ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮುಂದುವರಿಕೆ

New bjp pm new
Published on

ಹುಬ್ಬಳ್ಳಿ : ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಹಿನ್ನೆಲೆಯಲ್ಲಿ ಹಲವಾರು ಊಹಾಪೋಹಗಳು ಹುಟ್ಟಿಕೊಂಡಿವೆ. ಆದರೆ, ಬಿ.ವೈ. ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದು ವಿಧಾನಸಭೆ ಪ್ರತಿಪಕ್ಷದ ಸಚೇತಕ ದೊಡ್ಡನಗೌಡ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಅವರು ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ. ಅವರ ಕಾರ್ಯವೈಖರಿ ಪಕ್ಷದ ರಾಷ್ಟ್ರೀಯ ಮುಖಂಡರಿಗೂ ಇಷ್ಟವಾಗಿದೆ ಎಂದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಸೇರಲು ಮುಂದಾಗಿದ್ದರು ಎಂಬ ಅರವಿಂದ ಲಿಂಬಾವಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ದೊಡ್ಡನಗೌಡ ಪಾಟೀಲ, ಈ ರೀತಿಯ ಸುಳ್ಳು ಹೇಳಿಕೆ ಹಬ್ಬಿಸುವುದನ್ನು ಪಕ್ಷದ ಶಿಸ್ತು ಉಲ್ಲಂಘನೆಯೆಂದು ಪರಿಗಣಿಸಲಾಗುತ್ತದೆ. ಪಕ್ಷದಲ್ಲಿ ಅಲ್ಪಮಟ್ಟಿನ ಭಿನ್ನಮತ ಇದ್ದು, ಸರಿದೂಗಿಸಿಕೊಂಡು ಹೋಗಲಾಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಮಧ್ಯೆ ನಡೆಯುತ್ತಿರುವ ಕಿತ್ತಾಟ ಹಾಗೂ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ಈ ಬಗ್ಗೆ ಆಡಳಿತ ಪಕ್ಷದ ಶಾಸಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ತಂಗಡಗಿ ರಾಜೀನಾಮೆ ನೀಡಲಿ: ನೆಲಮಂಗಲದ ತೈಲೇಶ್ವರ ಗಾಣಿಗೇರ ಮಹಾಸಂಸ್ಥಾನ ಮಠಕ್ಕೆ ಶಿವರಾಜ ತಂಗಡಗಿ 3.5 ಕೋಟಿ ರೂ. ಬಿಡುಗಡೆ ಮಾಡಬೇಕಿತ್ತು. ಆದರೆ, ಶೇ. 25ರಷ್ಟು ಕಮಿಷನ್ ಕೇಳುತ್ತಿದ್ದಾರೆಂದು ಸ್ವತಃ ಶ್ರೀಮಠದ ಸ್ವಾಮೀಜಿ ಪೂರ್ಣಾನಂದ ಪುರಿಯವರು ಆರೋಪಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿರುವುದಕ್ಕೆ ಇದು ಮತ್ತೊಂದು ನಿದರ್ಶನ. ತಂಗಡಗಿ ಅವರು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಗ್ಯಾರಂಟಿ ಯೋಜನೆಗಳ ವೈಫಲ್ಯ, ಮಿತಿ ಮೀರಿದ ಭ್ರಷ್ಟಾಚಾರ, ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿರುವುದರಿಂದ ರಾಜ್ಯದ ಜನರು ಚುನಾವಣೆಗೆ ಕಾಯುತ್ತಿದ್ದಾರೆ ಎಂದು ಹೇಳಿದರು.

ಕೆ.ಎಸ್. ಈಶ್ವರಪ್ಪ ಅವರನ್ನು ಮರಳಿ ಬಿಜೆಪಿ ಕರೆತರುವ ವಿಚಾರ ಪಕ್ಷದ ಹೈಕಮಾಂಡ್​ಗೆ ಬಿಟ್ಟಿದ್ದು. ಬಿಜೆಪಿಯಲ್ಲಿ ಹಿಂದುಳಿದ ನಾಯಕರಿಗೆ ಕೊರತೆ ಇಲ್ಲ. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಹಿಂದಕ್ಕೆ ಹೋಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net