ವಿಜಯೇಂದ್ರ ಹೇಳಿಕೆ ಸಂಪೂರ್ಣ ಸುಳ್ಳು...!

WEB LOGO
Published on

ವಿಜಯಪುರ: ರಾಜ್ಯದಲ್ಲಿ ಸದ್ಯ ಚುನಾವಣೆ ನಡೆದರೆ ಬಿಜೆಪಿಗೆ 160 ಸ್ಥಾನ ಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಅವರಪ್ಪನ ಜನಪ್ರಿಯತೆ ಇದ್ದಾಗಲೇ ಅಷ್ಟೊಂದು ಸೀಟು ಬಂದಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ ಬಿಜೆಪಿ ಚಟುವಟಿಕೆಗಳ ಬಗ್ಗೆ ಕೇಂದ್ರ ನಾಯಕರು ಗಮನ ಹರಿಸಲು ಸಾಧ್ಯವಾಗಿಲ್ಲ, ಭಾರತ&ಪಾಕ್​ ಯುದ್ಧ ಕಾರಣದಿಂದ ಇದರತ್ತ ವರಿಷ್ಠರು ಗಮನಹರಿಸಿಲ್ಲ. ಈ ಕುರಿತು ವರಿಷ್ಠರು ಕೂಡಲೇ ವಿಚಾರ ಮಾಡಿ ರಾಜ್ಯಾಧ್ಯಕ್ಷರನ್ನು ಬದಲಿಸಬಹುದು ಎಂದು ಮಂಗಳವಾರ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.

ವಿಜಯೇಂದ್ರ ಸರ್ವೇ ಸಂಪೂರ್ಣ ಸುಳ್ಳು. 160 ಸೀಟುಗಳು ಅವರಪ್ಪ ಜನಪ್ರಿಯ ನಾಯಕರಿದ್ದಾಗಲೇ ಬಂದಿಲ್ಲ. ಸದ್ಯ ವಿರೋಧ ಪಕ್ಷವಾಗಿ ಬಿಜೆಪಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಲವು ಅಮಾಯಕ ಹಿಂದುಗಳ ಕೊಲೆಗಳಾಗಿವೆ. ಅದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ತುಟಿ ಬಿಚ್ಚಿಲ್ಲ. ರಾಜ್ಯದಲ್ಲಿ ಹಿಂದುಗಳಿಗೆ ಕೊಂಚವೂ ರಕ್ಷಣೆ ಇಲ್ಲದಂತಾಗಿದೆ. ಭ್ರಷ್ಟಾಚಾರದ ಬಗ್ಗೆಯೂ ವಿಧಾನಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮಾತಾಡಲ್ಲ. ಈ ಧೋರಣೆಯಿಂದಾಗಿಯೇ ಬಿಜೆಪಿ ಹೈಕಮಾಂಡ್​ ವಿಜಯೇಂದ್ರ ಬಗ್ಗೆ ಬೇಸರ ವ್ಯಕ್ತಪಡಿಸಿದೆ ಎಂದು ಹೊಸ ಬಾಂಬ್​ ಹಾಕಿದರು.

ಪಕ್ಷದ ರಾಜ್ಯ ಉಸ್ತುವಾರಿಯಾಗಿರುವವರು ಮುಕ್ತವಾಗಿ ಚರ್ಚೆ ಮಾಡಬೇಕು. ಕೆಲ ವಿಜಯೇಂದ್ರ ಚೇಲಾಗಳು ಹೊಗಳುತ್ತಾರೆ. 224 ಸ್ಥಾನದಲ್ಲಿ 245 ಬರೋ ಸಂಭವವಿದೆ ಎಂದೂ ಹೇಳಿದರೂ ಅಚ್ಚರಿಯಿಲ್ಲ ಎಂದು ವ್ಯಂಗವಾಡಿದ ಯತ್ನಾಳ, ರಾಜ್ಯ ಉಸ್ತುವಾರಿಗಳ ಒನ್​ ಟು ಒನ್​ ಮಾತನಾಡಬೇಕು. ಗುಂಪಿನಲ್ಲಿ ಕೇಳಿದರೆ ಯಾರೂ ಮಾತನಾಡಲ್ಲ. ಪಕ್ಷದ ಮಾಜಿ ಶಾಸಕರು, ಪಕ್ಷದ ಕಟ್ಟಾಳು ಮತ್ತು ಪರಾಜಿತ ಅಭ್ಯರ್ಥಿಗಳನ್ನು ವಿಚಾರಿಸಿದರೆ ಸತ್ಯಾಂಶ ತಿಳಿಯಲಿದೆ. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ ಎಂದು ನುಡಿದರು.

ಬಿಜೆಪಿ ಭಿನ್ನಮತದ ಆಪ್ತರೊಂದಿಗೆ ಅಂತರ ಕಾಯ್ದುಕೊಂಡ ವಿಷಯದ ಕುರಿತು ಪ್ರತಿಕ್ರಿಯಿಸಿದ ಯತ್ನಾಳ, ನನ್ನಿಂದ ಅವರಿಗೆ ತೊಂದರೆಯಾಗಬಾರದು. ಒಂದು ವೇಳೆ ನಾನು ಅವರನ್ನು ಭೇಟಿಯಾದರೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಹೀಗಾಗಿ ನಾನೇ ಅವರಿಂದ ಅಂತರ ಕಾಯ್ದುಕೊಂಡಿದ್ದು, ಎಲ್ಲರೂ ನನ್ನ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ನಾನು ರಾಜ್ಯದ ಪ್ರವಾಸ ಮಾಡುತ್ತಿದ್ದೇನೆ. ನನಗೆ ಜನರ ಬೆಂಬಲ ಅಪಾರವಾಗಿ ಸಿಗುತ್ತಿದೆ. ಸಾವಿರಾರು ಜನರು ಸೇರುತ್ತಿದ್ದಾರೆ. ಯತ್ನಾಳ ಸಿಎಂ ಆದರೆ ಅಭಿವೃದ್ದಿಯಾಗುತ್ತದೆ ನೆಮ್ಮದಿ ಜೀವನ ಮಾಡಬಹುದು ಎಂಬ ವಾತಾವರಣ ಮನೆ ಮಾಡಿದೆ ಎಂದರು.

ಉಚ್ಚಾಟನೆಯಾದ ಬಳಿ ನನ್ನ ಜನಪ್ರಿಯತೆ ಹೆಚ್ಚಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನಂತರ ನಾನೇ ಎರಡನೇ ಜನಪ್ರಿಯ ನಾಯಕ. ಈ ಕುರಿತು ಗುಪ್ತಚರ ವರದಿ ಸಿದ್ದರಾಮಯ್ಯ ಬಳಿಯೇ ಇದೆ ಎಂದು ಯತ್ನಾಳ ತಿಳಿಸಿದರು. ಮೋದಿ, ವಾಜಪೇಯಿ, ಅಮೀತ್​ ಶಾ, ನಡ್ಡಾ, ಬಿ.ಎಲ್​. ಸಂತೋಷ ನನ್ನ ನಾಯಕರು. ಬಿಜೆಪಿ ಬಗ್ಗೆ ನನಗೆ ಗೌರವಿದೆ. ನಾ ಎಂದೂ ಬಿಜೆಪಿಗೆ ತೆಗಳುವುದಿಲ್ಲ. ಬಿಜೆಪಿಯಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಬಿಜೆಪಿಯ ಅನ್ನ ತಿಂದಿರುವೆ ಎಂದರು.

ವಿಜಯೇಂದ್ರನ ಹಾಗೆ ಪಕ್ಷ ದ್ರೋಹ ಕೆಲಸ ಮಾಡುವುದಿಲ್ಲ. ಮೋದಿ ಬಗ್ಗೆ ಯಾರೇ ಮಾತನಾಡಿದರೂ ಸಹನೆ ಮಾಡಿಕೊಳ್ಳಲ್ಲ. ರಾಜ್ಯ ಬಿಜೆಪಿ ಉಸ್ತುವಾರಿಗಳು ಹೈಕಮಾಂಡಗೆ ರಾಜ್ಯದ ವಾಸ್ತವ ವಿಷಯ ಹೇಳಬೇಕು. ಸಭೆಯ ಹೊರಗೆ 50 ಕ್ಕೂ ಹೆಚ್ಚು ಶಾಸಕರು ವಿಜಯೇಂದ್ರ ವಿರುದ್ದವೇ ಮಾತನಾಡುತ್ತಾರೆ, ಯತ್ನಾಳ ವಾಪಸ್​ ಸೇರ್ಪಡೆ ಕುರಿತು ಎಲ್ಲರ ಒಲವಿದೆ ಎಂದು ತಿಳಿಸಿದರು.

ನನ್ನ ವಾಪಸಾತಿ ಕುರಿತು ರಮೇಶ ಜಾರಕಿಹೋಳಿ, ಅರವಿಂದ ಲಿಂಬಾವಳಿ, ಹರೀಶ, ಸಿದ್ದೇಶ್​ ಹಾಗೂ ಇತರರು ನೇತೃತ್ವ ವಹಿಸಿದ್ದಾರೆ. ಯತ್ನಾಳರಂತ ಒಳ್ಳೆ ನಾಯಕನನ್ನು ಕಳೆದುಕೊಂಡೇವು ಎಂದು ವರಿಷ್ಠರಿಗೆ ಅನಿಸುತ್ತಿದೆ. ಅದೇನೇ ತಪ್ಪಾಗಿದ್ದರೂ ಸರಿ ಮಾಡಲಾಗುತ್ತದೆ ಎಂದು ಕೆಲ ದೆಹಲಿ ನಾಯಕರು ರಮೇಶ ಜಾರಕಿಹೋಳಿಗೆ ಮಾತನಾತನಾಡಿದ್ದಾರೆ ಎಂದು ಯತ್ನಾಳ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net