

ಮೈಸೂರು: ಪಂಚಮಸಾಲಿ ಮೀಸಲಾತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ನನ್ನ ಹೆಸರನ್ನು ಅನಗತ್ಯವಾಗಿ ಪದೇ ಪದೇ ಎಳೆದು ತರಲಾಗುತ್ತಿದೆ. ಪಂಚಮಸಾಲಿ ಮೀಸಲಾತಿಗೆ ಯಡಿಯೂರಪ್ಪ ಎಲ್ಲೂ ವಿರೋಧ ಮಾಡಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಮೇಲೆ ಯಡಿಯೂರಪ್ಪ ಯಾವುದೇ ಒತ್ತಡ ಹೇರಿಲ್ಲ. ಆದರೆ, ಯಡಿಯೂರಪ್ಪ ಮತ್ತು ನಾನು ಪಂಚಮಸಾಲಿ ಲಿಂಗಾಯತರ ವಿರೋಧಿ ಎಂಬ ರೀತಿಯಲ್ಲಿ ಬಿಂಬಿಸುವ ಕಾರ್ಯ ನಡೆಯುತ್ತಿದೆ. ಈ ವಿಚಾರದಲ್ಲಿ ಯಾರೋ ರಾಜಕೀಯ ಕಾರಣಕ್ಕೆ ಸ್ವಾಮೀಜಿ ಅವರು ಮನಸ್ಸು ಕೆಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಐಸಿಸ್‌ನೊಂದಿಗೆ ನಂಟು ಹೊಂದಿರುವ ಯುವಕರನ್ನು ಬಂಧಿಸಲಾಗಿದೆ. ಯುವಕರು ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವುದು ಆತಂಕಕಾರಿ ಬೆಳವಣಿಗೆ. ಕೇವಲ ಶಿವಮೊಗ್ಗ ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂತಹ ಬೆಳವಣಿಗೆ ಕಂಡುಬಂದಿದೆ. ಇಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಪಡೆದವರೇ ಐಸಿಸ್ ಸೇರ್ಪಡೆಯಾಗುತ್ತಿರುವುದು ಕಳವಳ ಉಂಟು ಮಾಡಿದೆ. ರಾಷ್ಟ್ರಕವಿ ಕುವೆಂಪು ಹೇಳಿದಂತೆ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ, ಇಲ್ಲಿನ ಶಾಂತಿ ವಾತಾವರಣ ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.