

ತುಮಕೂರು: ಶಿರಾ ಧರ್ಮಯುದ್ಧಕ್ಕೆ ನಾವು ಪಂಚಪಾಂಡವರನ್ನು ಕಳಿಸಿಕೊಟ್ಟಿದ್ದೇವೆ. ಪಂಚಪಾಂಡವರ ಸಾರಥ್ಯವಹಿಸಲು ಒಬ್ಬ ಕೃಷ್ಣ ಇರಲಿ ಅಂತ ಹೇಳಿ ಡಿಸಿಎಂ ಗೋವಿಂದ ಕಾರಜೋಳ ಅವರನ್ನು ಕಳಿಸಿದ್ದೇವೆ. ಅವರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಣ್ಣಿಸಿದರು.
ತಾಲೂಕಿನ ಮದಕ್ಕನಹಳ್ಳಿಯಲ್ಲಿ ಬುಧವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅರ್ಜುನನಾಗಿದ್ದು, ಪ್ರತಾಪ್‌ಸಿಂಹ ಭೀಮ, ಧರ್ಮರಾಯನಾಗಿ ಸುರೇಶ್‌ಗೌಡ, ನಕುಲ- ಸಹದೇವರಾಗಿ ರವಿಕುಮಾರ್, ನಾರಾಯಣಸ್ವಾಮಿ ಇದ್ದಾರೆ ಎಂದರು.
ಮಹಾಭಾರತ ಧರ್ಮಯುದ್ಧದಲ್ಲಿ ಗೆದ್ದದ್ದು ಪಾಂಡವರು. ಧರ್ಮಯುದ್ಧ ನಡಿಲಿ ಅಂತಾನೇ ಪಂಚಪಾಂಡವರನ್ನು ಕಳಿಸಿಕೊಟ್ಟಿದ್ದೇವೆ ಹಾಗಾಗಿ, ಯುದ್ಧದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಡಿಕೆಗೆ ಟಾಂಗ್: ಬಂಡೆಯ ಸಮಸ್ಯೆ ಪರಿಹಾರ ಮಾಡುವಂತಹ ನಾಯಕ ಇದ್ದರೆ ಅದು ಯಡಿಯೂರಪ್ಪ ಮಾತ್ರ. ನಿಮ್ಮ ಬಂಡೆಯ ಸಮಸ್ಯೆ ನಾವು ಪರಿಹಾರ ಮಾಡುತ್ತೇವೆ. ಆದರೆ, ನೀವು ಒಡೆಯಬೇಕಾಗಿರುವುದು ಕನಕಪುರದ ಬಂಡೆಯನ್ನು. ನನಗೆ ವಿಶ್ವಾಸ ಇದೆ ನಿಮ್ಮ ಬಂಡೆಯನ್ನು ನಾವು ಒಡೆದು ಕೊಡುತ್ತೇವೆ. ಕನಕಪುರದ ಬಂಡೆಯನ್ನು ನೀವು ಒಡಿತೀರಾ ಅಂತ ಎಂದು ತಮ್ಮದೇ ದಾಟಿಯಲ್ಲಿ ಡಿಕೆಶಿಗೆ ಟಾಂಗ್ ಕೊಟ್ಟರು.
ಹುಲಿಯಾಗೆ ಲೇವಡಿ: ಈ ಊರಿನಲ್ಲಿ ಕಾಡುಪ್ರಾಣಿಯ ಕಾಟ ಇದೆ ಅಂತ ಹೇಳಲಾಗುತ್ತಿದೆ. ಕಾಡುಪ್ರಾಣಿಯ ಸಮಸ್ಯೆ ಇಲ್ಲಿ ದೊಡ್ಡದಿದೆ, ಅಂದರೆ ಇಲ್ಲಿ ಹುಲಿಯಾ ಬಂದು ನಿಂತಿದೆ. ಹುಲಿಯಾನನ್ನು ಓಡಿಸಬೇಕು ಎಂದು ನಳೀನ್ ಕುಮಾರ್‌ಕಟೀಲ್ ಲೇವಡಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ವಾಧುಸ್ವಾಮಿ ಅವರು ಕೊರೊನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಸಲಹೆ ಮೇರೆಗೆ ಇನ್ನೂ ಕೆಲವು ದಿನ ಕ್ವಾರಂಟೈನ್‌ನಲ್ಲಿರಲಿದ್ದು ಈ ಅವಧಿ ಮುಗಿದ ನಂತರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ. ನಳಿನ್‌ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ