Web Exclusive ಕರೊನಾಗೆ ತಡೆಯೊಡ್ಡಿದ ಕಾಡುಜನ; ಕಟ್ಟುನಿಟ್ಟಿನ ನಿಯಮ ಪಾಲನೆಗೆ ಮುಂದಾದ ಗಿರಿಜನರು

11_MYS_01_GIRIJANA STORY (3)
Published on

| ಕಿರಣ್ ಮಾದರಹಳ್ಳಿ ಚಾಮರಾಜನಗರ

ಕೋವಿಡ್ ನಿಯಮ ಪಾಲಿಸದೆ, ಸೋಂಕು ತಡೆಗಟ್ಟುವಲ್ಲಿ ಉದಾಸೀನ ತೋರಿ ಈಗ ಕಂಗೆಟ್ಟಿದ್ದಾರೆ ನಾಡಿನ ಜನರು. ಆದರೆ ಮೊದಲ ಅಲೆಗೆ ಕುಗ್ಗದೆ, ಎರಡನೇ ಅಲೆಗೂ ಜಗ್ಗದೆ ಕರೊನಾಗೆ ತಡೆಯೊಡ್ಡಿ ನಿಂತಿದ್ದಾರೆ ಕಾಡಿನ ಜನರು..!

ಬಿ.ಆರ್.ಟಿ. ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಪುಣಜನೂರು ಗ್ರಾಮ ಪಂಚಾಯಿತಿಗೆ ಸೇರಿದ ತಾಲೂಕಿನ ಬೇಡಗುಳಿ, ಮಾರಿಗುಡಿ ಪೋಡು, ಬಿಸಲಗೆರೆ, ಕಾಡಿಗೆರೆ, ಮೊಣಕೈ ಪೋಡು, ಗೋಡೆಮಡುವಿನದೊಡ್ಡಿ, ಬಾನವಾಡಿ, ರಾಮಯ್ಯನ ಪೋಡುಗಳಿಗೆ ಕರೊನಾ ಪ್ರವೇಶಸಲು ಸಾಧ್ಯವಾಗಿಲ್ಲ.

ಈ ಪೋಡುಗಳಲ್ಲಿ 800ಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದು, ಕೋವಿಡ್ ತಡೆಗಟ್ಟುವ ನಿಯಮಗಳನ್ನು ಗಿರಿಜನರು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾ ಬಂದಿರುವುದೇ ಇದಕ್ಕೆ ಕಾರಣ. ಚಾಮರಾಜನಗರದಿಂದ 50 ಕಿ.ಮೀ., ಗ್ರಾಮ ಪಂಚಾಯಿತಿ ಕೇಂದ್ರಸ್ಥಾನ ಆಗಿರುವ ಪುಣಜನೂರಿನಿಂದ ಅಂದಾಜು 30 ಕಿ.ಮೀ. ಅಂತರದಲ್ಲಿರುವ ಬೇಡಗುಳಿ, ನೀಲಗಿರಿ ಶ್ರೇಣಿಯ ಅಂಚಿನ ಕರ್ನಾಟಕ-ತಮಿಳುನಾಡಿನ ಸೀಮಾರೇಖೆ. ಸಮುದ್ರ ಮಟ್ಟದಿಂದ 1,600 ಮೀಟರ್ ಎತ್ತರದಲ್ಲಿರುವ ಜೋಡಿಗೆರೆ ಮತ್ತು ಇತರ ಪೋಡುಗಳಿಗೆ ತೆರಳಲು ಗಿರಿಜನರನ್ನು ಹೊರತುಪಡಿಸಿ, ಹೊರಗಿನವರಿಗೆ ಅರಣ್ಯ ಇಲಾಖೆಯ ಅನುಮತಿ ಬೇಕು. ಅಂತೆಯೆ, ಹೊರ ಜಗತ್ತಿನ ಸಂಪರ್ಕ ಕಡಿಮೆ ಇರುವ ಪೋಡುಗಳ ಜನರು ಕರೊನಾ ತಡೆಗಟ್ಟಲು ಕೈಗೊಂಡ ನಿರ್ಧಾರಗಳು ಸರ್ಕಾರದ ಲಾಕ್​ಡೌನ್ ನಿಯಮಗಳಿಗಿಂತಲೂ ಕಟ್ಟುನಿಟ್ಟಾಗಿವೆ.

ಜನಜಾಗೃತಿ ಎಂದರೆ ಇದು...

ಕೋವಿಡ್ ಎರಡನೇ ಅಲೆ ಅಬ್ಬರಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಪೋಡುಗಳ ಜನರು ಹೊರಗೆ ಹೋಗುವುದು ಮತ್ತು ಬೇರೆಯವರು ಒಳಗೆ ಬರುವುದನ್ನು ಕಡ್ಡಾಯವಾಗಿ ನಿರ್ಬಂಧಿಸಿದ್ದಾರೆ. ಹೊರಗಿನಿಂದ ಬರುವ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿಗೂ ಪೋಡಿಗೆ ಪ್ರವೇಶ ನೀಡದೆ ಮೊದಲೇ ಸ್ವಯಂ ಲಾಕ್​ಡೌನ್ ಜಾರಿಗೊಳಿಸಿದ್ದರು. ಜನ ಜಾಗೃತರಾಗಿರುವುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳೂ ಸಹಕಾರ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಪೋಡುಗಳಿಗೆ ಸ್ಯಾನಿಟೈಸ್ ಮಾಡಲು ಬಂದ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಗಿರಿಜನರು ತಡೆದಿದ್ದಾರೆ. ಬಳಿಕ ಪಿಡಿಒ ಮತ್ತು ಸದಸ್ಯರು ಜನರ ಮನವೊಲಿಸಿ, ಸ್ಯಾನಿಟೈಸ್ ಮಾಡುವುದರಿಂದ ರೋಗ ತಡೆಗಟ್ಟಬಹುದೆಂದು ತಿಳಿವಳಿಕೆ ಮೂಡಿಸಿದ್ದಾರೆ. ಇದಕ್ಕೂ ಜನರು ಒಪ್ಪದ ಕಾರಣ ಗ್ರಾ.ಪಂ. ಸದಸ್ಯರೇ ಪಂಚಾಯಿತಿ ಸಿಬ್ಬಂದಿಯಿಂದ ಸ್ಯಾನಿಟೈಸಿಂಗ್ ಸಾಮಗ್ರಿಗಳನ್ನು ಪಡೆದು ತಾವೇ ತಮ್ಮ ಬೀದಿಗಳಿಗೆ ತೆರಳಿ ದ್ರಾವಕ ಸಿಂಪಡಿಸಿಕೊಂಡಿದ್ದಾರೆ. ಹೀಗೆ ಹೊರಗಿನಿಂದ ಬರುವವರನ್ನು ಒಳಗೆ ಬಿಟ್ಟುಕೊಳ್ಳುತ್ತಿಲ್ಲ.

ಅನವಶ್ಯಕವಾಗಿ ಯಾರೂ ನಗರ ಪ್ರದೇಶಗಳಿಗೆ ಹೋಗುತ್ತಿಲ್ಲ. ಅಗತ್ಯ ಸಾಮಗ್ರಿಗಳನ್ನು ಬಸ್​ನವರಿಗೆ ಹೇಳಿ ತರಿಸಿಕೊಳ್ಳುತ್ತಿದ್ದರು. ಲಾಕ್​ಡೌನ್ ಹಿನ್ನೆಲೆಯಲ್ಲಿ ಸಾರಿಗೆ ಸೌಲಭ್ಯ ಸ್ಥಗಿತಗೊಂಡ ಬಳಿಕ ದ್ವಿಚಕ್ರ ವಾಹನ ಇರುವ ಒಬ್ಬರನ್ನು ಸಾಮಗ್ರಿ ಖರೀದಿಗೆ ಕಳುಹಿಸಿ, ದಿನಸಿ ಪದಾರ್ಥಗಳನ್ನು ತರಿಸಿಕೊಳ್ಳುತ್ತಿದ್ದಾರೆ.

ಬೇಡಗುಳಿ ಪ್ರದೇಶದಲ್ಲಿ ಯೂರೋಪಿಯನ್ ಕಾಲದ ಕಾಫಿ ತೋಟಗಳಿರುವುದು ವಿಶೇಷ. ಈ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಗಿರಿಜನರಿಗೆ ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ಉದ್ಯೋಗ ನೀಡಲಾಗಿದೆ. ಹೀಗಾಗಿ, ಇಲ್ಲಿನ ಜನರು ಉದ್ಯೋಗಕ್ಕಾಗಿಯೂ ನಗರ ಪ್ರದೇಶಗಳಿಗೆ ಬರುವುದಿಲ್ಲ. ತಾವು ಇರುವ ಜಾಗದಲ್ಲಿ ಕೋವಿಡ್ ಹರಡದಂತೆ ಎಚ್ಚರಿಕೆ ವಹಿಸಿದ್ದಾರೆ. ಕರೊನಾಗೆ ಭಯಪಡದೆ ರೋಗದ ವಿರುದ್ಧ ಜನ ಜಾಗ್ರತೆಯಿಂದ ಇರಬೇಕೆಂಬುದನ್ನು ತಿಳಿಸಿಕೊಟ್ಟಿದ್ದಾರೆ.

ಲಸಿಕೆ ಪಡೆಯಲು ಮಾತ್ರ ಹಿಂದೇಟು: ಪೋಡುಗಳಲ್ಲಿ ವಾಸ ಮಾಡುತ್ತಿರುವ ಜನರು ಕೋವಿಡ್ ಲಸಿಕೆ ಪಡೆಯಲೂ ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ನೀಡಲು ಆರೋಗ್ಯ ಇಲಾಖೆ ಸಿಬ್ಬಂದಿ ಬಂದರೆ ಕಾಡಿಗೆ ಹೋಗಿ ಸೇರಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಮನವೊಲಿಸಿ, ಗ್ರಾಮ ಪಂಚಾಯಿತಿಯಿಂದ ಅರಿವು ಮೂಡಿಸಿ ಬೇಡಗುಳಿ, ಕಾಡಿಗೆರೆಯಲ್ಲಿ 29 ಜನರಿಗೆ ವ್ಯಾಕ್ಸಿನ್ ಹಾಕಿದ್ದು, ಲಸಿಕೆ ವಿತರಣೆ ಪ್ರಕ್ರಿಯೆ ಮುಂದುವರಿದಿದೆ.

ಕೋಟ್​

ಪುಣಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬಿ.ಆರ್.ಟಿ. ಅರಣ್ಯದೊಳಗೆ ಇರುವ ಕೆಲವು ಪೋಡುಗಳಲ್ಲಿ ಈವರೆಗೆ ಒಂದೇ ಒಂದು ಕರೊನಾ ಪ್ರಕರಣವೂ ಪತ್ತೆಯಾಗಿಲ್ಲ. ಕೋವಿಡ್ ಬಗ್ಗೆ ಇಲ್ಲಿನ ಜನರಿಗೆ ಗ್ರಾಪಂನಿಂದ ಅರಿವು ಮೂಡಿಸಿ ಎಚ್ಚರಿಕೆ ವಹಿಸಬೇಕೆಂದು ಕೋರಲಾಗಿದೆ. ಪೋಡುಗಳಿಗೆ ಯಾರಿಗೂ ಪ್ರವೇಶ ನೀಡದೆ ಅತ್ಯಂತ ಎಚ್ಚರಿಕೆಯಿಂದ ಜನರು ಇದ್ದಾರೆ. ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ಗಿರಿಜನ ಮುಖಂಡರಿಂದ ಜನರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ.

| ಸಿದ್ದರಾಜು, ಪಿಡಿಒ, ಪುಣಜನೂರು ಗ್ರಾಪಂ

--------

ಪೋಟೋ ಶೀರ್ಷಿಕೆ

: ಚಾಮರಾಜನಗರ ತಾಲೂಕಿನ ಬೇಡಗುಳಿ ಪೋಡಿನ ಜನರ ಮನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net