

ಮಂಡ್ಯ: ಗ್ಯಾರಂಟಿ ಹೆಸರು ಹೇಳಿ ಒಂದು ಕಡೆ ಕೊಟ್ಟು ಮತ್ತೊಂದು ಕಡೆ ಕಸಿದುಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಬಡವರ ವಿರೋಧಿ ಸರ್ಕಾರ ಇದೆ. ಅಭಿವೃದ್ಧಿ ಶೂನ್ಯ, ರೈತ ವಿರೋಧಿ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಧಿವೇಶನ ಕಿವಿ ಹಿಂಡುವ ಕೆಲಸ ಮಾಡುತ್ತೇವೆ. ಈ ಮೂಲಕ ಕಾಂಗ್ರೆಸ್ ಸರ್ಕಾರದ ನಿಜ ಬಣ್ಣವನ್ನು ರಾಜ್ಯದ ಜನರ ಮುಂದೆ ಬಿಚ್ಚಿಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ಬಿಜೆಪಿ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭತ್ತ ನಾಟಿ ಮಾಡಿದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ನಂತರ ರೈತರ ಪರ ನಿರ್ಧಾರ ಮಾಡಿಲ್ಲ. ಬದಲಾಗಿ ಕಾವೇರಿಕೊಳ್ಳದ ರೈತರಿಗೆ ಅನ್ಯಾಯ ಆಗಿದೆ. ಐಎನ್‌ಡಿಐಎ ಒಕ್ಕೂಟದ ತಮಿಳುನಾಡಿನ ಸ್ಟಾಲಿನ್‌ಗೆ ಖುಷಿ ಪಡಿಸಲು ಸರ್ಕಾರ ಮುಂದಾಗಿದೆ. ಪರಿಣಾಮ ರೈತರು ಕಂಗಾಲಾಗಿದ್ದಾರೆ. ಮುಂದೆ ಬೀಕರ ಪರಿಸ್ಥಿತಿ ಪರಿಸ್ಥಿತಿ ಎದುರಾಗುತ್ತದೆ. ಶುದ್ದ ಕುಡಿಯುವ ನೀರನ್ನು ಕೊಡಬೇಕು. ಮುಂದಿನ ದಿನಗಳಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಲವಾರು ರೈತರ ಬೆಳೆಗೆ ಬೆಂಬಲ ಬೆಲೆ ಕೊಟ್ಟಿದ್ದಾರೆ. ಅದೇ ರೀತಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರು, ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು ಯೋಜನೆ ಜಾರಿಗೆ ತಂದರು. ರೈತರಿಗೆ ಅನುಕೂಲವಾಗಲೆಂದು ರಾಜ್ಯದಲ್ಲಿ ಜಾರಿಗೊಳಿಸಿದ್ದ ಕಿಸಾನ್ ಸಮ್ಮಾನ್ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ರೈತ ವಿದ್ಯಾನಿಧಿ ಯೋಜನೆ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಮೂರು ಲಕ್ಷ ರೂ ಕೊಟ್ಟರೂ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ಆಗುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಎನ್.ಚಲುವರಾಯಸ್ವಾಮಿ ಕೃಷಿ ಸಚಿವರಾಗಿದ್ದಾರೆ. ಅವರು ಈ ಭಾಗಕ್ಕೆ ಏನಾದರೂ ತರಲಿ. ಉತ್ತರ ಕರ್ನಾಟಕಕ್ಕೆ ಕೊಟ್ಟ ವಿಶ್ವವಿದ್ಯಾನಿಲಯವನ್ನು ಇಲ್ಲಿಗೆ ತರುವ ಅವಶ್ಯಕತೆ ಇಲ್ಲ. ಮಂಡ್ಯ ಜಿಲ್ಲೆಗೆ ಮತ್ತೊಂದು ವಿವಿ ಮಾಡಲಿ. ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಕೃಷಿ ವಿವಿ ಜತೆ ತೋಟಗಾರಿಕೆ ವಿವಿ ತರುವ ಕುತಂತ್ರ ನಡೆಯುತ್ತಿದೆ. ಚಲುವರಾಯಸ್ವಾಮಿ ರಾಜ್ಯಕ್ಕೆ ಸಚಿವರು. ಅವರು ತಾರತಮ್ಯ ಮಾಡಬಾರದು. ಬದಲಿಗೆ ಎಲ್ಲ ಜಿಲ್ಲೆಗೆ ನ್ಯಾಯ ಕೊಡುವ ಕೆಲಸ ಮಾಡಲಿ ಎಂದ ಅವರು, ಡಿಸಿಎಂ ಡಿಕೆಶಿ ನಟ್ಟು, ಬೋಲ್ಟ್ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿಕೆಶಿ ಅವರಿಗೆ ವಿನಮ್ರವಾಗಿ ಹೇಳುತ್ತೇನೆ. ಅಧಿಕಾರ ಶಾಶ್ವತ ಅಲ್ಲ, ಯಾರು ನಿಮ್ಮ ಗುಲಾಮರಲ್ಲ. ಅಧಿಕಾರ ಶಾಶ್ವತ ಎನ್ನುವ ವರ್ತನೆ ಸರಿಯಲ್ಲ. ಬಂಡತನ ಬಿಟ್ಟು ತಪ್ಪಿಗೆ ಕ್ಷಮೆಯಾಚಿಸಿ ಎಂದು ಆಗ್ರಹಿಸಿದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಯುವ ಮುಖಂಡ ಇಂಡುವಾಳು ಸಚ್ಚಿದಾನಂದ, ಬೊಮ್ಮನಹಳ್ಳಿ ಶಾಸಕ ಸತೀಶ್‌ರೆಡ್ಡಿ, ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಕಾರ್ಯದರ್ಶಿ ಡಾ.ಲಕ್ಷ್ಮೀ ಅಶ್ವಿನ್‌ಗೌಡ, ಜಿಲ್ಲಾ ಉಪಾಧ್ಯಕ್ಷ ಶ್ರೀಧರ್, ಬೇವಿನಹಳ್ಳಿ ಗ್ರಾಪಂ ಅಧ್ಯಕ್ಷ ಮಹೇಶ್, ಸದಸ್ಯ ಚೇತನ್, ಮಾಜಿ ಅಧ್ಯಕ್ಷ ಜವರೇಗೌಡ, ತಾಪಂ ಮಾಜಿ ಸದಸ್ಯ ಯೋಗಾನಂದ ಪಾಟೀಲ್ ಮರೀಗೌಡ, ಡೇರಿ ಅಧ್ಯಕ್ಷ ಯೋಗೇಶ್, ಮುಖಂಡರಾದ ಸುಖೇಂದ್ರ, ಪ್ರದೀಪ್, ನಾಗರಾಜು, ಬಿ.ಎಂ.ಮಹೇಶ್, ಶಿವನಂಜು ಇತರರಿದ್ದರು.
ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ಮಾತನಾಡಿ, ರೈತರಿಗೆ ಉತ್ತೇಜನ ನೀಡುವ ಹಾಗೂ ಯುವಕರನ್ನ ಕೃಷಿಯತ್ತ ಆಕರ್ಷಿಸುವ ನಿಟ್ಟಿನಲ್ಲಿ ಭತ್ತ ನಾಟಿ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯಸರ್ಕಾರ ರೈತ ವಿರೋಧಿ ನಿರ್ಧಾರದಿಂದ ಕೃಷಿ ಕ್ಷೇತ್ರದಲ್ಲಿ ಹಲವು ಸಮಸ್ಯೆ ಎದುರಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರವು ಅಧಿಕಾರದಲ್ಲಿದ್ದಾಗ ರೈತರಿಗಾಗಿ ಹತ್ತಾರು ಕಾರ್ಯಕ್ರಮ ರೂಪಿಸಿತ್ತು. ಕೇಂದ್ರ ಸರ್ಕಾರದ ಮಾದರಿಯಲ್ಲೇ ರೈತರಿಗೆ ಕೃಷಿ ಸವ್ಮಾನ್ ಯೋಜನೆಯಡಿ 4000 ರೂ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಇದಲ್ಲದೆ ರೈತರ ಮಕ್ಕಳಿಗಾಗಿ ವಿದ್ಯಾಸಿರಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮೊದಲ ಬಾರಿಗೆ ಪ್ರತ್ಯೇಕವಾಗಿ ಕೃಷಿ ಬಜೆಟ್ ಮಂಡಿಸಿದ್ದರು. ಆದರೆ, ಈಗ ಕಾಂಗ್ರೆಸ್ ಸರ್ಕಾರವು ಬಿಜೆಪಿ ಜಾರಿಗೊಳಿಸಿದ್ದ ರೈತ ಪರ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ರೈತರು ಸಂಕಷ್ಟಕ್ಕೆ ಸಿಲುಕುವ ಜತೆಗೆ ಆರ್ಥಿಕ ನಷ್ಟಕ್ಕೂ ಒಳಗಾಗುತ್ತಿದ್ದಾರೆ. ಪರಿಣಾಮ ಎಷ್ಟೋ ಜನ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಹಾಗೂ ಕೃಷಿಯಿಂದ ದೂರ ಸರಿಯುತ್ತಿರುವ ರೈತರನ್ನು ಮತ್ತೆ ಕೃಷಿ ಯಂತ್ರ ಮರಳುವಂತೆ ಪ್ರೇರೇಪಿಸುವ ಸಲುವಾಗಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಕಾರ್ಯಕ್ರಮ ಮಾಡಲಾಗಿದೆ. ನಾಟಿಯಾಗಿರುವ ಭತ್ತ ಕೊಯ್ಲಿಗೆ ಬಂದಾಗ ನಮ್ಮ ಇದೇ ನಾಯಕರು ಭಾಗವಹಿಸುವರು ಎಂದರು.