ಡಾ. ರಾಜ್ ಎಂಬ ಕಲಾ ಕಮಲ ರಾಜ ಹಂಸ

Raj namasthe
Published on

ಡಾ. ರಾಜಕುಮಾರ್ ಅವರಿಗೆ ಗುರು ರಾಘವೇಂದ್ರ ಸ್ವಾಮಿಗಳ ಕುರಿತು ಮೊದಲಿನಿಂದಲೂ ಅಪಾರ ಭಕ್ತಿ. ಜತೆಗೆ ರಾಘವೇಂದ್ರ ಸ್ವಾಮಿಗಳ ಜೀವನ ವೃತ್ತಾಂತ ಮತ್ತು ಮಹಿಮೆಯನ್ನು ಸಾರುವ ‘ಮಂತ್ರಾಲಯ ಮಹಾತ್ಮೆ’ ಎಂಬ ಚಿತ್ರದಲ್ಲಿ ಅವರು ನಟಿಸಿದ್ದರು. ಈ ಚಿತ್ರವು ಗುರುರಾಯರ 300ನೇ ಆರಾಧನಾ ಮಹೋತ್ಸವದ ದಿನವೇ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಈ ಚಿತ್ರಕ್ಕೆ ಅವರು ಆಯ್ಕೆಯಾಗಿದ್ದರ ಹಿಂದು ಒಂದು ಸ್ವಾರಸ್ಯಕರ ಘಟನೆಯಿದೆ.

ರಾಜಗುರು ರಾಜಾಚಾರ್ಯರ ‘ಶ್ರೀ ರಾಘವೇಂದ್ರ ವಿಜಯ’ ಗ್ರಂಥವನ್ನು ಆಧರಿಸಿ, ‘ಮಂತ್ರಾಲಯ ಮಹಾತ್ಮೆ’ ಚಿತ್ರವನ್ನು ತೆರೆಗೆ ತರುವುದಕ್ಕೆ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ತಯಾರಿ ನಡೆಸಿದ್ದರಂತೆ. ಗುರು ರಾಘವೇಂದ್ರರ ಪಾತ್ರದಲ್ಲಿ ಡಾ. ರಾಜಕುಮಾರ್ ಅಭಿನಯಿಸಬೇಕು ಎಂದು ತೀರ್ವನವಾಗಿ, ಅಧಿಕೃತವಾಗಿ ಘೋಷಿಸಲಾಯಿತಂತೆ. ಈ ಸಂದರ್ಭದಲ್ಲಿ ಅವರ ಕಚೇರಿಗೆ ಹಲವು ಕಾಗದಗಳು ಬಂದಿವೆ. ‘ಶ್ರೇಷ್ಠ ಬ್ರಾಹ್ಮಣ ಯತಿಗಳ ಪಾತ್ರವನ್ನು ಒಬ್ಬ ಅಬ್ರಾಹ್ಮಣನಿಂದ ಮಾಡಿಸುವುದು ಸರಿಯಲ್ಲ. ಈ ಪಾತ್ರವನ್ನು ಬೇರೆಯವರಿಂದ ಮಾಡಿಸಿ’ ಎಂಬುದು ಆ ಪಾತ್ರದ ಒಕ್ಕಣೆಯಾಗಿತ್ತಂತೆ.

ಚಿತ್ರಕ್ಕೆ ಎಲ್ಲ ತಯಾರಿಗಳು ನಡೆದು, ಚಿತ್ರೀಕರಣ ಶುರು ಮಾಡಬೇಕು ಎನ್ನುವಷ್ಟರಲ್ಲಿ ಹೀಗಾಯಿತಲ್ಲ ಎಂದು ಚಿತ್ರತಂಡದವರೆಲ್ಲ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾಗ, ಡಾ. ರಾಜಕುಮಾರ್ ಅವರೇ ಒಂದು ಐಡಿಯಾ ಕೊಟ್ಟಿದ್ದಾರೆ. ದೇವರ ಮುಂದೆ ಚೀಟಿ ಹಾಕಿ, ಅದರಲ್ಲಿ ಯಾರ ಹೆಸರು ಬರುತ್ತದೋ ಅವರಿಂದಲೇ ಪಾತ್ರ ಮಾಡಿಸಿ ಎಂದು ಹೇಳಿದರಂತೆ. ಅದರಂತೆ ಆ ಕಾಲದ ಒಂದಿಷ್ಟು ನಟರ ಹೆಸರುಗಳನ್ನು ಬರೆದು ಚೀಟಿ ಎತ್ತಲಾಗಿದೆ. ಆಗ ಡಾ. ರಾಜ್ ಅವರ ಹೆಸರೇ ಬಂತಂತೆ.

ಚೀಟಿಯಲ್ಲಿ ತಮ್ಮ ಹೆಸರು ಬಂದರೂ, ಅವರಿಗೊಂದು ಸಂಶಯ. ಈಗಾಗಲೇ ಚಿತ್ರದ ಬಗ್ಗೆ ಅಧಿಕೃತ ಘೋಷಣೆಯಾಗಿರುವುದರಿಂದ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ, ಎಲ್ಲ ಚೀಟಿಗಳಲ್ಲೂ ತಮ್ಮದೇ ಹೆಸರನ್ನು ಬರೆಯಲಾಗಿದೆಯಾ ಎಂಬ ಸಂಶಯ ಅವರನ್ನು ಕಾಡಿತ್ತಂತೆ. ಕೊನೆಗೆ ಭಗವಾನ್ ಅವರು, ಎಲ್ಲ ಚೀಟಿಗಳನ್ನು ತೋರಿಸಿದಾಗ ಡಾ. ರಾಜ್ ಅವರಿಗೆ ನಂಬಿಕೆ ಬರುವುದರ ಜತೆಗೆ ತಕ್ಷಣವೇ ಒಂದು ಪ್ರತಿಜ್ಞೆ ಕೈಗೊಂಡರಂತೆ. ಇವತ್ತಿನಿಂದ ಚಿತ್ರ 50 ದಿನ ಪ್ರದರ್ಶನ ಕಾಣುವವರೆಗೂ ಚಪ್ಪಲಿ ಹಾಕುವುದಿಲ್ಲ ಮತ್ತು ಮಾಂಸಾಹಾರ ತಿನ್ನುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಡಾ. ರಾಜ್, ಅದರಂತೆ ಚಿತ್ರ 50 ದಿನ ಓಡುವವರೆಗೂ ಚಪ್ಪಲಿಯನ್ನೂ ಹಾಕಲಿಲ್ಲ, ಮಾಂಸಾಹರಾವನ್ನೂ ಮುಟ್ಟಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ ಭಗವಾನ್.

ಈ ಚಿತ್ರದ ನಂತರ, ಡಾ. ರಾಜಕುಮಾರ್ ಅವರು ರಾಯರ ಪರಮಭಕ್ತರಾಗಿದಷ್ಟೇ ಅಲ್ಲ, ಆ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಹುಟ್ಟಿದ ಎರಡನೇ ಮಗನಿಗೆ ಅವರು ರಾಘವೇಂದ್ರ ಎಂದೇ ಹೆಸರಿಟ್ಟರು. ಅಲ್ಲದೇ, ವರ್ಷಕ್ಕೊಮ್ಮೆ ಪರಿವಾರ ಸಹಿತ ಮಂತ್ರಾಲಯಕ್ಕೆ ಹೋಗಿ ವಿಶೇಷ ಸೇವೆ ಸಲ್ಲಿಸುತ್ತಿದ್ದ ಅವರು, ಅಲ್ಲಿ ಒಂದು ರಾತ್ರಿ ತಂಗಿದ್ದು, ಹಲವು ಭಕ್ತಿ ಗೀತೆಗಳನ್ನೂ ಹಾಡುತ್ತಿದ್ದರಂತೆ.

ಅದಲ್ಲದೆ, ಮಂತ್ರಾಲಯ ಮತ್ತು ಗುರುರಾಯರ ಕುರಿತಾಗಿ ‘ಹಾಡು ಕೋಗಿಲೆ ನಲಿದಾಡು ಕೋಗಿಲೆ ...’, ‘ಮಂತ್ರಾಲಯಕೆ ಹೋಗೋಣ ...’, ‘ಹಾಲಲ್ಲಾದರೂ ಹಾಕು ...’ ಮುಂತಾದ ಹಾಡುಗಳಿರುವ ಕ್ಯಾಸೆಟ್​ಗೆಧ್ವನಿಯಾಗಿದ್ದಾರೆ. ಪುನೀತ್ ರಾಜಕುಮಾರ್ ಬಾಲನಟನಾಗಿದ್ದ ‘ಭಾಗ್ಯವಂತ’ ಚಿತ್ರವು ಮಂತ್ರಾಲಯದಲ್ಲೇ ಚಿತ್ರೀಕರಣವಾಗಿತ್ತು. ಈ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವುದರ ಜತೆಗೆ, ‘ವಾರ ಬಂತಮ್ಮ ಗುರುವಾರ ಬಂತಮ್ಮ ...’ ಎಂಬ ಹಾಡನ್ನೂ ಹಾಡಿದ್ದರು ರಾಜಕುಮಾರ್.

‘ಮಂತ್ರಾಲಯ ಮಹಾತ್ಮೆ’ ಚಿತ್ರದ ನಂತರ ತಾವು ಅಭಿನಯಿಸಿದ ಪ್ರತಿಯೊಂದು ಸಿನಿಮಾ ಬಿಡುಗಡೆಗೂ ಮುನ್ನ ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ರಾಯರ ಶಾಖಾ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು ಎಂದು ನೆನಪಿಸಿಕೊಳ್ಳುವ ಭಗವಾನ್, ‘ಬೆಳಿಗ್ಗೆ ಅಪಾರ ಭಕ್ತರು ಇರುವ ಕಾರಣ, ರಾತ್ರಿಯ ಹೊತ್ತು ಅಥವಾ ನಸುಕಿನ ಜಾವದಲ್ಲಿ ಭೇಟಿ ನೀಡಿ ಪೂಜೆ ಸಲ್ಲಿಸುವುದರ ಜತೆಗೆ ಧ್ಯಾನ ಮಾಡುವ ಪರಿಪಾಠ ಇಟ್ಟುಕೊಂಡಿದ್ದರು’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net