

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಇದೀಗ ಎಲ್ಲೆಡೆ ದಸರಾ ಸಂಭ್ರಮ ಕಂಡು ಬರುತ್ತಿದೆ. ಮಹಾತಾಯಿ ದುರ್ಗಾದೇವಿಯ ಆರಾಧನೆಗೆ ಸಕಲ ಸಿದ್ಧತೆಗಳು ನಡೆದಿದ್ದು, ಕುಟುಂಬ ಸಮೇತ ಭಕ್ತರು ದೇವಿಯ ಪೂಜೆಯಲ್ಲಿ ತೊಡಗಿದ್ದಾರೆ.
ನವರಾತ್ರಿ ಎಲ್ಲೆಡೆ ವಿಜೃಂಭಣೆಯಿಂದ ನಡೆದುಕೊಂಡು ಬಂದಿದ್ದು, ವಿಜಯದಶಮಿಗೆ ನಗರದಲ್ಲಿ ಖರೀದಿ ಭರಾಟೆಯೂ ಜೋರಾಗಿ ನಡೆಯುತ್ತಿದೆ.
ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿಯಲ್ಲಿ ಅಕ್ಕಪಕ್ಕದ ಜಿಲ್ಲೆಯಿಂದಲೂ ಜನರು ಖರೀದಿಗೆ ಬರುತ್ತಾರೆ. ಹಾಗಾಗಿ ನಗರದ ಎಲ್ಲ ರಸ್ತೆಗಳು, ಮಳಿಗೆಗಳು ಜನರಿಂದ ತುಂಬಿಕೊಂಡಿವೆ.
ಒಂದೆಡೆ ಅತೀವೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿ ಬಿತ್ತಿದ ಬೆಳೆ ಕೈಗೆ ಬರದೇ ರೈತರು ನಷ್ಟ ಅನುಭವಿಸಿದ್ದಾರೆ. ಆದರೂ, ದೇವಿ ಪೂಜೆಗೆ, ಧಾರ್ಮಿಕ ಶ್ರದ್ಧೆಗೆ ಯಾವುದೇ ಕೊರತೆಯಾಗದಂತೆ ಎಲ್ಲ ಸಜ್ಜುಗೊಳಿಸುತ್ತಿದ್ದಾರೆ. ಇದಕ್ಕಾಗಿ ನಗರದಲ್ಲಿ ಇದೀಗ ಎಲ್ಲ ಅಂಗಡಿ, ಮುಂಗಟ್ಟುಗಳಲ್ಲಿ ಖರೀದಿ ಸಂಭ್ರಮ ಕಂಡು ಬರುತ್ತಿದೆ.
ಸಂಕಷ್ಟದ ಮಧ್ಯೆಯೂ ಜನರು ದಸರಾ ಉತ್ಸವದಲ್ಲಿ ಸಂಭ್ರಮದಿಂದ ಭಾಗಿಯಾಗಿದ್ದಾರೆ. ಶ್ರೀದೇವಿಯು ತಮ್ಮೆಲ್ಲ ಕಷ್ಟಗಳನ್ನು ಪರಿಹರಿಸಿ ಮುಂದಿನ ದಿನಗಳಲ್ಲಾದರೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತ ನವರಾತ್ರಿಯ ದೇವಿ ಆರಾಧನೆ ಮಾಡಿದರು.
ರೈತರು ಹಿಂಗಾರು ಹಂಗಾಮು ಉತ್ತಮವಾಗಿ ಆಗಲಿ, ಉತ್ತಮ ಬೆಳೆ ಬರಲಿ ಎಂದು ದೇವಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಮಕ್ಕಳು, ಮಹಿಳೆಯರು, ಪುರುಷರು ಎಲ್ಲರೂ ಈಗ ಹೊಸ ಬಟ್ಟೆ ಖರೀದಿಗೆ ಮುಗಿ ಬಿದ್ದಿದ್ದಾರೆ. ಹಾಗಾಗಿ ನಗರದ ಬಟ್ಟೆ ಅಂಗಡಿಗಳು ಗಿಜಿಗಿಡುತ್ತಿವೆ. ಅಂಗಡಿಕಾರರು ಸಹ ಹಲವು ಆಫರ್ ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.
ಇಲೆಕ್ಟ್ರಾನಿಕ್ ವಸ್ತುಗಳು; ದಸರಾ ಹಬ್ಬದಲ್ಲಿ ಏನಾದರೂ ಬೆಲೆಬಾಳುವ ವಸ್ತುಗಳು ಇಲ್ಲವೇ ಗೃಹೋಪಯೋಗಿ ಸರಕು ತರಲು ಅನೇಕರು ಇಲೆಕ್ಟ್ರಾನಿಕ್ಸ್ ಮಳಿಗೆಗಳಿಗೆ ಲಗ್ಗೆ ಇಡುತ್ತಿದ್ದಾರೆ. ಟಿವಿ, ಫ್ರಿಜ್, ಮೊಬೈಲ್, ಓವೆನ್, ಸೌಂಡ್ ಸಿಸ್ಟ್ಂ, ವಾಷಿಂಗ್ ಮಶಿನ್ ಮುಂತಾದ ಸಾಮಗ್ರಿಗಳನ್ನು ಮನೆಗೆ ಕೊಂಡೊಯ್ಯುತ್ತಿದ್ದಾರೆ. ಇಲ್ಲಿಯೂ ಕೂಡ ಹಲವು ಆಫರ್ ಗಳು ಗ್ರಾಹಕರನ್ನು ಸೆಳೆಯುತ್ತಿವೆ.
ಜಿಎಸ್ಟಿ ಇಳಿಕೆ ನಂತರ ಕಾರುಗಳು ದರದಲ್ಲಿ ಲಕ್ಷದಿಂದ ಎರಡು ಲಕ್ಷ ರೂ. ವರೆಗೆ ಕಡಿಮೆಯಾಗಿದೆ. ಹಾಗಾಗಿ ಕಾರು ಕೊಳ್ಳಬೇಕೆಂಬ ಬಹು ದಿನದ ಕನಸನ್ನು ಇದೀಗ ಅನೇಕರು ನನಸು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕಾರ್ ಶೋರೂಂಗಳಲ್ಲಿಯೂ ಜನಸಂದಣಿ ಕಂಡು ಬರುತ್ತಿದೆ.
ಇದೇ ರೀತಿ ಬೈಕ್, ಸ್ಕೂಟರ್ಗಳನ್ನು ಸಹ ಖರೀದಿಯಾಗುತ್ತಿವೆ. ರೈತ ಮಿತ್ರ ಟ್ರಾಕ್ಟರ್ ಖರೀದಿ, ಕೃಷಿ ಉಪಕರಣಗಳನ್ನು ರೈತರು ಕೊಂಡೊಯ್ಯುತ್ತಿದ್ದಾರೆ. ಆ ಮೂಲಕ ಹಿಂಗಾರು ಹಂಗಾಮಿಗೆ ಸಜ್ಜಾಗುತ್ತಿದ್ದಾರೆ.
ಹೂ- ಹಣ್ಣು: ವಿಜಯದಶಮಿ ನಿಮಿತ್ತ ದೇವಿ ಪೂಜೆಗೆ ಹೂ, ಹಣ್ಣು, ತಳಿರು, ತೋರಣ, ಬಾಳೆಕಂಬ ಇತ್ಯಾದಿಗಳ ಖರೀದಿಯೂ ಭರ್ಜರಿಯಾಗಿ ನಡೆದಿದೆ. ಹುಬ್ಬಳ್ಳಿಯ ದುರ್ಗದಬೈಲ್, ಜನತಾಬಜಾರ, ಮಹಾತ್ಮಗಾಂಧಿ ಮಾರ್ಕೆಟ್, ಹಳೇಹುಬ್ಬಳ್ಳಿ ಸೇರಿ ಹಲವು ಕಡೆಗಳಲ್ಲಿ ಮಾರುಕಟ್ಟೆಯಲ್ಲಿ ಜನದಟ್ಟಣೆ ಕಂಡು ಬರುತ್ತಿದೆ.
ಹಬ್ಬದ ಶುಭ ಸಂದರ್ಭದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿಯೂ ಅನೇಕರು ಹೂಡಿಕೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸ್ವಂತ ಮನೆ, ಸೈಟ್ ಖರೀದಿಗಾಗಿ ಬಿಲ್ಡರ್, ಡೆವಲಪರ್ ಬಳಿ ಹೋಗುತ್ತಿದ್ದಾರೆ. ಬಹಳಷ್ಟು ಜನರು ಸೈಟ್, ಅಪಾರ್ಟಮೆಂಟ್ ಗಳಲ್ಲಿ ಮನೆ ಬುಕಿಂಗ್ ಮಾಡುತ್ತಿದ್ದಾರೆ.
ಪ್ರಾರ್ಥನೆ: ವಿಜಯದಶಮಿಗೆ ಎಲ್ಲೆಡೆ ಸಂಭ್ರಮ ಕಳೆಗಟ್ಟಲಿದೆ. ದೇವಸ್ಥಾನ ಹಾಗೂ ಮನೆಗಳಲ್ಲಿ ದೇವಿ ಆರಾಧನೆಯ ಜತೆಗೆ ಸಾಮೂಹಿಕ ಪ್ರಾರ್ಥನೆ, ಪೂಜಾ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಹಲವು ದೇವಸ್ಥಾನ, ಸಮುದಾಯ ಭವನಗಳಲ್ಲಿ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಒಂಭತ್ತು ದಿನಗಳವರೆಗೆ ಸಾಮೂಹಿಕವಾಗಿ ಆರಾಧನೆ ಮಾಡಲಾಯಿತು. ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ದಾಂಡಿಯಾ: ನವರಾತ್ರಿ ಎಂದರೆ ಅಲ್ಲಿ ದಾಂಡಿಯಾ, ಕೋಲಾಟ ಇರಲೇಬೇಕು. ಅಂದಾಗಲೇ ಹಬ್ಬಕ್ಕೆ ಒಂದು ಕಳೆ ಬರುತ್ತದೆ. ನಗರದ ಹಲವು ಕಡೆಗಳಲ್ಲಿ ದಾಂಡಿಯಾ ನೃತ್ಯಗಳನ್ನು ಏರ್ಪಡಿಸಲಾಗಿದೆ. ನೃತ್ಯ ಸ್ಪರ್ಧೆಗಳು ಸಹ ನಡೆಯುತ್ತಿವೆ. ದಸರಾ ಮಹೋತ್ಸವ ಅವಳಿನಗರದಲ್ಲಿ ಸಂಭ್ರಮದಿಂದ ನಡೆಯುತ್ತಿದ್ದು, ಭಕ್ತಿಯ ಹೊಳೆ ಹರಿಯುತ್ತಿದೆ.