ಸುಸಜ್ಜಿತ ಕ್ರೀಡಾಂಗಣವಿಲ್ಲದೆ ಕಮರಿದ ಪ್ರತಿಭೆಗಳು

21 gkp 02 GPL
Published on

ಗೋಣಿಕೊಪ್ಪ: ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿ. ಅದೆಷ್ಟೋ ಕೊಡಗಿನ ಕ್ರೀಡಾಪಟುಗಳು ರಾಷಟ್ರೆ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿ ಕೊಡಗಿಗೆ ಕೀರ್ತಿ ತಂದಿದ್ದಾರೆ. ಆದರೆ, ಕೊಡಗಿನಲ್ಲಿ ಕ್ರೀಡಾಪಟುಗಳಿಗೆ ಕ್ರೀಡಾಂಗಣ, ಮೂಲಸೌಕರ್ಯ ಇಲ್ಲದಿರುವುದು ವಿಪರ್ಯಾಸ.

ನಗರದಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಪಿಎಲ್ ತಂಡದವರು ಕ್ರೀಡಾಂಗಣ ವ್ಯವಸ್ಥೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದು ಹೀಗೆ.

ದಕ್ಷಿಣ ಕೊಡಗಿನ ವಾಣಿಜ್ಯ ನಗರಿ ಗೋಣಿಕೊಪ್ಪದಲ್ಲಿ ಸುಸಜ್ಜಿತ ಕ್ರೀಡಾಂಗಣವಿಲ್ಲದೆ ಕ್ರೀಡಾಪಟುಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವ ಒಂದು ಮೈದಾನದಲ್ಲಿಯೇ ಎಲ್ಲವೂ ಆಗಬೇಕು. ದಸರಾ ಸಂದರ್ಭದಲ್ಲಿ ಸಾಂಸ್ಕೃತಿಕ ವೇದಿಕೆ ನಿರ್ಮಾಣವಾಗುವುದು ಇದೇ ಮೈದಾನದಲ್ಲಿ. ಮೈದಾನ ಇದೆ ಎಂಬುದನ್ನು ಬಿಟ್ಟರೆ ಬೇರೆ ಯಾವುದೇ ಮೂಲಸೌಕರ್ಯಗಳು ಇಲ್ಲ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವ್ಯಾಪ್ತಿಯಲ್ಲಿ ಮೈದಾನವಿದೆ. ಇಲ್ಲಿ ಹತ್ತಾರು ಕ್ರೀಡಾಕೂಟಗಳು ಆಯೋಜನೆಗೊಳ್ಳುತ್ತವೆ. ಆದರೆ, ಬರುವ ಕ್ರೀಡಾಪಟುಗಳಿಗೆ, ಕ್ರೀಡಾಭಿಮಾನಿಗಳಿಗೆ ಪೂರಕ ವ್ಯವಸ್ಥೆ ಇಲ್ಲದಾಗಿದೆ. ಮೂಲಸೌಕರ್ಯಗಳಾದ ಶೌಚಗೃಹ ಮತ್ತು ಗ್ಯಾಲರಿ ನಿರ್ಮಾಣ ಆಗಬೇಕಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಒಳಾಂಗಣ, ಹೊರಾಂಗಣ ಕ್ರೀಡೆಗೆ ವ್ಯವಸ್ಥೆ ಇದ್ದರೂ ಗೋಣಿಕೊಪ್ಪದಿಂದ ಪ್ರತಿನಿತ್ಯ ಅಲ್ಲಿಗೆ ಹೋಗುವುದು ಕಷ್ಟಸಾಧ್ಯ. ಹಾಗಾಗಿ ಗೋಣಿಕೊಪ್ಪದಲ್ಲಿಯೇ ಒಂದು ಸುಸಜ್ಜಿತ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಾಣವಾಗಬೇಕು ಎಂಬುದು ಇಲ್ಲಿನ ಕ್ರೀಡಾ ಪ್ರಿಯರ ಆಗ್ರಹ.

ಇತ್ತೀಚೆಗೆ ಈ ಭಾಗಕ್ಕೆ ಭೇಟಿ ನೀಡಿದ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಕ್ರೀಡಾಂಗಣವನ್ನು ವೀಕ್ಷಿಸಿ ಮೂಲಸೌಕರ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ. ಕ್ರೀಡಾಂಗಣಕ್ಕೆ ಸುಸಜ್ಜಿತ ಪ್ರೇಕ್ಷಕರ ಗ್ಯಾಲರಿ, ಶೌಚಗೃಹ, ಸೋಲಾರ್ ದೀಪದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಆದಷ್ಟು ಬೇಗ ಈ ಎಲ್ಲ ವ್ಯವಸ್ಥೆಗಳು ಆದರೆ ಕ್ರೀಡಾಪಟುಗಳಿಗೆ ಪ್ರಯೋಜನವಾಗಲಿದೆ.

ಗೋಣಿಕೊಪ್ಪದಲ್ಲಿ ಕ್ರೀಡಾ ಇಲಾಖೆ ಅಧೀನದ ಹೊರಾಂಗಣ ಮೈದಾನ ಮಾತ್ರ ಇದೆ. ಇಲ್ಲೆ ಸಮೀಪದಲ್ಲಿ ಗ್ರಾಪಂಗೆ ಸೇರಿದ ಜಾಗವಿದ್ದು ಅಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾದರೆ ಈ ಭಾಗದ ಕ್ರೀಡಾಪಟುಗಳಿಗೆ ಉಪಯೋಗವಾಗಲಿದೆ ಎನ್ನುತ್ತಾರೆ ಕ್ರೀಡಾಭಿಮಾನಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net