ ಮತ್ತು ದೂಡಿಹಾಳ ಹಾಗೂ ಬಸವನಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದ ಸ್ವಲ್ಪಭಾಗ ಸೇರಿದಂತೆ ಒಟ್ಟು 5ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಸಿಗಲಿದೆ. ಹೀಗಾಗಿ ಕೂಡಲೇ ಸ್ಪಂದಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಶಾಲೆ ಮತ್ತು ಕಾಲೇಜ್ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆಯಾಗದಂತೆ ಸರಿಯಾಗಿ ಬಸ್ ಸೌಲಭ್ಯ ಒದಗಿಸಬೇಕು. ಬರಟಗಿ ಎಲ್ಟಿ.5ರಲ್ಲಿ ಜೆಜೆಎಂ ಕಾಮಗಾರಿ ಪೈಪಲೈನ್ ಗುಣಮಟ್ಟದ ಕೆಲಸ ಮಾಡಬೇಕು. ತೊರವಿ, ಅತಾಲಟ್ಟಿ, ಕಣಮುಚನಾಳ, ತಾಜಪುರ, ಧನ್ಯಾರ ಗ್ರಾಮಗಳಿಗೆ ಜಲಧಾರೆ ಯೋಜನೆಯಡಿ ಸಮರ್ಪಕ ಕುಡಿಯುವ ನೀರು ಯೋಜನೆ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆಯ ಇಂಜಿನಿಯರ್‌ಗೆ ಮೊಬೈಲ್ ಕರೆ ಮಾಡಿ ಸೂಚನೆ ನೀಡಿದರು.

ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಆರ್.ಕೆ. ಮುಜುಂದಾರ ಮತ್ತು ಎಇಇ ಎಂ.ಎಂ. ಪಾಟೀಲ, ಸಚಿವರ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ, ದಶರಥ ಭೋಸ್ಲೆ ಉಪಸ್ಥಿತರಿದ್ದರು.

ಸಾಲ ಪಾವತಿಗೆ ಅವಕಾಶಕ್ಕೆ ಸೂಚನೆ
ಸಚಿವರನ್ನು ಭೇಟಿ ಮಾಡಿದ ಬಾಬಾನಗರ ಗ್ರಾಮಸ್ಥರು, ಒಣದ್ರಾಕ್ಷಿ ಬೆಲೆ ಕುಸಿದಿದ್ದು, ಗ್ರಾಮದ 600 ಜನ ದ್ರಾಕ್ಷಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ನಾನಾ ಬ್ಯಾಂಕ್‌ಗಳು ಕೃಷಿ ಸಾಲ ಮರು ಪಾವತಿಸುವಂತೆ ರೈತರ ಮೇಲೆ ಒತ್ತಡ ಹೇರುತ್ತಿವೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವ ಎಂ.ಬಿ. ಪಾಟೀಲ, ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಕರೆ ಮಾಡಿ, ಕೂಡಲೇ ಬ್ಯಾಂಕರ್ಸ್ ಸಭೆ ಕರೆದು ರೈತರಿಗಾಗುತ್ತಿರುವ ತೊಂದರೆ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ರೈತರಿಗೆ ತೊಂದರೆಯಾಗದಂತೆ ಮತ್ತು ಒಣದ್ರಾಕ್ಷಿ ಬೆಲೆ ಹೆಚ್ಚಳವಾದ ನಂತರ ಕೃಷಿ ಸಾಲ ಮರುಪಾವತಿಗೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net