ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಹಕಾರ ಅಗತ್ಯ: ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಅಭಿಮತ

1 (3)
Published on

ಮಂಡ್ಯ: ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಸರ್ಕಾರದ ಜತೆಗೆ ಪಾಲಕರು ಹಾಗೂ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.

ತಾಲೂಕಿನ ಜೋಡಿ ಹೊಡಾಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ, ಕೃಷಿಕ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಿಜಯವಾಣಿ ವಿದ್ಯಾರ್ಥಿಮಿತ್ರ ವಿತರಣೆ, ಗೀತಗಾಯನ ಮತ್ತು ಸಸ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಪಠ್ಯವಿಷಯದಲ್ಲಿ ಪರಿಣತಿ ಸಾಧಿಸಲು ಪ್ರೌಢಶಾಲೆ ವಿದ್ಯಾರ್ಥಿಗಳು ನಿತ್ಯ ಪತ್ರಿಕೆ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಆಗ ಮಾತ್ರ ಭವಿಷ್ಯದಲ್ಲಿ ನಿಮಗೆ ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಪರಿಶ್ರಮ ಹಾಗೂ ಇಚ್ಚಾಗುಣದಿಂದ ಗುರಿ ತಲುಪಲು ನೀವು ಗುರುಗಳ ಮಾರ್ಗದರ್ಶನ ಮುಖ್ಯ. ಅಂತೆಯೇ ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಅಭಿವೃದ್ಧಿ ಜತೆಗೆ ಪ್ಲಾಸ್ಟಿಕ್ ಬಳಸುವುದರಿಂದ ನಮಗಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಸಕ್ಕರೆನಾಡು ಲಯನ್ಸ್ ಸಂಸ್ಥೆಯ ಕೆ.ಆರ್.ಶಶಿಧರ ಈಚಗೆರೆ ಶಾಲೆಯ 50 ಮಕ್ಕಳಿಗೆ ವಿಜಯವಾಣಿ ವಿದ್ಯಾರ್ಥಿಮಿತ್ರ ಸಂಚಿಕೆಯನ್ನು ವಿತರಿಸಿದರು. ಮಲಬಾರ್ ಗೋಲ್ಡ್ ಮಳಿಗೆಯ ಪ್ರಮೋದ್ ಶಾಲೆಗೆ ಗೋಡೆ ಗಡಿಯಾರ ವಿತರಿಸಿದರು. ಸಸ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ತೆಂಗಿನಸಸಿ ನೆಡಲಾಯಿತು.

ಕೃಷಿಕ ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಪಿ.ವೀರಪ್ಪ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಕೋಮಲಾ, ಎಸ್‌ಡಿಎಂಸಿ ಅಧ್ಯಕ್ಷೆ ಶ್ವೇತಾ, ಮುಖ್ಯ ಶಿಕ್ಷಕ ಕೆ.ಟಿ.ನಾರಾಯಣ ಅರಸ್, ಶಿಕ್ಷಕರಾದ ಡಿ.ಎಸ್.ಕೃಷ್ಣೇಗೌಡ, ಶಿಲ್ಪಾ, ಪವಿತ್ರಾ, ಶೋಭಾ, ಬೋರೇಗೌಡ, ಅಮೃತ ಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಲೋಕೇಶ್, ಮಲಬಾರ್ ಗೋಲ್ಡ್ನ ಪ್ರಮೋದ್, ಸುರೇಶ್, ಎಸ್‌ಡಿಎಂಸಿ ಸದಸ್ಯೆ ತನುಜಾ, ಗ್ರಂಥಾಲಯ ಮೇಲ್ವಿಚಾರಕಿ ಸರೋಜಮ್ಮ ಇತರರಿದ್ದರು.

ಶಾಲೆಗೆ ವಿದ್ಯಾರ್ಥಿಮಿತ್ರ ಕೊಡುಗೆ ನೀಡಿದ ದಾನಿ ಕೆ.ಟಿ.ಹನುಮಂತು ಮತ್ತು ರವಿಕುಮಾರ್, ಗಡಿಯಾರ ವಿತರಣೆ ಮಾಡಿದ ಪ್ರಮೋದ್ ಅವರನ್ನು ಅಭಿನಂದಿಸಲಾಯಿತು. ಗಾಯಕರಾದ ಪ್ರತಿಭಾಂಜಲಿ ಡೇವಿಡ್, ಸಂತೆಕಸಲಗೆರೆ ಬಸವರಾಜು, ವೈರಮುಡಿ ಗೀತೆಗಳನ್ನು ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net