

ವಿಜಯಪುರ: ಜಿಲ್ಲಾಮಟ್ಟದ 2022-23ನೇ ಸಾಲಿನ ದಸರಾ ಕ್ರೀಡಾಕೂಟ ವಿಜಯಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೆ. 14 ಮತ್ತು 15ರಂದು ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಜಿ.ಲೋಣಿ ತಿಳಿಸಿದ್ದಾರೆ.
ತಾಲೂಕು ಮಟ್ಟದಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಅಥವಾ ರಹವಾಸಿ ಪ್ರಮಾಣ ಪತ್ರವನ್ನು ತೆಗೆದುಕೊಂಡು ಬರಬೇಕು ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲಾಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವ ಪುರುಷ ಮತ್ತು ಮಹಿಳೆಯರಿಗಾಗಿ ಅಥ್ಲೆಟಿಕ್, ವಾಲಿಬಾಲ್, ಫುಟ್‌ಬಾಲ್, ಖೋಖೊ, ಕಬಡ್ಡಿ, ಬಾಸ್ಕೆಟ್‌ಬಾಲ್, ಥ್ರೋಬಾಲ್, ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್‌ಬಾಲ್, ಟೇಬಲ್ ಟೆನಿಸ್, ಬಾಲ್ ಬ್ಯಾಡ್ಮಿಂಟನ್ ನಡೆಸಲಾಗುತ್ತದೆ. ಜಿಲ್ಲಾಮಟ್ಟದಲ್ಲಿ ಟೆನಿಸ್, ನೆಟ್‌ಬಾಲ್ ಮತ್ತು ಈಜು ಸ್ಪರ್ಧೆಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.
ಕ್ರೀಡಾಕೂಟದಲ್ಲಿ ರಕ್ಷಣಾ ಪಡೆ, ಅರೆ ರಕ್ಷಣಾಪಡೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅವಕಾಶವಿರುವುದಿಲ್ಲ. ಒಬ್ಬ ಕ್ರೀಡಾಪಟು ಅಥವಾ ತಂಡ ಯಾವುದೇ ಜಿಲ್ಲೆಯಲ್ಲಿ ಒಂದು ಬಾರಿ ತಾಲೂಕು ಅಥವಾ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ನಂತರ ಬೇರೆ ಯಾವುದೇ ಜಿಲ್ಲೆಯ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಅಂತಹ ಪ್ರಕರಣವೇನಾದರೂ ದಾಖಲಾದಲ್ಲಿ ಅಥವಾ ಗಮನಕ್ಕೆ ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಒಬ್ಬ ಕ್ರೀಡಾಪಟು ಮೂರು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. (ಎರಡು ವೈಯಕ್ತಿಕ ಸ್ಪರ್ಧೆಗಳು ಒಂದು ಗುಂಪು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ). ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಅದಕ್ಕೆ ಕ್ರೀಡಾಪಟುಗಳು ಬದ್ಧರಾಗಿರಬೇಕು. ಯಾವುದೇ ಕ್ರೀಡಾಪಟುಗಳು ಅಶಿಸ್ತಿನಿಂದ ವರ್ತಿಸಿದಲ್ಲಿ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಕ್ರೀಡಾಪಟುಗಳು ಕಡ್ಡಾಯವಾಗಿ ವಿಜಯಪುರ ಜಿಲ್ಲೆಯವರಾಗಿರಬೇಕು. ಆಧಾರ್ ಕಾರ್ಡ್‌ನ್ನು ಕ್ರೀಡಾಕೂಟದ ಸಂದರ್ಭದಲ್ಲಿ ಹಾಜರುಪಡಿಸಬೇಕು ಹಾಗೂ ವಿದ್ಯಾರ್ಥಿಯಾಗಿದ್ದಲ್ಲಿ ಶಾಲಾ/ಕಾಲೇಜು ಗುರುತಿನ ಚೀಟಿಯನ್ನು ಹಾಜರುಪಡಿಸಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ಪ್ರಮಾಣ ಭತ್ಯೆಯನ್ನು ನೀಡಲಾಗುವುದಿಲ್ಲ. ಮಧ್ಯಾಹ್ನದ ಲಘು ಉಪಹಾರವನ್ನು ನೀಡಲಾಗುವುದು. ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುವಿನ ವಯೋಮಿತಿ ನಿರ್ಬಂಧ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮೊ: 9449070816 ಹಾಗೂ 9480886555 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.