

ಮೈಸೂರು: ‘ಮೈಸೂರು ಚಲೋ’ ಪಾದಯಾತ್ರೆ ಪ್ರಾರಂಭಗೊಳ್ಳುವ ಮುನ್ನ ಚಾಮುಂಡಿಬೆಟ್ಟಕ್ಕೆ ಆಗಮಿಸಿ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶನಿವಾರ ಪಾದಯಾತ್ರೆ ಮುಕ್ತಾಯಕ್ಕೂ ಮುನ್ನ ಕಲ್ಯಾಣಗಿರಿಯ ಶ್ರೀ ಕಲ್ಯಾಣ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ‘ಮೈಸೂರು ಚಲೋ’ ಪಾದಯಾತ್ರೆಗೆ ಯಶಸ್ಸು ದೊರೆತ ರೀತಿಯಲ್ಲಿಯೇ ಪ್ರತಿಭಟನಾ ಸಮಾವೇಶಕ್ಕೂ ಯಶಸ್ಸು ದೊರೆಯಲಿ ಎಂದು ಪ್ರಾರ್ಥಿಸಿದರು. ಇದಾದ ನಂತರ ನಗರದ ಕೆ.ಆರ್. ವೃತ್ತಕ್ಕೆ ಆಗಮಿಸಿ ಆಧುನಿಕ ಮೈಸೂರಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ದರು.