ಮೊಗರಗಲ್ಲಿ ಸಮಸ್ಯೆ ನಿವಾರಣೆಗೆ ಒತ್ತು

4 kacha Road
Published on

ಪಳೆಯಂಡ ಪಾರ್ಥ ಚಿಣ್ಣಪ್ಪ ವಿರಾಜಪೇಟೆ
ಬಹುತೇಕ ಬೆಟ್ಟ ಪ್ರದೇಶ ಹೊಂದಿರುವ ನೆಹರುನಗರ, ಮೊಗರಗಲ್ಲಿಯಲ್ಲಿ ಕುಡಿಯುವ ನೀರು, ಬೀದಿದೀಪ, ಒಳಚರಂಡಿ, ರಸ್ತೆಗಳು, ಮುಖ್ಯ ಸಮಸ್ಯೆ. ಈ ಸಮಸ್ಯೆ ಪರಿಹಾರಕ್ಕೆ ವಾರ್ಡ್ ಸದಸ್ಯೆ ಮನೆಯಪಂಡ ದೇಚಮ್ಮ ಕಾಳಪ್ಪ ಹೆಚ್ಚಿನ ಮುತುವರ್ಜಿ ತೋರಿದ್ದಾರೆಂದು ಸ್ಥಳೀಯರು ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ.

ಈ ವಾರ್ಡ್‌ನಿಂದ ಈವರೆಗೆ ಆರಿಸಿ ಬಂದ ಜನಪ್ರತಿನಿಧಿಗಳು ಇವರಷ್ಟು ಅಭಿವೃದ್ದಿ ಕಾರ್ಯ ನಡೆಸಿಲ್ಲ ಎಂದು ರಾಜ್ಯದ ನಂಬರ್ ೧ ಕನ್ನಡ ದಿನಪತ್ರಿಕೆ ಜಯವಾಣಿ ಆಯೋಜಿಸಿದ್ದ ವಾರ್ಡ್ ವಾಚ್‌ನಲ್ಲಿ ಸ್ಥಳೀಯರು ಮುಕ್ತ ಅಭಿಪ್ರಾಯ ವ್ಯಕ್ತ ಪಡಿಸಿದರು.

ಪಟ್ಟಣದ ಹೃದಯ ಭಾಗದಲ್ಲಿ ಬೆಟ್ಟ ಪ್ರದೇಶಕ್ಕೆ ಹೊಂದಿಕೊಂಡ ಮೊಗರಗಲ್ಲಿ ವಾರ್ಡ್ ಇಳಿಜಾರಿನಲ್ಲಿದೆ. ಕೆಲವು ಕಡೆ ಚರಂಡಿ ಮೇಲೆ ಮನೆ ನಿರ್ಮಾಣ ಮಾಡಿರುವುದರಿಂದ ಬೆಟ್ಟ ಪ್ರದೇಶದ ಬಂದ ನೀರು ಸರಾಗವಾಗಿ ಮನೆಗಳಿಗೆ ನುಗ್ಗುತ್ತಿದೆ.

ಕೆಲವು ಕಡೆ ಚರಂಡಿ ನಿರ್ಮಾಣ ಆಗಬೇಕಿದೆ. ಪಕೃತಿ ವಿಕೋಪದಲ್ಲಿ ಮನೆ ಜರಿದು ಬಿದ್ದ ಜಾಗದಲ್ಲಿ ೭೦ ಮೀಟರ್ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ತಡೆಗೋಡೆ ಒಳಗೆ ೬ ಅಡಿಗಳಷ್ಟು ಮಣ್ಣು ತುಂಬಬೇಕಿದೆ. ಚರಂಡಿ ನಿರ್ಮಾಣ ಸರಿ ಇಲ್ಲದರಿಂದ ಮಲೀನ ನೀರು ಅಲ್ಲಿಯೆ ಶೇಖರಣೆಗೊಂಡಿವೆ. ೨ ಹೈಟೆಕ್ ಶೌಚಾಲಯಗಳಿದ್ದು ೨ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಸುತ್ತಿದೆ.

ಗೋಣಿಕೊಪ್ಪ ಮುಖ್ಯರಸ್ತೆಯ ಮೋಹನ್ ಪೆಟ್ರೋಲ್‌ಬಂಕ್ ಎದುರಿನಿಂದ ಕಾವೇರಿ ಕಲ್ಯಾಣ ಮಂಟಪದವರೆಗೆ, ನೆಹರು ನಗರದ ಒಂದು ಪಾರ್ಶ್ವ ಮೊಗರಗಲ್ಲಿಗೆ ಹೊಂದಿಕೊಂಡಿದೆ. ಸರ್ಕಾರಿ ಕಡತಗಳಲ್ಲಿ ಕೊಳಗೇರಿ ಎಂದು ನಮೂದಾಗಿದೆ. ಕೊಳಗೇರಿ ಅಭಿವೃದ್ದಿಗಾಗಿ ಸರ್ಕಾರ ದಿಂದ ಹಣ ಮಂಜೂರಾಗಿದೆ. ೩ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ೧,೦೦೦ ಮತದಾರರಿದ್ದಾರೆ.

ಮಳೆಗಾಲದಲ್ಲಿ ಎದುರಾದ ಸಮಸ್ಯೆಗಳಿಗೆ ಸದಸ್ಯೆ ದೇಚಮ್ಮ ಸಮರ್ಪಕ ರೀತಿ ಸ್ಪಂದಿಸಿ ಮತದಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ೨೦೧೯ ರಲ್ಲಿ ನಡೆದ ಪಕೃತಿ ವಿಕೋಪದಲ್ಲಿ ಬರೆ ಕುಸಿದು ಬಹುತೇಕ ಮನೆಗಳಿಗೆ ಹಾನಿಯಾಗಿದೆ. ಪಾಪತ್ತಿ, ಬರ್, ಅಫ್ತಾಬ್, ಮುಮ್ತಾಜ್, ಎಂ.ಪಿ. ಫೈರೋಜ್ ಅವರ ಮನೆ ಸಂಪೂರ್ಣ ಹಾನಿಗೊಳಗಾಗಿದೆ.

ಪ್ರಕೃತಿ ವಿಕೋಪದಲ್ಲಿ ಮಳೆ ಹಾನಿ ಆದವರಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದಿಂದ ೫ ಲಕ್ಷ ರೂ. ಘೋಷಣೆ ಮಾಡಿದ್ದರು. ಪಾಪತ್ತಿ, ಬರ್, ಅಫ್ತಾಬ್ ಅವರಿಗೆ ಇದುವರೆಗೆ ೩ ಲಕ್ಷ ರೂ. ಮಾತ್ರ ಸಿಕ್ಕಿದೆ. ಉಳಿದ ಹಣ ಸರ್ಕಾರದಿಂದ ಬರಬೇಕಿದೆ. ಮುಮ್ತಾಜ್, ಎಂ.ಪಿ. ಫೈರೋಜ್ ಮನೆ ಸಂಪೂರ್ಣ ಬಿರುಕು ಬಿಟ್ಟಿದ್ದು, ಹಲವಾರು ಬಾರಿ ಅರ್ಜಿ ಸಲ್ಲಿಸಿದರು ಪ್ರಯೊಜನ ಆಗಲಿಲ್ಲ. ಸರ್ಕಾರದಿಂದ ಯಾವುದೇ ಪರಿಹಾರ ಹಣ ಲಭಿಸಿಲ್ಲ.

**
ಕಳೆದ ಮಳೆಗಾಲದಲ್ಲಿ ನನ್ನ ಮನೆ ಸಂಪೂರ್ಣ ಹಾನಿಗೊಳಗಾಗಿತ್ತು. ಸರ್ಕಾರದಿಂದ ೫ ಲಕ್ಷ ಹಣ ಮಂಜೂರಾಗಿದ್ದು, ೩ ಕಂತಿನಲ್ಲಿ ೨.೯೫ ಲಕ್ಷ ರೂ. ಬಂದಿದೆ. ಜಿಪಿಎಸ್ ಆಗದ ಕಾರಣ ಮುಂದಿನ ೨ ಕಂತು ಮಂಜೂರಾಗಿಲ್ಲ. ವಾರ್ಡ್ ಸದಸ್ಯರ ಕೆಲಸ ಕಾರ್ಯ ಶ್ಲಾಘನೀಯ. ದೂರವಾಣಿ ಕರೆ ಮಾಡಿದರೆ ಸಾಕು ಸಮಸ್ಯೆಗಳಿಗೆ ಕೂಡಲೆ ಸ್ಪಂದಿಸುತ್ತಾರೆ. ನಸೀಮಾ ಭಾನು, ಸ್ಥಳೀಯ ನಿವಾಸಿ, ಮೊಗರಗಲ್ಲಿ.

**
ಕಾವೇರಿ ಕಲ್ಯಾಣ ಮಂಟಪದಿಂದ ನೆಹರುನಗರಕ್ಕೆ ತೆರಳುವ ಕಾಂಕ್ರೀಟ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಪದೇ ಪದೇ ಅಪಘಾತ ಸಂಭವಿಸು ತ್ತಿರುತ್ತದೆ. ಗಣೇಶ್ ಮನೆ ಬಳಿ ಚರಂಡಿ ಇಲ್ಲದರಿಂದ ಕೊಳಚೆ ನೀರು ರಸ್ತೆಯಲ್ಲಿಯೆ ಹರಿದಾಡುತ್ತಿದೆ. ಇದರಿಂದ ಈ ಪ್ರದೇಶ ದುರ್ವಾಸನೆ ಯಿಂದ ಕೂಡಿದೆ. ಎಂ.ಕೆ. ಶೈಜು, ಜೋತಿಷ್ಯರು, ನೆಹರುನಗರ.

**
ವಾರ್ಡ್‌ನಲ್ಲಿ ೧.೫೦ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಅಭಿವೃದ್ಧಿಗೆ ಪುರಸಭೆಗೆ ಬರುವ ಅನುದಾನ ಸಾಲದು. ಕೊಳಗೇರಿ ಅಭಿವೃದ್ದಿ ನಿಗಮದಿಂದ ಬಂದ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ. ಕಾವೇರಿ ಕಲ್ಯಾಣ ಮಂಟಪದಿಂದ ನೆಹರುನಗರಕ್ಕೆ ತೆರಳುವ ರಸ್ತೆಗೆ ೧೮ ಲಕ್ಷ ರೂ. ಮಂಜೂರಾಗಿದ್ದು. ಅಕ್ಟೋಬರ್ ೩೧ ರಂದು ಭೂಮಿ ಪೂಜೆ ನಡೆಯಲಿದೆ. ಕುಡಿಯುವ ನೀರಿಗೆ ಟ್ಯಾಂಕ್ ನಿರ್ಮಿಸಲು ಮದರಸದವರು ೧೦*೨೦ ಅಲತೆ ಜಾಗ ಉದಾರವಾಗಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಮನೆಯಪಂಡ ದೇಚಮ್ಮ ಕಾಳಪ್ಪ, ಸದಸ್ಯರು, ವಿರಾಜಪೇಟೆ ಪಟ್ಟಣ ಪಂಚಾಯಿತಿ.

**
೨೦೧೯ ರಲ್ಲಿ ಪ್ರಕೃತಿ ವಿಕೋಪದಲ್ಲಿ ಮನೆಯ ಒಂದು ಪಾರ್ಶ್ವ ಕುಸಿದಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ೫ ಲಕ್ಷ ರೂ. ಮಂಜೂರು ಮಾಡಿದ್ದರು. ಇದುವರೆಗೆ ೨ ಲಕ್ಷ ನೀಡಿದ್ದಾರೆ. ಬಾಕಿ ಹಣ ಸರ್ಕಾರದಿಂದ ಬಂದ ನಂತರ ನೀಡಲಾಗುವುದೆಂದು ಅಧಿಕಾರಿಗಳು ಹೇಳುತ್ತಾರೆ. ಬಷೀರ್, ಸಂತ್ರಸ್ತರು, ಮೊಗರಗಲ್ಲಿ.

**
ಬರೆ ಕುಸಿತಾಗ ಮನೆ ಸಂಪೂರ್ಣ ಮಣ್ಣಿನೊಳಗೆ ಸೇರಿತ್ತು. ಸರ್ಕಾರ ಅರ್ಧ ಮನೆ ನಿರ್ಮಾಣ ಮಾಡಿಕೊಟ್ಟಿದೆ. ಇನ್ನೂ ಅರ್ಧ ಮನೆ ನಿರ್ಮಿಸಲು ಬಾಕಿ ಇದೆ. ಅದೇ ಮನೆಯಲ್ಲಿ ವಾಸ ಇದ್ದೇನೆ. ಮಳೆಗಾಲದಲ್ಲಿ ಕೊಳಚೆ ನೀರು ಮನೆಯೊಳಗೆ ನುಗ್ಗುತ್ತದೆ. ನಾನು ಅಂಗವಿಕಲ ಆಗಿದ್ದು, ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ನನಗೆ ಯಾರು ಗತಿ ಇಲ್ಲದಂತಾಗಿದೆ. ಪಾಪತಿ, ಸಂತೃಸ್ತೆ, ಮೊಗರಗಲ್ಲಿ.

**
ಸರ್ಕಾರದಿಂದ ಬಂದ ಅನುದಾನವನ್ನು ಎಲ್ಲಾ ವಾರ್ಡ್‌ಗಳಿಗೆ ಸಮರ್ಪಕವಾಗಿ ಹಂಚಲಾಗಿದೆ. ಕೊಳಚೆ ಪ್ರದೇಶವಾದ ಕಾರಣ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಬರುವ ಹಣವನ್ನು ವಾರ್ಡಿನ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ಪುರಸಭೆ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನನಿರೀಕ್ಷಿಸಲಾಗುತ್ತಿದೆ. ಚಂದ್ರಕುಮಾರ್, ಮುಖ್ಯಾಧಿಕಾರಿ, ವಿರಾಜಪೇಟೆ ಪಟ್ಟಣ ಪಂಚಾಯಿತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net