ಹಿಂದುಗಳು ಯಾರು ಓಟ್ ಹಾಕಿಲ್ವಾ?: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ

Vijayendra's criticism against Congress Mandya
Published on

ಮಂಡ್ಯ: ಜನಪರ ಆಡಳಿತ ಕೊಡುತ್ತೇವೆಂದು ಮೊಸಳೆ ಕಣ್ಣೀರು ಹಾಕಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೀಗ ಹಿಂದುಳಿದ ಸಮುದಾಯವನ್ನು ಮರೆತು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಆಯೋಜಿಸಿದ್ದ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಅವರು, ಮುಸಲ್ಮಾನರ ಮಕ್ಕಳ ಓದಿ ಎಂದು 30 ಲಕ್ಷ ರೂ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ನಿಮಗೆ ಹಿಂದುಗಳು ಯಾರು ಓಟ್ ಹಾಕ್ಲಿಲ್ವಾ?. ಕೇಂದ್ರ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಬೇಕು ಎಂದು ದುರಹಂಕಾರದ ಸಿಎಂ ಮಾತನಾಡುತ್ತಾರೆ. ಬೆಲೆ ಏರಿಕೆ ಮಾಡಿರುವ ಸಿದ್ದರಾಮಯ್ಯಗೆ ಕಪಾಳ ಮೋಕ್ಷ ಮಾಡಬೇಕೋ?. ಜನಪರ ಕೆಲಸ ಮಾಡಿದ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಪಾಳ ಮೋಕ್ಷ ಮಾಡಬೇಕಾ ಎಂದು ಕೇಳಿದರೆ ರಾಜ್ಯದ ಜನ ಸಿದ್ದರಾಮಯ್ಯಗೆ ಕಪಾಳ ಮೋಕ್ಷ ಮಾಡಬೇಕು ಎನ್ನುತ್ತಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರ ರೈತರಿಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಮತ್ತೊಂದು ಕಡೆ ವಿದ್ಯುತ್ ದರ ಏರಿಸಿ ಬರೆ ಹಾಕುತ್ತಿದೆ. ರೈತರ ಮಕ್ಕಳಿಗೆ ನೀಡುತ್ತಿದ್ದ ರೈತ ವಿದ್ಯಾನಿಧಿಯನ್ನು ರದ್ದುಮಾಡಿ ಮುಸ್ಲಿಂ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಧಹನ ನೀಡುತ್ತಿದೆ. ಮುಸ್ಲಿಂ ತುಷ್ಟೀಕರಣ ಮಾಡಿ, ಬಹುಸಂಖ್ಯಾತ ಹಿಂದುಗಳಿಗೆ ಅಪಮಾನ ಮಾಡುತ್ತಿದ್ದಾರೆ. ನಾವೀಗ ಬೆಲೆ ಏರಿಕೆ ವಿರುದ್ಧ ಜನಜಾಗೃತಿ ಮೂಡಿಸಲು ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದೇವೆ. ಅಹಿಂದ ನಾಯಕ ಎಂದು ಹೇಳುವ ಸಿದ್ದರಾಮಯ್ಯ ಅವರ ಸರ್ಕಾರ ಬಡವರು ಮತ್ತು ದಲಿತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂದು ಟೀಕಿಸಿದರು.

ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವಥನಾರಾಯಣ್, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಸಂಸದೆ ಸುಮಲತಾ ಅಂಬರೀಷ್ ಇತರರಿದ್ದರು.

ಬಿರಿಯಾನಿ ತಿನ್ನೋಕೆ ತ.ನಾಡಿಗೆ ಹೋಗಿದ್ದಾ?: ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿದ್ದರು. ಈಗ ಅವರೇ ಅಧಿಕಾರದಲ್ಲಿದ್ದರೂ ಮೇಕೆದಾಟು ಯೋಜನೆ ಜಾರಿಗೊಳಿಸುತ್ತಿಲ್ಲ. ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರೋಧಿಸಿದ್ದಾರೆ. ಹಾಗಿದ್ದರೆ ಡಿಕೆಶಿ ತ.ನಾಡಿಗೆ ಹೋಗಿದ್ದು ಬಿರಿಯಾನಿ ತಿಂದುಕೊಂಡು ಬರೋಕಾ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದರು.

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದೆ. ಆದರೆ ಯೋಜನೆ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಸಭೆ ಕರೆದರೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರದವರು ಹೋಗಲಿಲ್ಲ. ಇದನ್ನೇ ಅಲ್ಲವೇ ಎರಡು ನಾಲಗೆ ಎನ್ನುವುದು. ಮೇಕೆದಾಟು ವಿಚಾರದಲ್ಲಿ ಮೊಸಳೆ ಕಣ್ಣೀರು ಸುರಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಈಗ ಡಿಎಂಕೆ ದೋಸ್ತಿ ಉಳಿಸಿಕೊಳ್ಳಲು ತ.ನಾಡಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಬಿಟ್ಟದೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net