ವಿದ್ಯಾರ್ಥಿಗಳ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಎರಡು ಪ್ರಮುಖ ಘಟ್ಟಗಳು. ಇವೇ ಅವರ ಭವಿಷ್ಯದ ಬದುಕನ್ನು ನಿರ್ಧರಿಸುವ ತಿರುವುಗಳು. ಹಾಗಾಗಿ ಈ ಹಂತದಲ್ಲಿ ಮಕ್ಕಳು ಸಹಜವಾಗಿಯೇ ಗೊಂದಲ, ಕಳವಳ, ಒತ್ತಡ ಅನುಭವಿಸುತ್ತಾರೆ. ಪಾಲಕರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳು ಮತ್ತು ಪಾಲಕರ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಸಚಿವರಿಂದಲೇ ಸಮಾಧಾನಕರ ಉತ್ತರ ಕೊಡಿಸಲು ವಿಜಯವಾಣಿ-ದಿಗ್ವಿಜಯ 247 ನ್ಯೂಸ್ ‘ಫೋನ್-ಇನ್’ ಕಾರ್ಯಕ್ರಮ ಆಯೋಜಿಸಿದ್ದವು. ನೂರಾರು ಮಕ್ಕಳು, ಪಾಲಕರು, ಶಿಕ್ಷಕರು ಕರೆ ಮಾಡಿ ತಮ್ಮಮನಸ್ಸಿನಲ್ಲಿದ್ದ ಸಂಶಯಗಳನ್ನು ನಿವಾರಿಸಿ ಕೊಂಡರು.
ವಿಜಯವಾಣಿ-ದಿಗ್ವಿಜಯ 247 ನ್ಯೂಸ್ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಸೋಮವಾರ ಭಾಗವಹಿಸಿದ್ದ ಅವರು, ರಾಜ್ಯದ ನಾನಾ ಕಡೆಯಿಂದ ದೂರವಾಣಿ ಕರೆ ಮಾಡಿ ಸಮಸ್ಯೆಗಳನ್ನು ಹೇಳಿಕೊಂಡ ಮಕ್ಕಳು, ಪಾಲಕರು ಮತ್ತು ಶಿಕ್ಷಕರಿಗೆ ಸಮಾಧಾನಚಿತ್ತದಿಂದ ಸೂಕ್ತ ಉತ್ತರಗಳನ್ನು ನೀಡಿದರು. ಕೆಲವು ಪ್ರಶ್ನೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್, ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ. ಸುಮಂಗಲಾ, ಪಿಯು ಇಲಾಖೆ ಜಂಟಿ ನಿರ್ದೇಶಕ (ಪರೀಕ್ಷೆ) ಕಲ್ಲಯ್ಯ ಮತ್ತು ಸಹಾಯಕ ನಿರ್ದೇಶಕ (ಪರೀಕ್ಷೆ) ಪ್ರಸನ್ನ ಕುಮಾರ್ ಉತ್ತರ ನೀಡಿದರು.
ಪಬ್ಲಿಕ್ ಪರೀಕ್ಷೆ ಇಲ್ಲ: ಚಿತ್ರದುರ್ಗದ ಸಂಗೀತಾ ಎಂಬ ಏಳನೇ ತರಗತಿಯ ವಿದ್ಯಾರ್ಥಿನಿಗೆ ಈ ಸಾಲಿನ ಪರೀಕ್ಷೆಯಲ್ಲಿ ಕೆಲ ಬದಲಾವಣೆ ಮಾಡಿರುವುದರ ಬಗ್ಗೆ ಗೊಂದಲವಿತ್ತು. ಆಕೆ ಕೇಳಿದ ಪ್ರಶ್ನೆಗಳಿಗೆ ಸಚಿವರು ಸ್ಪಷ್ಟವಾದ ವಿವರಗಳನ್ನು ನೀಡಿದರು. ‘ಈ ಸಾಲಿನಲ್ಲಿ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇರುವುದಿಲ್ಲ. ಆದರೆ ಅದರ ಬದಲು ಮೌಲ್ಯಾಂಕನ ಪರೀಕ್ಷೆ ಮಾಡುತ್ತಿದ್ದೇವೆ. ಯಾರನ್ನೂ ಫೇಲ್ ಮಾಡುವುದಿಲ್ಲ. ವಿದ್ಯಾರ್ಥಿ ಯಾವ ವಿಷಯದಲ್ಲಿ ದುರ್ಬಲನಾಗಿದ್ದಾನೆ ಎಂಬುದನ್ನು ತಿಳಿಯಲು ಇದರಿಂದ ಸಹಾಯವಾಗುತ್ತದೆ. ನಂತರ 8ನೇ ತರಗತಿಯಿಂದ ಆ ವಿದ್ಯಾರ್ಥಿಯನ್ನು ನಿರ್ದಿಷ್ಟ ವಿಷಯದಲ್ಲಿ ವಿಶೇಷ ಆಸಕ್ತಿ ವಹಿಸಿ ತರಬೇತುಗೊಳಿಸಲು ಸಾಧ್ಯವಾಗುತ್ತದೆ. ಪ್ರಶ್ನೆಪತ್ರಿಕೆಯನ್ನು ಮಾತ್ರ ರಾಜ್ಯ ಮಟ್ಟದಲ್ಲೇ ರೂಪಿಸಿ ಕಳಿಸಿಕೊಡಲಾಗುತ್ತದೆ. ಬಹುಆಯ್ಕೆ, 2 ಅಂಕಗಳ ಪ್ರಶ್ನೆ ಹೀಗೆ ಮೊದಲಿದ್ದ ನಮೂನೆಯಲ್ಲೇ ಪ್ರಶ್ನೆಪತ್ರಿಕೆ ಇರುತ್ತದೆ’ ಎಂದು ವಿವರಿಸಿದರು.
ಆಯುಕ್ತ ಡಾ. ಜಗದೀಶ್ ಬಗ್ಗೆ ಸಚಿವರ ಪ್ರಶಂಸೆ : ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಸಚಿವ ಸುರೇಶ್ಕುಮಾರ್ ಅವರು ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್ ಅವರ ಉದಾಹರಣೆಯನ್ನೇ ನೀಡಿ, ಅವರನ್ನು ಪ್ರಶಂಸಿಸಿದರು. ‘ಜಗದೀಶ್ ಅವರು ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆಯವರು. ಕೃಷಿಯಲ್ಲಿ ಪದವಿ ಮುಗಿಸಿ ಆನಂತರ ಸ್ನಾತಕೋತ್ತರ ಪದವಿ ಮಾಡಿ. ಪಿಎಚ್.ಡಿ ಪಡೆದಿದ್ದಾರೆ. ಅಲ್ಲದೆ, ಲಾಂಗ್ ರನ್ನಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ದಾಖಲೆ ಮಾಡಿದ್ದಾರೆ. ಇವರ ರೀತಿ ನೀವೂ ಆಗಬೇಕು. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕ ಮಾತ್ರವಲ್ಲ, ಪಠ್ಯೇತರ ಚಟುವಟಿಕೆ ಕಡೆಗೂ ಗಮನ ನೀಡಬೇಕು’ ಎಂದು ಸಚಿವರು ಆಯುಕ್ತರ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತ ಮಕ್ಕಳಿಗೆ ತಿಳಿಹೇಳಿದರು.
ಪಾಸಿಂಗ್ ಮಾರ್ಕ್, ವೇಟೇಜ್ ಇಲ್ಲ…: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸಿಂಗ್ ಮಾರ್ಕ್, ವೇಟೇಜ್ ನೀಡಿ. ಇಲ್ಲವಾದರೆ ಕಡಿಮೆ ಓದಿದ ಮಕ್ಕಳಿಗೆ ಅನ್ಯಾಯವಾಗುತ್ತದೆ ಎಂದು ವಿದ್ಯಾರ್ಥಿನಿಯೊಬ್ಬಳು ಮನವಿ ಮಾಡಿದಳು. ಇದಕ್ಕೆ ಉತ್ತರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್, ‘ಚೆನ್ನಾಗಿ ಓದಿರುವುದನ್ನು ಪರೀಕ್ಷಿಸುವುದಕ್ಕಾಗಿಯೇ ಪರೀಕ್ಷೆ ನಡೆಸುತ್ತೇವೆ. ಪಾಸಿಂಗ್ ಮಾರ್ಕ್, ವೇಟೇಜ್ ನೀಡಿದರೆ ಪರೀಕ್ಷೆಗೆ ಅರ್ಥವೇ ಇರುವುದಿಲ್ಲ. ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು. ಹೆಚ್ಚಿನ ಅಂಕ ಗಳಿಸಬೇಕಾದಲ್ಲಿ ಎಲ್ಲ ಪಾಠಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲೇಬೇಕು. ಇದು ಪರೀಕ್ಷೆಗೆ ಮಾತ್ರವಲ್ಲ, ಭವಿಷ್ಯದಲ್ಲೂ ಸಹಾಯಕ್ಕೆ ಬರುತ್ತದೆ’ ಎಂದು ಸಲಹೆ ನೀಡಿದರು.
ಅನುದಾನಿತ ಶಾಲೆಗಳಿಗೆ ಜೀವ: ಅನುದಾನಿತ ಶಾಲೆಗಳಲ್ಲಿ 25ಕ್ಕಿಂತ ಕಡಿಮೆ ಮಕ್ಕಳು ಇದ್ದಲ್ಲಿ ಅಂಥ ಶಾಲೆಗಳನ್ನು ಮುಚ್ಚುವ ಕುರಿತು ಸರ್ಕಾರ ತೀರ್ವನಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಸುರೇಶ್ ಕುಮಾರ್, ‘ಈ ಬಗ್ಗೆ ನಮಗೆ ಈಗಾಗಲೇ ತುಂಬಾ ಪ್ರಸ್ತಾವನೆಗಳು ಬಂದಿವೆ. ಈ ಪ್ರಸ್ತಾವನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಸಕಾರಾತ್ಮಕವಾದ ನಿಲುವನ್ನು ತಾಳಲಿದೆ’ಎಂದರು.
ಪರೀಕ್ಷೆ ಮಧ್ಯೆ ಶೌಚಗೃಹಕ್ಕೆ ಹೋಗಲು ಅವಕಾಶ ಕೊಡಿ…
ಪರೀಕ್ಷೆ ನಡೆಯುವಾಗ ಯಾವುದಾದರೂ ವಿದ್ಯಾರ್ಥಿಗೆ ಶೌಚಾಲಯಕ್ಕೆ ಹೋಗುವುದು ಅನಿವಾರ್ಯವಾದರೆ ಅವಕಾಶ ಕೊಡಬೇಕಲ್ಲವೆ? ಈಗಿರುವ ನಿಯಮಗಳಲ್ಲಿ ಇದಕ್ಕೆ ಅವಕಾಶವಿಲ್ಲ. ಆದರೆ ಎಲ್ಲರ ಆರೋಗ್ಯ ಪರಿಸ್ಥಿತಿ ಒಂದೇ ರೀತಿ ಇರುವುದಿಲ್ಲ. ಈ ನಿಯಮ ಸರಿಯಲ್ಲ
ಬರಲಿದೆ ಪ್ರಶ್ನೋತ್ತರದ ವಿಡಿಯೋ…: ವಿದ್ಯಾರ್ಥಿಗಳ ಮನಸ್ಸಿನಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿರುತ್ತವೆ. ಇದು ಅನೇಕ ಬಾರಿ ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇವುಗಳಿಗೆ ಸೂಕ್ತ ಉತ್ತರಗಳನ್ನು ಒಳಗೊಂಡ 10 ನಿಮಿಷಗಳ ವಿಡಿಯೋ ತಯಾರಿಸಿ ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು. ಅದನ್ನು ಆದಷ್ಟು ಬೇಗ ವಾಟ್ಸ್ಆಪ್, ಯೂಟ್ಯೂಬ್, ಫೇಸ್ಬುಕ್ ಮತ್ತಿತರ ಜಾಲತಾಣಗಳ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ತಲುಪಿಸಲಾಗುವುದು ಎಂದು ಸಚಿವ ಸುರೇಶ್ಕುಮಾರ್ ಹೇಳಿದರು.
ಮಕ್ಕಳಿಗೆ ಶಿಕ್ಷಕರು ಹೊಡೆಯುವಂತಿಲ್ಲ…: ಮಕ್ಕಳಿಗೆ ಶಿಕ್ಷಕರು ‘ಶಿಕ್ಷೆ’ ನೀಡಿದರೆ ಪಾಲಕರು ಪೊಲೀಸರಿಗೆ ದೂರು ನೀಡುತ್ತಿರುವುದನ್ನು ಬೆಂಗಳೂರಿನ ವಿದ್ಯಾರ್ಥಿ ನಿತಿನ್ ಕುಮಾರ್ ಪ್ರಸ್ತಾಪಿಸಿದ. ‘ಮಕ್ಕಳ ಸಹಾಯವಾಣಿ 1098 ದೂರವಾಣಿ ಸಂಖ್ಯೆ
ಕೈಗಳು ನಡುಗುತ್ತವೆ ಸಾರ್…!: ಕಲಬುರಗಿ ಜಿಲ್ಲೆ ಉಡಚಣದ ನಾಗೇಶ್ ಎಂಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಸಮಸ್ಯೆ ಭಿನ್ನವಾಗಿತ್ತು. ‘ನನಗೆ ಪರೀಕ್ಷೆ ಅಂದ್ರೇನೆ ಭಯ ಸಾರ್. ಬರೆಯೋಕೆ ಹೋದರೆ ಕೈಗಳು ನಡುಗುತ್ತವೆ. ಏನು ಮಾಡಲಿ?’ ಎಂಬುದು ಅವನ ಪ್ರಶ್ನೆಯಾಗಿತ್ತು. ಇದಕ್ಕೆ ನಸುನಗುತ್ತಲೇ ಸಚಿವರು, ‘ನೀನು ಪ್ರತಿದಿನ ತರಗತಿಗಳಿಗೆ ಹೋಗಿದ್ದೀಯಾ? ಟೆಸ್ಟ್, ಪ್ರಿಪರೇಟರಿ ಎಕ್ಸಾಂಗಳನ್ನು ಅಟೆಂಡ್ ಮಾಡಿದ್ದೀಯಾ? ಹಾಗಾದರೆ ಯಾಕೆ ಹೆದರುತ್ತೀಯಾ? ಪರೀಕ್ಷೆಗೆ ಇನ್ನೂ 53 ದಿನ ಇದೆ. ಬೆಳಗ್ಗೆ ಮತ್ತು ಸಂಜೆ ತಪ್ಪದೆ ಪಾಠಗಳನ್ನು ಓದು. ಓದಿದ್ದನ್ನು ಪದೇಪದೆ ಬರೆದು ಮನನ ಮಾಡಿಕೊ. ಈ ಶ್ರದ್ಧೆಯೇ ನಿನಗೆ ಪರೀಕ್ಷೆ ಎದುರಿಸುವ ಶಕ್ತಿಯನ್ನು ಕೊಡುತ್ತದೆ. ಕೈನಡುಗುವುದೂ ನಿಂತುಹೋಗುತ್ತದೆ’ ಎಂದು ಧೈರ್ಯ ತುಂಬಿದರು.