

ಹುಬ್ಬಳ್ಳಿ : ಕಳೆದ ಆರು ತಿಂಗಳಿಂದ ಬಿಜೆಪಿ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ಅತ್ತೂ ಕರೆದು ಆಯ್ಕೆ ಮಾಡಿಸಿಕೊಂಡಂತಹ ಸ್ಥಿತಿ ಬಿ.ವೈ. ವಿಜಯೇಂದ್ರ ಅವರದ್ದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಟೀಕಿಸಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಪಕ್ಷವಾಗಿ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ವಿಳಂಬ ಇಲ್ಲದೇ ಮಾಡಬೇಕಿತ್ತು. ಆದರೆ, ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಆಗಿರುವ ವಿಳಂಬತನ ಗಮನಿಸಿದರೆ ಆ ಪಕ್ಷ ಸಂಘಟನೆಯಲ್ಲಿ ವಿಫಲವಾದಂತೆ ಕಾಣುತ್ತದೆ. ಬಿಜೆಪಿಯವರು ಸಾಕಷ್ಟು ಭ್ರಮೆಯಲ್ಲಿ ಇದ್ದಾರೆ ಎಂದು ವ್ಯಂಗ್ಯವಾಡಿದರು.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆದ್ದು, ಸರ್ಕಾರ ರಚಿಸಿದೆ. ಹಲವಾರು ಜನಪ್ರೀಯ ಯೋಜನೆಗಳನ್ನು ಜಾರಿಗೆ ತಂದು ಜನಮನ್ನಣೆ ಗಳಿಸಿದೆ. ಪಂಚರಾಜ್ಯದ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪರವಾಗಿ ಇರುತ್ತದೆ ಎಂದರು.
ಬಿಜೆಪಿ ಈಗಾಗಲೇ ಬೇರೆ ರಾಜ್ಯಗಳಲ್ಲಿ ಆಪರೇಷನ್ ಕಮಲು ಮಾಡಲು ಹೋಗಿ ಕೈ ಸುಟ್ಟುಕೊಂಡಿದೆ. 50-60 ಶಾಸಕರನ್ನು ಖರೀದಿಸಿ, ಸರ್ಕಾರ ರಚಿಸುವ ಬಿಜೆಪಿ ತಂತ್ರ ಕೇವಲ ಭ್ರಮೆಯಷ್ಟೇ ಎಂದು ಟೀಕಿಸಿದರು.