

ವಿಜಯಪುರ: ಜಿಲ್ಲಾ ಕಚೇರಿಗಳ ಸಂಕೀರ್ಣ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯ ರೂ. 55.60 ಕೋಟಿ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ವಿಜಯಪುರ ನಗರದ ಕನಕದಾಸ ಬಡಾವಣೆಯ ಬಾಲಭವನದ ಪಕ್ಕದಲ್ಲಿ ಆರು ಎಕರೆ ಸರ್ಕಾರಿ ಜಾಗೆಯಲ್ಲಿ 10,510 ಚದರ್ ಮೀಟರ್ (1,13,000 ಚದರ ಅಡಿ) ಪ್ರದೇಶದಲ್ಲಿ ಜಿಲ್ಲಾ ಕಚೇರಿಗಳ ನೂತನ ಸಂಕೀರ್ಣ ನಿರ್ಮಾಣವಾಗಲಿದೆ. ನೆಲಮಹಡಿ ಸೇರಿದಂತೆ ಒಟ್ಟು ನಾಲ್ಕು ಮಹಡಿಗಳನ್ನು ಈ ಕಟ್ಟಡ ಒಳಗೊಂಡಿದ್ದು, ಸುಮಾರು 20 ನಾನಾ ಕಚೇರಿಗಳು, ದಾಖಲೆ ಕೊಠಡಿಗಳು, ಸಭಾಂಗಣ, ಬ್ಯಾಂಕ್, ಅಂಚೆ ಕಚೇರಿ, ವಿಡಿಯೋ ಕಾನ್ಪರೆನ್ಸ್ ಹಾಲ್, ವಾಚನಾಲಯ, ಕ್ಯಾಂಟಿನ್ ಹೊಂದಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಕಟ್ಟಡದ ನೆಲ ಮಹಡಿಯಲ್ಲಿ ಸಂಸದರ ಕಚೇರಿ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಕೆಜಿಐಡಿ ಕಚೇರಿ, ಚುನಾವಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಖಜಾನೆ ಕಚೇರಿ ಇರಲಿದೆ. ಇವುಗಳ ಜೊತೆಗೆ ರಿಸೆಪ್ಷನ್, ಪೊಲೀಸ್ ಚೆಕ್ ಪೋಸ್ಟ್, ಕಂಟ್ರೋಲ್ ರೂಂ, ಗ್ರಂಥಾಲಯ, ಬ್ಯಾಂಕ್, ಸಕಾಲ, ಪೋಸ್ಟ್ ಆಫೀಸ್, ಕ್ಯಾಂಟೀನ್, ಸ್ಪಂದನಾ ಕೌಂಟರ್, ಕೆಎಸ್‌ಡಬ್ಲ್ಯೂಎಎನ್- 1 ಮತ್ತು 2 ಸೇರಿದಂತೆ ಮಹಿಳೆಯರಿಗೆ ವಿಶ್ರಾಂತಿ ಕೊಠಡಿಗಳು ಇರಲಿವೆ.
ಮೊದಲನೇ ಮಹಡಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ, ಆಹಾರ ಮತ್ತು ಸರಬರಾಜು ಇಲಾಖೆ, ಅಪರ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ (ಡಿಯುಡಿಸಿ), ಎರಡು ಕೇಂದ್ರ ದಾಖಲೆ ಕೋಠಡಿಗಳು ಇರಲಿವೆ.
ಎರಡನೇ ಮಹಡಿಯಲ್ಲಿ ಉಪವಿಭಾಗಾಧಿಕಾರಿ(ಎ.ಸಿ) ಕಚೇರಿ, ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕರ ಮತ್ತು ಸಹಾಯಕ ನಿರ್ದೇಶಕರ ಕಚೇರಿ ಮತ್ತು ನಗರ ಸರ್ವೇ ಕಚೇರಿ ಇರಲಿವೆ. ಅಲ್ಲದೇ, ವಿಡಿಯೋ ಕಾನ್ಪರೆನ್ಸ್ ಕೊಠಡಿ ಹಾಗೂ 300 ಜನ ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಂಗಣ ಇರಲಿವೆ ಎಂದು ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಮೂರನೇ ಮಹಡಿಯಲ್ಲಿ ಸಹಕಾರಿ ಸಂಘಗಳು, ಎನ್‌ಐಸಿ, ಗಣಿ ಮತ್ತು ಭೂ ವಿಜ್ಞಾನ, ಜವಳಿ, ವಕ್ಫ್, ಅಂಕಿಸಂಖ್ಯೆಗಳ ಕಚೇರಿ ಹಾಗೂ ಪ್ರವಾಸೋದ್ಯಮ ಇಲಾಖೆ ಕಚೇರಿ ಜೊತೆಗೆ 100 ಜನ ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಂಗಣ ಸೌಲಭ್ಯಗಳು ಇರಲಿವೆ.
ಅಲ್ಲದೇ, ಪ್ರತಿಯೊಂದು ಮಹಡಿಯಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಗೃಹ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪಾರ್ಕಿಂಗ್, ಸಿವಿಲ್ ಕಾಮಗಾರಿಗಳ ಜೊತೆಗೆ ಪಿಠೋಪಕರಣಗಳು ಮತ್ತು ಸಕಲ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಈ ಸಂಕೀರ್ಣದ ನಾಲ್ಕು ದಿಕ್ಕುಗಳಲ್ಲಿ ಪ್ರತ್ಯೇಕ ಸ್ಟೇರಕೇಸ್, ನಾಲ್ಕು ಲಿಫ್ಟ್‌ಗಳು, ಆಂತರಿಕ ರಸ್ತೆಗಳು, ಕಂಪೌಂಡ್ ಹಾಗೂ ಉದ್ಯಾನ ಇರಲಿವೆ ಎಂದು ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಈ ಮುಂಚೆ ಈ ಕಾಮಗಾರಿಗೆ ರೂ. 49 ಕೋಟಿ ಅಂದಾಜು ವೆಚ್ಚ ಪ್ರಸ್ತಾಪಿಸಲಾಗಿತ್ತು. ಈಗ ಕಟ್ಟಡದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲು ಪರಿಷ್ಕೃತ ಅಂದಾಜು ವೆಚ್ಚ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರೂ. 55.60 ಕೋಟಿ ಅಂದಾಜು ವೆಚ್ಚದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈಗ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಚಿವ ಎಂ. ಬಿ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.