ದೀಪಾವಳಿಗೆ ವಿಜಯೇಂದ್ರ ಉಡುಗೊರೆ

murugesh nirani
Published on

ಹುಬ್ಬಳ್ಳಿ: ದೀಪಾವಳಿ ಉಡುಗೊರೆಯಾಗಿ ಕೇಂದ್ರ ನಾಯಕರು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಇದನ್ನು ನಾವೆಲ್ಲರೂ ಸ್ವಾಗತಿಸಿದ್ದೇವೆ. ಅವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇವೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮತನಾಡಿದ ಅವರು, ರಾಜ್ಯಾಧ್ಯಕ್ಷರ ಆಯ್ಕೆಯ ಬಳಿಕ ಕೆಲವರಿಗೆ ಅಸಮಾಧಾನ ಇರುವುದು ಸಹಜ. ಪ್ರತಿ ಕ್ಷೇತ್ರದಲ್ಲೂ ರಾಜ್ಯಾಧ್ಯಕ್ಷರಾಗುವಂಥ ವ್ಯಕ್ತಿಗಳು ನಮ್ಮ ಪಕ್ಷದಲ್ಲಿ ಇದ್ದಾರೆ. ಆದರೆ, ಒಬ್ಬರೇ ಅಧ್ಯಕ್ಷರಾಗಬೇಕು. ಬಿ.ವೈ. ವಿಜಯೇಂದ್ರ ಆಗಿದ್ದಾರೆ. ಸಿ.ಟಿ. ರವಿ, ವಿ. ಸೋಮಣ್ಣ ಸೇರಿದಂತೆ ಅಸಮಾಧಾನಗೊಂಡವರನ್ನು ಸಮಾಧಾನ ಮಾಡುತ್ತೇವೆ. ಖುದ್ದು ಅವರ ಮನೆಗಳಿಗೆ ಬಿ.ವೈ. ವಿಜಯೇಂದ್ರ ಅವರು ಭೇಟಿ ನೀಡಲಿದ್ದಾರೆ ಎಂದರು.

ನಾನು ಲೋಕಸಭೆ ಚುನಾವಣೆಗೆ ನಿಲ್ಲುವುದಿಲ್ಲ. ನಾನು ರಾಜ್ಯ ರಾಜಕಾರಣದಲ್ಲಿರುತ್ತೇನೆ. ಗುರುವಾರ ರಾಜ್ಯಾಧ್ಯಕ್ಷರ ಪದಗ್ರಹಣ ನಡೆಯಲಿದೆ. ಶೀಘ್ರವೇ ಪ್ರತಿಪಕ್ಷ ನಾಯಕರ ಆಯ್ಕೆ ನಡೆಯಲಿದೆ. ಯತ್ನಾಳ ಸೇರಿ ಎಲ್ಲರೂ ಉನ್ನತ ಹುದ್ದೆ ಬಯಸುವುದು ಸಹಜ. ಕೆಲವು ಸಲ ತ್ಯಾಗವನ್ನೂ ಮಾಡಬೇಕಾಗುತ್ತದೆ ಎಂದು ಹೇಳಿದರು.

ನಾವು ಆಪರೇಷನ್ ಕಮಲ ಮಾಡುವುದಿಲ್ಲ. ಆದರೂ ಸ್ವಲ್ಪ ಕಾದು ನೋಡಿ. ಈ ಸರ್ಕಾರ ಐದು ವರ್ಷ ಇರಲಿ ಎಂದು ನಾವೂ ಬಯಸುತ್ತೇವೆ. ಆದರೂ ನಾವೇನೂ ಮಾಡಲು ಆಗುವುದಿಲ್ಲ. ಇದು ಕಾಂಗ್ರೆಸ್ ಸರ್ಕಾರ ಅಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ, ಪ್ರಿಯಾಂಕ ಖರ್ಗೆ, ಡಾ.ಜಿ. ಪರಮೇಶ್ವರ ಅವರ ಅಲೈಯನ್ಸ್ ಸರ್ಕಾರ. ಅದರ ನೇತೃತ್ವ ಮಾತ್ರ ಸಿದ್ದರಾಮಯ್ಯ ಅವರದು. ಇವರ ನಡುವಿನ ಜಗಳದಲ್ಲಿಯೇ ಸರ್ಕಾರ ಹೋಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net