

ಮಂಡ್ಯ: ನಾವು ಭ್ರಷ್ಟ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಅದೇ ರೀತಿ ಭ್ರಷ್ಟ ಸಿಎಂ ಸಿದ್ದರಾಮಯ್ಯನ್ನು ಅಧಿಕಾರದಿಂದ ಕೆಳಗೆ ಇಳಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಆಯೋಜಿಸಿದ್ದ ಮೈಸೂರು ಚಲೋ ಪಾದಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕೇವಲ 15 ತಿಂಗಳಲ್ಲಿ ಕಾಂಗ್ರೆಸ್ ಭ್ರಷ್ಟತೆಯಲ್ಲಿ ಮುಳುಗಿ ಹೋಗಿದೆ. ಭ್ರಷ್ಟ, ದುಷ್ಟ ಕಾಂಗ್ರೆಸ್‌ನಿಂದ ರಾಜ್ಯದ ಜನರಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟಕ್ಕೆ ದಿನದಿಂದ ದಿನಕ್ಕೆ ಬೆಂಬಲ ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ರಾಜ್ಯದ ವಿವಿಧೆಡೆಯಿಂದ ಆಗಮಿಸುತ್ತಿದ್ದಾರೆ. ಪ್ರತಿದಿನ 20 ರಿಂದ 25 ಸಾವಿರ ಜನರು ಸೇರುತ್ತಿದ್ದಾರೆ ಎಂದರು.
ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, ದಲಿತರ ಹೆಸರಿನಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮೇಕೆದಾಟು ಮಾಡುತ್ತೇವೆ ಎನ್ನುವ ಭರವಸೆಯನ್ನು ನೀಡಿದ್ದರು. ಆದರಿಂದು ಕೊಟ್ಟ ಮಾತನ್ನು ಮರೆತು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ನೂರಾರು ಕೋಟಿ ರೂ ಹಗರಣ ನಡೆದಿದೆ. ಕರ್ನಾಟಕದಲ್ಲಿ ಎಷ್ಟು ಹೆಗಣ ಇದ್ದಾವೋ, ಅಷ್ಟು ಹಗರಣ ಕಾಂಗ್ರೆಸ್‌ನಲ್ಲಿದೆ. ಮುಡಾ ಹಗರಣ ಸಿದ್ದರಾಮಯ್ಯ ಬಾಗಿಲಿಗೆ ಬಂದಿದೆ. ಸ್ವಚ್ಛ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ದಲಿತರ ದುಡ್ಡು ಹೊಡೆದುಕೊಳ್ಳಲು ನಾಚಿಕೆ ಆಗಲ್ವಾ?. ಪಿಎಸ್‌ಐ ಪರಶುರಾಮ್ ಆತ್ಮಹತ್ಯೆ ಆಗಿದೆ. ಸಿಎಂ ಅವರಿ ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ. ಸಿಎಂ ಸಿದ್ದರಾಮಯ್ಯ ಸಾಚಾತನ ಹೊರ ಬರುತ್ತಿದೆ. ಆದ್ದರಿಂದ ರಾಜೀನಾಮೆ ಕೊಟ್ಟು ಮೊದಲು ಹೊರ ಹೋಗಿ. ಎಸ್ಸಿ, ಎಸ್ಟಿ ಜನರಿಗೆ ನ್ಯಾಯ ಸಿಗಬೇಕು ಎಂದರು.
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಾಯಣ್ ಮಾತನಾಡಿ, ಪ್ರಗತಿಪರ ಇರುವ ರಾಜ್ಯ ನಮ್ಮದು. ಆದರೆ ಭ್ರಷ್ಟಾಚಾರದ ಸಾಕ್ಷಿ ಸಮೇತ ಸಿಎಂ ಸಿದ್ದರಾಮಯ್ಯ ಸಿಕ್ಕಿಕೊಂಡಿದ್ದಾರೆ. ರಾಜೀನಾಮೆ ಕೊಡದೆ ಅಧಿಕಾರ ಆಸೆಯಲ್ಲಿ ಇದ್ದಾರೆ. ಜನರ ಪ್ರೀತಿಗೆ ಗೌರವಿಸುವ ಯಾವ ಲಕ್ಷಣ ಕಾಣುತ್ತಿಲ್ಲ. ನಮ್ಮ ಪಕ್ಷದ ಮೇಲೆ ಸಾಕ್ಷೃ ಇಲ್ಲದೆ 40 ಪರ್ಸೆಂಟ್ ಎಂದು ಆರೋಪ ಮಾಡಿದ್ದರು. ಸಾಕ್ಷೃ ಸಮೇತ ಸಿಕ್ಕಿರುವ ಸಿಎಂ ಎಂದರೆ ಇತಿಹಾಸದಲ್ಲಿ ಅದು ಸಿದ್ದರಾಮಯ್ಯ. ಸ್ವಾರ್ಥಕ್ಕೆ ಈ ರೀತಿ ನಡೆ ಸರಿಯಲ್ಲ. ಸಿದ್ದರಾಮಯ್ಯಗೆ ರಾಜಕೀಯ ಅನುಭವ ಇರುವವರು, ಮೊಂಡತನ ಸರಿಯಲ್ಲ. ಅವರು ಜಗ್ಗಲೇ ಬೇಕು. ಕಾನೂನಿನ ಮೂಲಕ ನಿಮ್ಮ ರಾಜಿನಾಮೆ ಪಡೆಯುವ ಕೆಲಸ ಆಗುತ್ತೆ. ಇದು ಸತ್ಯ, ನ್ಯಾಯ, ಧರ್ಮಕ್ಕೆ ಈ ಪಾದಯಾತ್ರೆ ಎಂದು ಹೇಳಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಐದು ಲಕ್ಷ ರೂ ಕೊಟ್ಟು ಜಮೀನು ಖರೀದಿ ಮಾಡಿ ಇದೀಗ 62 ಕೋಟಿ ರೂ ಕೇಳುತ್ತಿದ್ದಾರೆ. ಇದು ಲೂಟಿನಾ, ಭ್ರಷ್ಟಾಚಾರದ ಕೂಪನಾ?. ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕುವವರು ಪಕ್ಕದಲ್ಲೇ ಕುಳಿತಿದ್ದಾರೆ. ಕಾಂಗ್ರೆಸ್‌ನಲ್ಲೆ ಬೆನ್ನಿಗೆ ಚೂರಿ ಹಾಕುವವರು ಇದ್ದಾರೆ. ಬಿಜೆಪಿ ಸರ್ಕಾರದಲ್ಲಿ ಹಗರಣ ನಡೆದಿತ್ತು ಎನ್ನುತ್ತಾರೆ. ವಿರೋಧ ಪಕ್ಷದಲ್ಲಿ ಇದ್ದಾಗ ಮಣ್ಣು ತಿನ್ನುತ್ತಿದ್ದರೆ, ಆಗ ಏಕೆ ಹಗರಣದ ಬಗ್ಗೆ ಪ್ರಶ್ನೆ ಮಾಡಲಿಲ್ಲ. ಈ ಹೋರಾಟ ಸಿದ್ದರಾಮಯ್ಯ ಲೂಟಿ ಮಾಡಿರುವ ಬಗ್ಗೆ. ಆ ಸೈಟ್‌ಗಳು ವಾಪಾಸ್ ಬರಬೇಕು. ಈ ಪಾದಯಾತ್ರೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ದಾರಿ ಮಾಡಿಕೊಡುತ್ತಿದ್ದಾರೆ. ಕಾರಣ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗೆ ಇಳಿದರೆ ಲಾಭ ಅವರಿಗೆ ತಾನೇ ಎಂದು ಕುಟುಕಿದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನಮಗೆ ನೀವು ಅಶೀರ್ವಾದ ಮಾಡಿದ್ದೀರಿ. ಕುಮಾರಸ್ವಾಮಿ ಅವರನ್ನ ಮಂಡ್ಯದಿಂದ ಇಂಡಿಯಾಕ್ಕೆ ಕಳುಹಿಸಿಕೊಟ್ಟೀದ್ದೀರಿ. ಭ್ರಷ್ಟ ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಟಿ ಜನರಿಗೆ ಮೀಸಲಿಟ್ಟ ಹಣವನ್ನ ಲೂಟಿ ಮಾಡಿದ್ದಾರೆ. ಸುಳ್ಳು ಭರವಸೆ ಕೊಟ್ಟು ಆಡಳಿತಕ್ಕೆ ಬಂದಿದ್ದಾರೆ. ಪರಿಶಿಷ್ಟ ಸಮುದಾಯದ ಪಿಎಸ್‌ಐ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರ್ಗಾವಣೆಗೆಂದು ನಲವತ್ತು ಲಕ್ಷ ರೂ ವಸೂಲಿ ಮಾಡಿದ್ದಾರೆ. ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರೈತ ಮೋರ್ಚಾ ರಾಷ್ಟ್ರಾಧ್ಯಕ್ಷ ರಾಜಕುಮಾರ್ ಚೌಹಾಲ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಕೆ.ಸಿ.ನಾರಾಯಣಗೌಡ, ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರಾದ ಸುರೇಶ್‌ಗೌಡ, ರಮೇಶ್‌ಗೌಡ, ಕೆ.ಟಿ.ಶ್ರೀಕಂಠೇಗೌಡ, ಎಂಎಲ್‌ಸಿ ಭೋಜೇಗೌಡ, ಚಿಕ್ಕನಾಯ್ಕನಹಳ್ಳಿ ಶಾಸಕ ಸುರೇಶ್‌ಬಾಬು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ ಇತರರಿದ್ದರು.