

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಹಿಂದ ಹೆಸರು ಹೇಳಿ ಅಧಿಕಾರ ಪಡೆದು ಇದೀಗ ಅಹಿಂದ ವರ್ಗಕ್ಕೆ ದ್ರೋಹ ಬಗೆಯುವ ಕಾರ್ಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
‘ಮೈಸೂರು ಚಲೋ’ ಪಾದಯಾತ್ರೆ ಯಶಸ್ವಿಗೆ ಶನಿವಾರ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿದೆ. ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸೇರಿದಂತೆ ಹಲವು ವಿಚಾರ ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸುತ್ತಿದ್ದೇವೆ ಎಂದರು.
ನನ್ನ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಏಕವಚನದಲ್ಲಿ ಮಾತನಾಡಿದ್ದಾರೆ. ಅಧಿಕಾರ ಬಂದಾಗ ಕಾಂಗ್ರೆಸ್‌ನವರಿಗೆ ಈ ರೀತಿ ಆಗುತ್ತದೆ. ಅದರ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ. ಪಾದಯಾತ್ರೆ ಮೊಟಕುಗೊಳಿಸುವ ಪ್ರಶ್ನೆ ಇಲ್ಲ. ಕಾಂಗ್ರೆಸ್‌ನವರು ಕೈಗೊಳ್ಳುವ ಪಾದಯಾತ್ರೆಯು ಪಶ್ಚಾತಾಪದ ಯಾತ್ರೆಯಾಗಿದ್ದು, ಕೊಟ್ಟ ಭರವಸೆ ಈಡೇರಿಸಲು ಆಗಲಿಲ್ಲ ಎಂಬ ಪಶ್ಚಾತ್ತಾಪದಲ್ಲಿ ಕಾಂಗ್ರೆಸ್‌ನವರು ಇದ್ದಾರೆ ಎಂದು ಟೀಕಿಸಿದರು.