ಹಿಂದುಗಳ ಟಾರ್ಗೆಟ್ ಮಾಡಲು ಕೋಮು ನಿಗ್ರಹ ದಳ ಸ್ಥಾಪನೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ

B.Y.Vijayendra
Published on

ಮಂಡ್ಯ: ಕರಾವಳಿ ಭಾಗದಲ್ಲಿ ಸರಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ವ್ಯಕ್ತಿಯ ಹತ್ಯೆ ಮುಂದಿಟ್ಟುಕೊಂಡು ಹಿಂದು ಕಾರ್ಯಕರ್ತರನ್ನ ಬಂಧಿಸುತ್ತಿದ್ದಾರೆ. ಹಿಂದು ಕಾರ್ಯಕರ್ತರನ್ನ ಟಾರ್ಗೆಟ್ ಮಾಡಲು ಕೋಮು ನಿಗ್ರಹ ದಳವನ್ನು ರಾಜ್ಯಸರ್ಕಾರ ಸ್ಥಾಪನೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸರು ಅತಿರೇಕದ ವರ್ತನೆ ತೋರುತ್ತಿದ್ದಾರೆ. ಹಿಂದು ಕಾರ್ಯಕರ್ತರನ್ನು ಬಂಧಿಸಿದರೆ ಪರಿಸ್ಥಿತಿ ಮಿತಿ ಮೀರಲಿದೆ. ಅದಕ್ಕೆ ಕಾಂಗ್ರೆಸ್ ಸರ್ಕಾರ, ಸಿಎಂ, ಗೃಹಸಚಿವರು ಹೊಣೆಯಾಗುತ್ತಾರೆ. ಇದು ಕಾಂಗ್ರೆಸ್ ಸರ್ಕಾರಕ್ಕೆ ಶೋಭೆ ತರಲ್ಲ ಎಂದರು.

ಆಪರೇಷನ್ ಸಿಂಧೂರ ನಡೆದಾಗ ಇಂಟಲಿಜೆನ್ಸ್ ಬಗ್ಗೆ ಕಾಂಗ್ರೆಸ್‌ನವರು ಮಾತನಾಡಿದ್ದರು. ಆದರೆ ಈಗ ಮಂಗಳೂರಿನಲ್ಲಿ ಕೊಲೆಯಾಗುತಿದೆ. ಈಗ ರಾಜ್ಯ ಸರ್ಕಾರ ಏನು ಮಾಡುತ್ತಿದೆ. ಇವರ ಬಳಿ ಇಂಟಲಿಜೆನ್ಸ್ ಇಲ್ಲವೇ?. ಸುಹಾಸ್ ಶೆಟ್ಟಿ ಹತ್ಯೆಗೆ ಹೊರ ದೇಶದಿಂದಲೂ ಹಣ ಬಂದಿದೆ ಎನ್ನಲಾಗುತ್ತಿದೆ. ಆದರೆ ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿರುವ ಸರ್ಕಾರ ಮುಂದೆ ಬೆಲೆ ತೆತ್ತಬೇಕಾಗುತ್ತದೆ ಎಂದ ಅವರು, ಗಲಭೆ ಕೋರರ ಪ್ರಕರಣ ವಾಪಸ್ ಪಡೆದಿದ್ದಕ್ಕೆ ನ್ಯಾಯಾಲಯ ಕೂಡ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ನಾವು ಕೂಡ ಅದರ ರಾಜ್ಯಸರ್ಕಾರ ವಿರುದ್ದ ಪ್ರತಿಭಟನೆ ಮಾಡಿದ್ದೆವು. ಆದರೂ ಕೇಸ್ ವಾಪಸ್ ತೆಗೆದುಕೊಂಡರು. ಆದ್ದರಿಂದ ಕೋರ್ಟ್ ಮಂಗಳಾರತಿ ಮಾಡಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಮಳೆ ಅವಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಳೆ ಅವಾಂತರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದಿಂದ ತಂಡ ಮಾಡಲು ತೀರ್ಮಾನಿಸಲಾಗಿದೆ. ಪಕ್ಷದ ನಾಯಕರು ಹಾಗೂ ಮುಖಂಡರು ಪ್ರವಾಸ ಕೈಗೊಳ್ಳಲು ಹೇಳಿದ್ದೇನೆ. ರಾಜ್ಯ ಸರ್ಕಾರ ಗ್ಯಾರಂಟಿಯ ಅಮಲಿನಲ್ಲಿದ್ದಾರೆ. ಇಷ್ಟೆಲ್ಲ ಮಳೆಯಾದರೂ ಕೂಡ ರೈತರಿಗೆ ಬಿತ್ತನೆ ಬೀಜ ಕೊಟ್ಟಿಲ್ಲ. ರೈತರು ಪರದಾಡುತ್ತಿದ್ದಾರೆ. ರಾಜ್ಯ ಸರ್ಕಾರ ಎಚ್ಚೆತ್ತು ರೈತರಿಗೆ ಅನುಕೂಲವಾಗುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ತುಮಕೂರು ಜಿಲ್ಲೆಯ ಎಲ್ಲ ತಾಲೂಕಿಗೂ ಹೇಮಾವತಿ ನೀರು ಸಿಗಬೇಕು. ರೈತರಿಗೆ ನ್ಯಾಯಸಿಬೇಕು ಎಂಬುದು ಬಿಜೆಪಿ ಹಾಗೂ ಅನ್ನದಾತರ ಬೇಡಿಕೆ. ಆದರೆ ಬಿಜೆಪಿ ಕಾರ್ಯಕರ್ತರನ್ನ ಬಂಧಿಸುವ ಕೆಲಸ ಮಾಡುತ್ತಿದೆ. ರೈತರ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಸರ್ಕಾರ ತುಮಕೂರು ಜಿಲ್ಲೆಯ ತಾಲೂಕುಗಳಿಗೆ ಅನ್ಯಾಯ ಮಾಡಲು ಹೊರಟಿದೆ. ಇದರಿಂದ ಜನರು ಕೂಡ ಎಚ್ಚೆತ್ತುಕೊಂಡಿದ್ದಾರೆ. ಮುಂದಿನ ದಿನದಲ್ಲಿ ಹೋರಾಟ ಹೆಚ್ಚಾಗಲಿದೆ ಎಂದು ಎಚ್ಚರಿಸಿದರು.

ಮಂಡ್ಯದಲ್ಲಿ ಮಗು ಸಾವಿನ ದುರಂತ ನಡೆದಿದೆ. ನಾಯಿ ಕಚ್ಚಿರುವುದಕ್ಕೆ ಆಸ್ಪತ್ರೆಯಲ್ಲಿ ಔಷಧ ಇಲ್ಲ. ರಾಜ್ಯದ ಸರ್ಕಾರಿ ಆಸ್ಪತ್ರೆಯ ಸ್ಥಿತಿ ಹೇಗಿದೆ?. ಪೊಲೀಸರಿಗೆ ರಾಜ್ಯ ಸರ್ಕಾರ ಒತ್ತಡ ನೀಡುತ್ತಿದೆ. ಗ್ಯಾರಂಟಿ ಹಣಕ್ಕಾಗಿ ಎಲ್ಲ ಇಲಾಖೆಗೆ ರಾಜ್ಯ ಸರ್ಕಾರ ಟಾರ್ಗೆಟ್ ನೀಡಿದೆ. ಹಣದ ಕಲೆಕ್ಷನ್ ಎಲ್ಲ ಕಡೆ ನಡೆಯುತ್ತಿದೆ. ಪೊಲೀಸರಿಂದ ಮಗು ಸಾವಾಗಿದೆ, ನಮ್ಮ ಶತ್ರುಗಳಿಗೂ ಆ ಪರಿಸ್ಥಿತಿ ಬರಬಾರದು. ಮೃತ ಮಗು ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ರಾಜ್ಯದ ಮುಖ್ಯಮಂತ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧ ಕೇಂದ್ರ ಮುಚ್ಚಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದೆ. ಬಡವರಿಗೆ ಕೇಂದ್ರದ ಯೋಜನೆ ತಲುಪಬಾರದೆಂದು ಕೆಟ್ಟ ರಾಜಕಾರಣ ಮಾಡಲಾಗುತ್ತಿದೆ. ರಾಜ್ಯದಲ್ಲಿ ಆಸ್ಪತ್ರೆಯ ಪರಿಸ್ಥಿತಿ ಬಗ್ಗೆ ಆರೋಗ್ಯ ಸಚಿವರು ಗಮನಿಸಬೇಕು ಎಂದು ಆಗ್ರಹಿಸಿದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷರ ಗೌರವಧನ ಬಿಡುಗಡೆಗೆ ಆದೇಶ ಮಾಡಲಾಗಿದೆ. ರಾಜ್ಯದ ಜನರ ತೆರಿಗೆ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರ ಸಾಕಲು ಬಳಸಿಕೊಳ್ತಿದ್ದಾರೆ. ಸರ್ಕಾರದಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಗ್ಯಾರಂಟಿಗೆ ಹಣ ಕೂಡಿಕ್ಕಲು ಸಾಧ್ಯವಾಗದೆ ಕಸದ ಮೇಲೆ ತೆರಿಗೆ ಹಾಕಲಾಗುತ್ತಿದೆ. ಇಂತಹ ಸರ್ಕಾರದ ಬೇಕಾ?. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಶಾಸಕರು ಪರದಾಡುತ್ತಿದ್ದಾರೆ. ಬೆಲೆ ಏರಿಕೆ ಮಾಡಿ ಬಡವರಿಗೆ ಬರೆ ಎಳೆಯುತ್ತಿದೆ. ಚುನಾವಣೆ ಬಂದರೆ ಕಾಂಗ್ರೆಸ್ ಹೀನಾಯವಾಗಿ ಸೋಲೋದು ನಿಶ್ಚಿತ ಎಂದು ವರದಿ ಬಂದಿದೆ. ಒಟ್ಟಾರೆ ಬಡವರ ವಿರೋಧಿ ಸರ್ಕಾರ ತೊಲಗಬೇಕು ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net