ವಿಜಯವಾಣಿ ಏಜೆಂಟ್ ಉದಯ ಫಡಿಪಾಟೀಲ್ ಇನ್ನಿಲ್ಲ

01010
Published on

ಬೆಳಗಾವಿ: ನಗರದ ‘ವಿಜಯವಾಣಿ’ ಪತ್ರಿಕಾ ವಿತರಕ ಹಾಗೂ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಐಟಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉದಯ ಫಡಿಪಾಟೀಲ (46)ಅವರು ಹೃದಯಾ ಘಾತದಿಂದ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

ಎರಡು ದಿನಗಳಿಂದ ಹೃದಯ ಬೇನೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆಗಾಗಿ ಗುರುವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಉತ್ಸಾಹಿ ಯುವಕರಾಗಿದ್ದ ಉದಯ ಫಡಿಪಾಟೀಲ, ಕಳೆದ 7 ವರ್ಷಗಳಿಂದ ‘ವಿಜಯವಾಣಿ’ ಸಿಟಿ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರ ಅಂತ್ಯಕ್ರಿಯೆ ಸದಾಶಿವ ನಗರದ ರುದ್ರಭೂಮಿಯಲ್ಲಿ ನೆರವೇರಿತು. ಮೃತರಿಗೆ ತಾಯಿ, ಸಹೋದರ, ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವಿದೆ.

ಸಂತಾಪ: ವಿಆರ್‌ಎಲ್ ಸಮೂಹದ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಆನಂದ ಸಂಕೇಶ್ವರ ಅವರು ಉದಯ ಫಡಿಪಾಟೀಲ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಬೆಳಗಾವಿ ನಗರದ ‘ವಿಜಯವಾಣಿ’ ವಿತರಕರಾಗಿದ್ದ ಅವರು, ನಮ್ಮ ಪತ್ರಿಕೆ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದರು. ಅವರ ನಿಧನದಿಂದಾಗಿ ಕುಟುಂಬ ವರ್ಗಕ್ಕೆ ತುಂಬಲಾರದ ಹಾನಿಯಾಗಿದೆ. ದೇವರು ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net