2475 ಸಹಕಾರಿ ದಿವಾಳಿ: ವಾಪಸ್​ ಆಗುತ್ತಿಲ್ಲ ಸಾಲ - ಆಡಳಿತ ಮಂಡಳಿಗೆ ಇಕ್ಕಟ್ಟು

fraud
Published on

|ರವಿ ಗೋಸಾವಿ, ಬೆಳಗಾವಿ

"ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ' ಎನ್ನುವಂತಿದ್ದ ಸಹಕಾರಿ ಕ್ಷೇತ್ರವೀಗ ಠೇವಣಿದಾರರ ವಿಶ್ವಾಸಾರ್ಹತೆ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದೆ. ನಿಯಮಬಾಹಿರವಾಗಿ ಪ್ರಭಾವಿಗಳಿಗೆ, ತಮ್ಮ ಸಂಬಂಧಿಕರಿಗೆ ಕೋಟಿಗಟ್ಟಲೆ ಸಾಲ ವಿತರಿಸಿದ ಆಡಳಿತ ಮಂಡಳಿ ಸದಸ್ಯರ ಧೋರಣೆಯಿಂದಾಗಿ ಸಾವಿರಾರು ಸಹಕಾರ ಸಂಸ್ಥೆಗಳು ದಿವಾಳಿಯೆದ್ದಿವೆ. ಸಾಲಗಾರರು ಮರುಪಾವತಿ ಮಾಡದೇ ಇರುವ ಕಾರಣ ಠೇವಣಿದಾರರು ತಮ್ಮ ಹಣ ಪಡೆಯಲು ಕೋರ್ಟ್​-ಕಚೇರಿಗಳಿಗೆ ಅಲೆಯುತ್ತಿದ್ದಾರೆ.

ಆರ್ಥಿಕ ಮುಗ್ಗಟ್ಟು: ಇತ್ತೀಚೆಗೆ ಸರ್ಕಾರ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ- 2021 ಹಾಗೂ ಸಹಕಾರ ಸಂಗಳ ತಿದ್ದುಪಡಿ ವಿಧೇಯಕ- 2021 ವನ್ನು ಉಭಯ ಸದನಗಳಲ್ಲಿ ಅಂಗೀಕರಿಸಿ, ಕಾನೂನುಗಳಲ್ಲಿ ಬದಲಾವಣೆ ಮಾಡುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಬಲ ತುಂಬಿದೆ. ಆದರೆ, ಆಡಳಿತ ಮಂಡಳಿ ಸದಸ್ಯರು, "ಆಪ್ತರಿಗೆ ತಮ್ಮ ಬಳುವಳಿ' ಎಂಬಂತೆ ಹೆಚ್ಚಿನ ಸಾಲ ಸೌಲಭ್ಯ ಒದಗಿಸುತ್ತಿದ್ದು, ಬಳಿಕ ಮರುಪಾವತಿ ಮೇಲೂ ಪ್ರಭಾವ ಬೀರುತ್ತಿದ್ದಾರೆ. ಇದರಿಂದಾಗಿ ಠೇವಣಿದಾರರಿಗೆ ಹಣ ಹಿಂದಿರುಗಿಸಲಾಗದೆ ಸಂಗಳು ಆಥಿರ್ಕ ಮುಗ್ಗಟ್ಟಿಗೆ ಸಿಲುಕುತ್ತಿವೆ. ರಾಜ್ಯದಲ್ಲಿರುವ ಒಟ್ಟು 45,210 ವಿವಿಧ ಸಹಕಾರಿ ಸಂಗಳ ಪೈಕಿ 2,475 ಸಹಕಾರಿಗಳು ಈಗಾಗಲೇ ದಿವಾಳಿಯಾಗಿದ್ದು, 3,465 ಸಹಕಾರಿಗಳು ಅಸ್ತಿತ್ವ ಕಳೆದುಕೊಳ್ಳುವ ಅಪಾಯದಲ್ಲಿವೆ.

ನಿಯಮದಲ್ಲೇನಿದೆ?: ಸಂಸ್ಥೆಯ ಒಟ್ಟು ದುಡಿಯುವ ಬಂಡವಾಳದಲ್ಲಿ ಶೇ.10 ಮೀರದಂತೆ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಶೇ.5 ಸಾಮಾನ್ಯ ಸದಸ್ಯರು ಸಾಲ ಪಡೆಯಬಹುದಾಗಿದೆ. ಸಹಕಾರಿಯ ಠೇವಣಿ ಹಿಂದಿರುಗಿಸಲು ಸಾಧ್ಯವಾಗದ ಸಂದರ್ಭದಲ್ಲಿ ಠೇವಣಿದಾರರು ದೂರು ನೀಡಿದರೆ, ಸಹಕಾರಿ ನಿಯಮಗಳ ಪ್ರಕಾರ "ರಿಜಿಸ್ಟ್ರಾರ್​ ಆಫ್​ ಕೋ ಆಪರೇಟಿವ್​' ಅವರು ಸಹಕಾರಿಯ 64 ರಿಂದ 69ರ ವರೆಗಿನ ನಿಯಮಗಳಡಿ ಆಂತರಿಕ ವಿಚಾರಣೆ, ತನಿಖೆ ನಡೆಸಿ ಕ್ರಮ ಜರುಗಿಸಬಹುದು. ಸಾಲ ಪಡೆದು ಸುಮ್ಮನಾಗುವ ಗ್ರಾಹಕರನ್ನೇ ಹೊರಗಿಟ್ಟು, ಕೇವಲ ಆಡಳಿತ ಮಂಡಳಿ/ಸಂಸ್ಥೆಗೆ ಮಾತ್ರ ಠೇವಣಿ ಮರುಪಾವತಿಯ ಹೊಣೆಗಾರಿಕೆ ನೀಡುವುದು ಸಹಕಾರಿ ಕ್ಷೇತ್ರವನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತಿದೆ.

ಹೀಗಾಗಿ ಠೇವಣಿ, ಸಾಲ ಮರುಪಾವತಿ ಹಾಗೂ ವಸೂಲಾತಿಗೆ ಸಾಲಗಾರರನ್ನೂ ಹೊಣೆಗಾರರನ್ನಾಗಿಸಬೇಕು ಎನ್ನುವುದು ಹಿರಿಯ ಸಹಕಾರಿಗಳ ಅಂಬೋಣ. ಸಾಲಗಾರರು ಸಕಾಲಕ್ಕೆ ಸಾಲ ಮರುಪಾವತಿಸದೆ ಒಂದಿಲ್ಲೊಂದು ನೆಪವೊಡ್ಡಿ ನುಣುಚಿಕೊಳ್ಳುತ್ತಿದ್ದಾರೆ. ಅತಿ ಹೆಚ್ಚು ಸಾಲ ಪಡೆದು ಬಾಕಿ ಉಳಿಸಿಕೊಂಡಿರುವವರ ಪೈಕಿ ಆಡಳಿತ ಮಂಡಳಿಯಲ್ಲಿನ ಸದಸ್ಯರು, ಅವರ ಕುಟುಂಬಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಿದ್ದರೂ, ಲಕ್ಷಾಂತರ ರೂ. ಮೊತ್ತದ ಚೆಕ್​ಬೌನ್ಸ್ ಮಾಡಿರುವ ಮಂಡಳಿಯ ಅತ್ಯಾಪ್ತರನ್ನು ಹೊರತುಪಡಿಸಿ ಅನ್ಯ ಸಾಲಗಾರರ ವಿರುದ್ಧವೇ ಹೆಚ್ಚು ಕೇಸ್ ದಾಖಲಿಸಲಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿರುವ ಬಸವೇಶ್ವರ ವಿವಿಧೋದ್ದೇಶ ಸೌಹಾರ್ದ ಸಹಕಾರಿಗೆ (ನಿ) ಸಾಲ ಮರುಪಾವತಿಯ ಚೆಕ್ ಬೌನ್ಸ್ ಮಾಡಿರುವುದಕ್ಕಾಗಿ 100ಕ್ಕೂ ಅಧಿಕ ಸಾಲಗಾರರ ವಿರುದ್ಧ ಒಟ್ಟು 145 ಪ್ರಕರಣ ದಾಖಲಿಸಲಾಗಿದೆ. ಚೆಕ್ ಬೌನ್ಸ್ ಆಗದಿದ್ದರೆ ಎಲ್ಲ ಚೆಕ್​ಗಳಿಂದ 31.50 ಕೋಟಿ ರೂ. ಜಮಾ ಆಗಿರುತಿತ್ತು. ರಾಜ್ಯದ ಸಾವಿರಾರು ಸಹಕಾರಿಗಳು ಇದೇ ಸ್ಥಿತಿಯಲ್ಲಿರುವುದು ಸಾಲಗಾರರ ಅಸಹಕಾರಕ್ಕೆ ಹಿಡಿದ ಕನ್ನಡಿಯಾಗಿದೆ.

ಠೇವಣಿ ಮರುಪಾವತಿಗೆ ಸಂಸ್ಥೆಯ ಜತೆಗೆ ಸಾಲಗಾರರನ್ನೂ ಹೊಣೆಗಾರರನ್ನಾಗಿಸಿದರೆ ಸಹಕಾರಿ ಉಳಿಯಲು, ಬೆಳೆಯಲು ಸಾಧ್ಯ. ಈ ಕ್ರಮದಿಂದ ಮಾತ್ರ ಸಾಲ ಮರುಪಾವತಿ ಸಕಾಲಕ್ಕೆ ನಡೆಯಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸೌಹಾರ್ದ ಸಹಕಾರಿ (ನಿ) ಕೂಡಲೇ ಕಾನೂನು ಕ್ರಮ ಜರುಗಿಸಿ, ಸಹಕಾರಿ ಅಭ್ಯುದಯಕ್ಕೆ ಮುತುವರ್ಜಿ ವಹಿಸಬೇಕು.
| ಆರ್.ಆರ್. ಪಾಟೀಲ ಅಧ್ಯಕ್ಷ, ಬಸವೇಶ್ವರ ವಿವಿಧೋದ್ದೇಶ ಸೌಹಾರ್ದ ಸಹಕಾರಿ, ಚಿಕ್ಕೋಡಿ


ವಂಚನೆ ಸುಳಿಯಲ್ಲಿ ಸೊಸೈಟಿಗಳು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲೇ ಐದು ಪ್ರಮುಖ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗಳು ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಸಾವಿರಾರು ಜನರಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿ ವಂಚಿಸಿವೆ. ಎಲ್ಲ ಪ್ರಕರಣಗಳೂ ಸದ್ಯ ಸಿಐಡಿ ಅಂಗಳದಲ್ಲಿ ತನಿಖಾ ಹಂತದಲ್ಲಿವೆ.

1. ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಸೊಸೈಟಿ- 4 ಸಾವಿರ ಗ್ರಾಹಕರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ 1,400 ಕೋಟಿ ರೂ. ವಂಚಿಸಿದೆ.

2. ಇದೇ ಸೊಸೈಟಿಯ ಮಾಲೀಕತ್ವದ ಚಾಮರಾಜಪೇಟೆಯಲ್ಲಿರುವ ಗುರು ಸಾರ್ವಭೌಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಗ್ರಾಹಕರಿಂದ 250 ಕೋಟಿ ರೂ. ಪಡೆದು ವಂಚಿಸಿದೆ.

3. ಎನ್​ಆರ್ ಕಾಲನಿಯಲ್ಲಿರುವ ಶ್ರೀ ವಸಿಷ್ಠ ಕೋ-ಆಪರೇಟಿವ್ ಸೊಸೈಟಿಯು ಗ್ರಾಹಕರಿಂದ 200 ಕೋಟಿ ರೂ.ಗೂ ಅಧಿಕ ಹಣ ಹೂಡಿಕೆ ಮಾಡಿಸಿಕೊಂಡಿದೆ. ಠೇವಣಿದಾರರು ಠಾಣೆಯ ಮೆಟ್ಟಿಲೇರಿದ್ದಾರೆ.

4. ಶ್ರೀ ಕಣ್ವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಗ್ರಾಹಕರಿಂದ 642 ಕೋಟಿ ರೂ. ಠೇವಣಿ ಸಂಗ್ರಹಿಸಿ ಬಡ್ಡಿಯನ್ನೂ ಕೊಡದೆ, ಅಸಲನ್ನೂ ನೀಡದೆ ವಂಚಿಸಿದೆ. ಜಾರಿ ನಿರ್ದೇಶನಾಲಯ (ಇಡಿ) ಸಂಸ್ಥೆಯ 50 ಕೋಟಿ ರೂ.ಗೂ ಅಧಿಕ ಆಸ್ತಿ ಜಪ್ತಿ ಮಾಡಿರುವುದಾಗಿ ತಿಳಿದು ಬಂದಿದೆ.

5. ಬೆಂಗಳೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ- ಪೀಣ್ಯದಲ್ಲಿ ಶಾಖೆ ಹೊಂದಿದ್ದ ಈ ಸೊಸೈಟಿ ಗ್ರಾಹಕರಿಂದ ಲಕ್ಷಾಂತರ ರೂ. ಪಿಗ್ಮಿ ಹಣ ಸಂಗ್ರಹಿಸಿ ಹಣವನ್ನೂ ಕೊಡದೆ, ಬಡ್ಡಿಯನ್ನೂ ನೀಡದೆ ವಂಚಿಸಿದೆ. ಸಣ್ಣ ಪ್ರಮಾಣದಲ್ಲಿ ವಂಚನೆ ನಡೆದ ಹಿನ್ನೆಲೆಯಲ್ಲಿ ಈ ಸಂಗತಿ ದೊಡ್ಡ ಸುದ್ದಿಯಾಗಿರಲಿಲ್ಲ.

ತನಿಖೆಯಲ್ಲಿ ತಿಳಿದಿದ್ದು
* ಭದ್ರತೆ ಇಲ್ಲದೆ ಪರಿಚಿತರಿಗೆ ನೂರಾರು ಕೋಟಿ ರೂ. ಸಾಲ ನೀಡಿಕೆ
* ಸಮಯಕ್ಕೆ ಸರಿಯಾಗಿ ವಸೂಲಿ ಇಲ್ಲ
* ಸಾಲ ಪಡೆದವರು ಹೂಡಿಕೆ ಮಾಡಿ ನಷ್ಟ
* ಠೇವಣಿ ಹಣವನ್ನು ಉದ್ಯಮಗಳಲ್ಲಿ ಹೂಡಿರುವ ಬ್ಯಾಂಕ್ ಮುಖ್ಯಸ್ಥರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net