ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬುಧವಾರ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿಯ ‘ ಭಕ್ತರ ಗಿರಿ ಮಾದಯ್ಯನ ಗಿರಿ’ - 40 ಪುಟಗಳ ವಿಶೇಷ ಪುರವಣಿಯನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಬಿಡುಗಡೆಗೊಳಿಸಿದರು.
ಪ್ರಾಧಿಕಾರದಿಂದ ಶ್ರೀ ಕ್ಷೇತ್ರದಲ್ಲಿ ಕೈಗೊಂಡಿರುವ ಸಾಮೂಹಿಕ ವಿವಾಹ ಹಾಗೂ ಸನ್ನಿಧಿ ಅಭಿವೃದ್ಧಿ ಬಗ್ಗೆ ಪುರವಣಿ ಬೆಳಕು ಮೂಡಿಸಿದೆ.
108 ಅಡಿ ಎತ್ತರದ ಮಹದೇಶ್ವರರ ಪ್ರತಿಮೆ ನಿರ್ಮಾಣ, ಒಳಾಂಗಣದಲ್ಲಿ ಮಾದಪ್ಪನ ಚರಿತ್ರೆಯನ್ನು ಪ್ರತಿಬಿಂಬಿಸುವ ಕಲಾ ಪ್ರತಿಮೆಗಳು, ಒಳ ಚರಂಡಿ ವ್ಯವಸ್ಥೆ, ಸೋಲಾರ್ ಪ್ಲಾಂಟ್ ನಿರ್ಮಾಣ, ದಾಸೋಹ ಭವನದಲ್ಲಿ ಅಡುಗೆಗೆ ಗೋಬರ್ ಗ್ಯಾಸ್ ಬಳಕೆಯ ಚಿಂತನೆ, ಒಳಾಂಗಣದ ವ್ಯವಸ್ಥೆ, ಭಕ್ತರ ಅನುಕೂಲಕ್ಕಾಗಿ ರಸ್ತೆಗಳ ನಿರ್ಮಾಣ, ಅಂತರಗುಹೆಯ ಮೂಲಕ ದೇವರ ದರ್ಶನ ಪಡೆಯಲು ಭಕ್ತರಿಗಾಗಿ ಕ್ಯೂ ಲೈನ್ ಕಾಮಗಾರಿ, ಡಾರ್ಮಿಟರಿ ನಿರ್ಮಾಣ, ಜಾತ್ರೆಯಲ್ಲಿ ಭಕ್ತರಿಗೆ ದೊರೆಯುವ ಸೌಕರ್ಯಗಳು, ಸ್ವಚ್ಛತೆಗೆ ಆದ್ಯತೆ, ಶೌಚಗೃಹಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಉಚಿತ ಸಾಮೂಹಿಕ ವಿವಾಹ ಹಾಗೂ ಇನ್ನಿತರೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಾಧಿಕಾರ ಭಕ್ತರ ಅನುಕೂಲಕ್ಕಾಗಿ ಕೈಗೊಳ್ಳುವ ಚಿಂತನೆಯನ್ನು ಒಳಗೊಂಡಿದೆ.
ಸಂಚಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತ:
ಸಂಚಿಕೆ ಬಿಡುಗಡೆಯಾದ ಕೂಡಲೇ ಭಕ್ತರ ಕೈ ಸೇರಿತು. ಸಂಚಿಕೆಯನ್ನು ಓದಿದ ಭಕ್ತರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವರು ವಿಜಯವಾಣಿಯೊಂದಿಗಿನ ಬಾಂಧವ್ಯ ಮತ್ತು ಅಭಿಪ್ರಾಯ ಹಂಚಿಕೊಂಡರು.
ಕ್ಷೇತ್ರದಲ್ಲಿ ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸಚಿವ ರಾಮಲಿಂಗಾರೆಡ್ಡಿ, ಶಾಸಕ ಎಂ.ಆರ್ ಮಂಜುನಾಥ್, ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್, ಎಸ್ಪಿ ಡಾ. ಬಿ.ಟಿ. ಕವಿತಾ ಹಾಗೂ ಇನ್ನಿತರೆ ಗಣ್ಯರು ಸಂಚಿಕೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಹುತೇಕ ಜನರು ವಿಜಯವಾಣಿ ಪತ್ರಿಕೆ ಇಂತಹ ಕಾರ್ಯದ ಬಗ್ಗೆ ಭಕ್ತರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಹೊರ ತಂದಿರುವ ಸಂಚಿಕೆಯ ಬಗ್ಗೆ ಶ್ಲಾಘನೆ ವ್ಯಕ್ತವಾಯಿತು.