

ಮಂಡ್ಯ: ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕಲಿಕೆ ನಿರಂತರವಾಗಿ ನಡೆಯುತ್ತಿರಬೇಕು ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಸಲಹೆ ನೀಡಿದರು.
ನಗರದ ಕಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ, ಕೃಷಿಕ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ವಿಜಯವಾಣಿ ವಿದ್ಯಾರ್ಥಿಮಿತ್ರ ವಿತರಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಷ್ಟು ಕಲಿತರೂ ಕಡಿಮೆಯೇ ಎನ್ನಿಸುತ್ತಿದೆ. ಮಾತ್ರವಲ್ಲದೆ ಸರ್ವ ರೀತಿಯಲ್ಲಿಯೂ ಸ್ಪರ್ಧೆ ಏರ್ಪಟ್ಟಿರುವುದರಿಂದ ಕಲಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಸರ್ಕಾರಿ ಶಾಲೆಗಳ ಸಬಲೀಕರಣ ನಮ್ಮ ಸಂಸ್ಥೆಯ ಮುಖ್ಯ ಗುರಿ. ಆ ಕಾರಣದಿಂದಲೇ ನಮ್ಮಿಂದಾಗುವ ಸೇವೆ ಹಾಗೂ ಸೌಲಭ್ಯ ಒದಗಿಸಿಕೊಡುವ ಕೆಲಸ ಮಾಡಲಾಗುತ್ತಿದೆ. ಅಂತೆಯೇ ಕಲ್ಲಹಳ್ಳಿ ಸರ್ಕಾರಿ ಶಾಲೆಯ 70 ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಕೆ ಬರಲಿದೆ. ಇದರಲ್ಲಿ ಸಾಕಷ್ಟು ಉಪಯೋಗ ಮಾಹಿತಿ ಇದೆ. ಜಗತ್ತಿನಲ್ಲಿ ನಡೆಯುವ ವಿದ್ಯಾಮಾನಗಳನ್ನು ಪತ್ರಿಕೆ ಮೂಲಕ ತಿಳಿದುಕೊಳ್ಳಬಹುದು. ಮಾತ್ರವಲ್ಲದೆ ಪ್ರತಿದಿನವೂ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳುವುದರ ಜತೆಗೆ ಮುಂದುವರೆಸಿಕೊಂಡು ಹೋಗಬೇಕು. ವಿದ್ಯಾರ್ಥಿಗಳು ಭತ್ತ ತುಂಬಲ ಚೀಲವಾಗಬಾರದು, ಬದಲಿಗೆ ಭತ್ತ ಬೆಳೆಯುವ ಗದ್ದೆಯಂತಾಗಬೇಕು. ಪತ್ರಿಕೆಯಲ್ಲಿ ಬರುವ ಮಾಹಿತಿ ತಿಳಿದುಕೊಳ್ಳುವುದರ ಜತೆಗೆ ಪರೀಕ್ಷೆಗೂ ಸಿದ್ಧವಾಗಬೇಕು ಎಂದು ಕಿವಿಮಾತು ಹೇಳಿದರು.
ಈಗಾಗಲೇ ಜೋಡಿಹೊಡಾಘಟ್ಟ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ವಿಜಯವಾಣಿ ವಿದ್ಯಾರ್ಥಿಮಿತ್ರ ವಿತರಿಸಲಾಗುತ್ತಿದೆ. ಇದೀಗ ಕಲ್ಲಹಳ್ಳಿ ಶಾಲೆಗೂ ವಿಸ್ತರಣೆ ಮಾಡಲಾಗಿದೆ. ಪ್ರತಿನಿತ್ಯ ಪತ್ರಿಕೆ ಓದುತ್ತಿರುವ ಬಗ್ಗೆ ಶಿಕ್ಷಕರು ಗಮನಹರಿಸಲಿದ್ದಾರೆ. ಪ್ರತಿದಿನವೂ ಜಗತ್ತು ಅಪ್‌ಡೇಟ್ ಆಗುತ್ತಿದೆ. ಅದರಂತೆ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗೆ ಸಂಬಂಧಿಸಿದಂತೆ ಹೊಸ ವಿಷಯವನ್ನು ಕಲಿತುಕೊಳ್ಳುತ್ತಿರಬೇಕು ಎಂದರು.
ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಪ್ರತಿಭಾಂಜಲಿ ಡೇವಿಡ್, ಗಾಯಕ ಸಿ.ಪಿ.ವಿದ್ಯಾಶಂಕರ್ ಇತರರಿದ್ದರು.