

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೋವಿಡ್ ಸಂಕಷ್ಟದಿಂದ ಹೊರ ಬಂದಿದ್ದರಿಂದ ೨೦೨೨ ಸಹಜ ಬದುಕಿನತ್ತ ಜನತೆ ಹೊರಳಿದ್ದರು. ೨೦೧೮ ರಿಂದ ಸತತ ಮೂರು ವರ್ಷ ಸಂಭವಿಸಿದ ಪ್ರಕೃತಿ ವಿಕೋಪ, ತದನಂತರ ಕಾಣಿಸಿಕೊಂಡ ಮಾರಕ ರೋಗ ಕೋವಿಡ್ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಪ್ರಕೃತಿ ವಿಕೋಪ, ಕೋವಿಡ್ ಭಯ ದೂರವಾಗಿದ್ದರಿಂದ ಜನಸಾಮಾನ್ಯರ ಪಾಲಿಗೆ ೨೦೨೨ ಒಂದಿಷ್ಟು ನೆಮ್ಮದಿಯ ವರ್ಷವಾಗಿತ್ತು.
ಹಬ್ಬಹರಿದಿನ, ಕ್ರೀಡಾ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮ, ಹೋರಾಟ, ರಾಜಕಾರಣ ಸೇರಿದ್ದಂತೆ ಎಲ್ಲಾ ಚಟುವಟಿಕೆಗಳು ೨೦೨೨ ರಲ್ಲಿ ನಡೆಯಿತು.
ಮನೆಯಿಂದ ಹೊರ ಬರಲಾರದ ಅನಿವಾರ್ಯ ಪರಿಸ್ಥಿತಿಯಲ್ಲಿ ನರಳುತ್ತಿದ್ದ ಜನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಹೋಗಲಾರಂಭಿಸಿದರು. ಹೊರ ಜಿಲ್ಲೆ, ರಾಜ್ಯ ಸೇರಿದ್ದಂತೆ ವಿದೇಶಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಪ್ರವಾಸ ತೆರಳಿದ್ದು ವಿಶೇಷ. ಅದೇ ರೀತಿಯಲ್ಲಿ ವಿವಿಧೆಡೆಯಿಂದ ಕೊಡಗಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಕಳಕೇರಿ ನಿಡುಗಣೆ ಹಾಗೂ ಹಾಕತ್ತೂರಿನಲ್ಲಿ ನಿರ್ಮಾಣ ಮಾಡಿರುವ ಮನೆಗಳನ್ನು ಹಸ್ತಾಂತರಿಸಲಾಯಿತು. ಕೆ.ನಿಡುಗಣೆ ಗ್ರಾಮದಲ್ಲಿ ಕಟ್ಟಿರುವ ಮನೆ ಹಸ್ತಾಂತರಕ್ಕೆ ಮುಖ್ಯಮಂತ್ರಿ ಬರುವ ನಿರೀಕ್ಷೆಯಲ್ಲಿ ವಿಳಂಬವಾಗಿತ್ತು. ಮನೆ ನೀಡಲು ವಿಳಂಬ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದ ಸಂತ್ರಸ್ತರ ಬೀಗ ಮುರಿದು ನುಗ್ಗುವ ಎಚ್ಚರಿಕೆ ನೀಡಿದರು. ಅಂತಿಮವಾಗಿ ಕ್ಷೇತ್ರದ ಶಾಸಕರ ಮೂಲಕ ಮನೆ ಹಸ್ತಾಂತರಿಸಲಾಯಿತು.
ರವಿ ಕಾಳಪ್ಪ ನೇಮಕ
ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷರಾಗಿ ಬಿಜೆಪಿ ಹಿರಿಯ ಮುಖಂಡ ನಾಪಂಡ ರವಿ ಕಾಳಪ್ಪ ನೇಮಕಗೊಂಡರು. ಮಂಡಳಿ ಮೂಲಕ ವಿವಿಧ ಕಾರ್ಯ ಚಟುವಟಿಕೆಗಳನ್ನು ಕೊಡಗಿನಲ್ಲಿ ಆಯೋಜಿಸುವ ಮೂಲಕ ಅಲ್ಪಾವಧಿಯಲ್ಲಿ ಗಮನ ಸೆಳೆದಿದರು. ಗಿಡಮೂಲಿಕೆ ಮಹತ್ವ ಕುರಿತು ವಿಶೇಷ ಕಾರ್ಯಾಗಾರ ಮಡಿಕೇರಿಯಲ್ಲಿ ಆಯೋಜಿಸಲಾಗಿತ್ತು. ಕರ್ನಾಟಕ ಪಶ್ಚಿಮಘಟ್ಟ ಕಾರ್ಯಪಡೆ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದ ಶಾಂತೆಯಂಡ ರವಿ ಕುಶಾಲಪ್ಪ ಅವರ ಅವಧಿ ಇದೇ ವರ್ಷ ಮುಗಿಯಿತು.
ಅಕಾಡೆಮಿ ಅವಧಿ ಪೂರ್ಣ
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮೂರು ವರ್ಷದ ಆಡಳಿತಾವಧಿ ಈ ವರ್ಷ ಪೂರ್ಣಗೊಂಡಿತ್ತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಕಜೆಗದ್ದೆ ನೇತೃತ್ವದ ಆಡಳಿತ ಮಂಡಳಿ ಪರಿಣಾಮಕಾರಿ ಕಾರ್ಯ ಚಟುವಟಿಕೆ ಮಾಡುವುದರ ಮೂಲಕ ಜನಮನ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಅಕಾಡೆಮಿ ಕಾರ್ಯ ಚಟುವಟಿಕೆ ಗೆ ಮಾದರಿಯಾಗುವ ರೀತಿ ಕಾರ್ಯಕ್ರಮ ಈ ಅವಧಿಯಲ್ಲಿ ಮಾಡಿರುವುದು ವಿಶೇಷ. ಎರಡು ಅಕಾಡೆಮಿಗಳು ತಮ್ಮ ಆಡಳಿತಾವಧಿ ಪೂರ್ಣಗೊಳ್ಳುವ ವೇಳೆ ಆಯೋಜಿಸಿದ್ದ ಕಾರ್ಯಕ್ರಮಗಳು ಸ್ಮರಣೀಯವಾಗಿತ್ತು.
ರಂಗೇರಿದ ಕ್ರೀಡಾಕೂಟ
ಕ್ರೀಡಾ ತವರೂರು ಎಂದು ಪ್ರಖ್ಯಾತಿ ಹೊಂದಿರುವ ಕೊಡಗು ಜಿಲ್ಲೆಯಲ್ಲಿ ೨೦೧೮ ರಿಂದ ಪ್ರಕೃತಿ ವಿಕೋಪ ಹಾಗೂ ಕೋವಿಡ್ ಹಿನ್ನೆಲೆಯಲ್ಲಿ ಕ್ರೀಡಾ ಚಟುವಟಿಕೆಗೆ ಬ್ರೇಕ್ ಬಿದ್ದಿತ್ತು. ಪ್ರಕೃತಿ ವಿಕೋಪ, ಕೋವಿಡ್ ಆತಂಕದಿಂದ ಹೊರ ಬಂದ ಹಿನ್ನೆಲೆಯಲ್ಲಿ ೨೦೨೨ ರಲ್ಲಿ ಹೆಚ್ಚಿನ ಕ್ರೀಡಾ ಕೂಟಗಳು ಆಯೋಜನೆಗೊಂಡಿತ್ತು.
ಸಮಾಜಗಳು, ಸಂಘ- ಸಂಸ್ಥೆಗಳು, ಸಂಘಟನೆಗಳು ವಿವಿಧೆಡೆಯಲ್ಲಿ ವಿವಿಧ ಕ್ರೀಡಾಕೂಟ ಆಯೋಜಿಸಿದ್ದರು. ಕ್ರಿಕೆಟ್, ಹಾಕಿ, ಕಬ್ಬಡಿ, ವಾಲಿಬಾಲ್, ಥ್ರೋಬಾಲ್, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಕೆಸರುಗದ್ದೆ ಸೇರಿದ್ದಂತೆ ವಿವಿಧ ಆಟೋಟ ನಡೆಯಿತು. ಹಲವು ವರ್ಷದ ಬಳಿಕ ಕ್ರೀಡಾಕೂಟ ಆಯೋಜಿಸಿದ್ದರಿಂದ ಕ್ರೀಡಾಪಟುಗಳು ಹಾಗೂ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕಾವೇರಿ- ಕೊಡವತಿ ಅವಹೇಳನ
ಸಾಮಾಜಿಕ ಜಾಲತಾಣದಲ್ಲಿ ಕಾವೇರಿ ತಾಯಿ ಹಾಗೂ ಕೊಡವತಿ ಬಗ್ಗೆ ಅವಹೇಳನ ಮಾಡಿದ್ದು ಕೊಡಗಿನಲ್ಲಿ ಭಾವನಾತ್ಮಕವಾಗಿ ನೋವುಂಟು ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನು ಗುರಿ ಮಾಡುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸಲಾಗಿತ್ತು. ಮುಸ್ಲಿಂ ವಿದ್ಯಾರ್ಥಿ ಸೇರಿದ್ದಂತೆ ಮುಸ್ಲಿಮರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆರೋಪಿ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆಗೆ ಸಿದ್ಧತೆ ನಡೆದಿತ್ತು. ಈ ಹಂತದಲ್ಲಿ ಪೊಲೀಸರು ಕೊಡವ ಯುವಕನನ್ನು ಸೆರೆಹಿಡಿಯುವ ಮೂಲಕ ಅವಹೇಳನ ಪ್ರಕರಣಕ್ಕೆ ಹೊಸ ತಿರುವು ನೀಡಿದರು. ತ್ವರಿತಗತಿಯಲ್ಲಿ ಆರೋಪಿ ಬಂಧಿಸಿದ್ದಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾ.ಎಂ.ಎ. ಅಯ್ಯಪ್ಪ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
ಕೃತಿ ಲೋಕಾರ್ಪಣೆ
ಕೊಡಗು ಜಿಲ್ಲೆಯ ಲೇಖಕರು ಬರೆದ ಸಾಕಷ್ಟು ಕೃತಿಗಳು ೨೦೨೨ ರಲ್ಲಿ ಲೋಕಾರ್ಪಣೆಗೊಂಡಿತ್ತು. ಅದರಲ್ಲಿಯೂ ಬೊಳ್ಳಜೀರ ಬಿ. ಅಯ್ಯಪ್ಪ ನೇತೃತ್ವದ ಕೊಡವ ಮಕ್ಕಡ ಕೂಟದಿಂದ ಸಾಕಷ್ಟು ಕೃತಿಗಳು ಪ್ರಕಟಗೊಂಡಿವೆ. ಹಿರಿಯ, ಕಿರಿಯ ಸಾಹಿತಿಗಳು ರಚಿಸಿದ ಕಥೆ, ಕಾದಂಬರಿ, ಕವನ ಸಂಕಲನಗಳು ಓದುಗರ ಕೈ ಸೇರಿದೆ. ಆ ಮೂಲಕ ಕೊಡಗಿನ ಸಾಹಿತ್ಯ ಲೋಕಕ್ಕೆ ಹಲವು ಕೃತಿಗಳು ಸೇರ್ಪಡೆಗೊಂಡಿವೆ. ಒಂದಿಷ್ಟು ಪರಿಣಾಮಕಾರಿ ಸಾಹಿತ್ಯ ಚಟುವಟಿಕೆಗಳು ಕೊಡಗಿನಲ್ಲಿ ನಡೆದಿವೆ. ಈ ಪೈಕಿ ಡಾ.ಕುಶ್ವಂತ್ ಕೋಳಿಬೈಲು ಮುಂದಾಳತ್ವದಲ್ಲಿ ಹಲವು ಚಟುವಟಿಕೆ ನಡೆಯಿತು.
ಕೊಡವ ಚಲನಚಿತ್ರ ತೆರೆಗೆ
ಸೀಮಿತ ಮಾರುಕಟ್ಟೆ ಹೊಂದಿರುವ ಕೊಡಗಿನಲ್ಲಿ ಕೊಡವ ಭಾಷೆಯಲ್ಲಿ ಚಲನಚಿತ್ರ ನಿರ್ಮಾಣ ಮಾಡುವುದು ದೊಡ್ಡ ಸಾಹಸದ ಕೆಲಸ. ಚಿತ್ರ ನಿರ್ಮಾಣಕ್ಕೆ ಹಾಕಿದ ಹಣ ಮರಳಿ ಬರುವುದಿಲ್ಲ ಎಂದು ಖಾತ್ರಿ ಇದ್ದರೂ, ಚಲನಚಿತ್ರ ಕ್ರೇಜ್ ಹೊಂದಿರುವವರು ಮಾತ್ರ ಚಿತ್ರ ನಿರ್ಮಾಣಕ್ಕೆ ಕೈ ಹಾಕುತ್ತಾರೆ. ೨೦೨೨ ರಲ್ಲಿ ನಾಲ್ಕು ಕೊಡವ ಚಿತ್ರ ತೆರೆಕಂಡಿರುವುದು ವಿಶೇಷ. ಉಸಾರ್, ತೇಂಬಾಡ್, ನೆಲ್ಚಿಬೊಳಿ, ಪೊಮ್ಮಾಲೆ ಕೊಡಗ್ ಚಲನಚಿತ್ರ ತೆರೆ ಕಂಡಿದೆ. ಉಸಾರ್, ತೇಂಬಾಡ್, ನೆಲ್ಚಿಬೊಳಿ ಕೊಡಗಿನ ವಿವಿಧೆಡೆಯಲ್ಲಿ ಪ್ರದರ್ಶನ ಕಂಡಿತ್ತು. ಪೊಮ್ಮಾಲೆ ಕೊಡಗ್ ಕೊಡಗಿನ ಕೇಂದ್ರ ಸ್ಥಾನ ಮಡಿಕೇರಿಯಲ್ಲಿರುವ ಕಾವೇರಿ ಕಲಾಕ್ಷೇತ್ರದಲ್ಲಿ ಪ್ರದರ್ಶನ ಕಂಡಿತು.
ಆರೋಪದಡಿ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸುವುದರ ಮೂಲಕ ಆತನನ್ನು ಬಂಧಿಸಲಾಗಿತ್ತು.
ವನ್ಯಪ್ರಾಣಿ ಉಪಟಳ
ಹಲವು ವರ್ಷದಂತೆ ೨೦೨೨ ರಲ್ಲಿಯೂ ಕಾಡಾನೆ, ಹುಲಿ, ಕಾಡುಹಂದಿ, ಕಾಡುಕೋಣ ಸೇರಿದ್ದಂತೆ ವನ್ಯಪ್ರಾಣಿಗಳ ಉಪಟಳ ಎಲ್ಲೆಮೀರಿತ್ತು. ಅರಣ್ಯದಂಚಿನ ಗ್ರಾಮದ ನಿವಾಸಿಗಳು ವನ್ಯಪ್ರಾಣಿಗಳಿಂದ ಫಸಲು ನಷ್ಟ ಸೇರಿದ್ದಂತೆ ಕಷ್ಟನಷ್ಟಕ್ಕೆ ತುತ್ತಾದರು. ಕಾಡಾನೆ, ಹುಲಿ ಭಯದಿಂದ ತೋಟದಲ್ಲಿ ಕೆಲಸ ಮಾಡಲು ಸಾಧ್ಯವಾಗದ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಭತ್ತ, ಕಾಫಿ, ಬಾಳೆ ಫಸಲು ವನ್ಯಪ್ರಾಣಿಗಳಿಗೆ ತುತ್ತಾಗಿ ಕೃಷಿಕರು ಕಣ್ಣೀರು ಹಾಕುವಂತಾಯಿತು.
ವನ್ಯಪ್ರಾಣಿಗಳ ಹಾವಳಿಯಿಂದ ಮುಕ್ತಿ ನೀಡುವಂತೆ ರೈತ ಸಂಘ ಸೇರಿದ್ದಂತೆ ವಿವಿಧ ಸಂಘ- ಸಂಸ್ಥೆಗಳ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಯಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಜನರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಹೀಗಿದ್ದರೂ, ವನ್ಯಪ್ರಾಣಿಗಳ ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯಲು ಸಾಧ್ಯವಾಗಲಿಲ್ಲ.
ವನ್ಯಪ್ರಾಣಿ ದಾಳಿಯಿಂದ ಜನ- ಜಾನುವಾರು ಜೀವ ಕಳೆದುಕೊಂಡಿತ್ತು. ಸಾಕಷ್ಟು ಜನ ಗಾಯಾಳುಗೊಂಡಿದ್ದರು. ಸಾಕು ಪ್ರಾಣಿಗಳು ವನ್ಯ ಪ್ರಾಣಿಗಳ ದಾಳಿಯಿಂದ ಗಾಯಗೊಂಡಿತ್ತು. ಹಲವು ವನ್ಯಪ್ರಾಣಿಗಳು ನಾಡಿನಲ್ಲಿ ಜೀವ ಕಳೆದುಕೊಂಡಿತ್ತು. ಸಿದ್ದಾಪುರ ಭಾಗದಲ್ಲಿ ಹಲವು ಕಾಡಾನೆಗಳನ್ನು ಸೆರೆಹಿಡಿಯಲಾಯಿತು.