

ಹುಬ್ಬಳ್ಳಿ: ಹೆಣ್ಣು ಮಕ್ಕಳಿಗಾಗಿಯೇ ಲಲಿತಾ ಪುರವಣಿ, ರಂಗವಲ್ಲಿ ಸಂಸ್ಕೃತಿಯ ಅನಾವರಣ ಕಾಲಂ ಸೇರಿ ಹಲವು ವಿಶೇಷತೆಗಳ ಮೂಲಕ ಅಚ್ಚುಮೆಚ್ಚಿನ ಪತ್ರಿಕೆಯಾಗಿ ಹೊರಹೊಮ್ಮಿರುವ ಕನ್ನಡದ ನಂಬರ್ ಒನ್ ಪತ್ರಿಕೆ ವಿಜಯವಾಣಿಯು ಇದೀಗ ಮಹಿಳೆಯರ ಜ್ಞಾನ ವೃದ್ಧಿಗೆ ಇನ್ನಷ್ಟು ನೆರವಾಗಿದೆ.
ಮಹಿಳಾ ಮಂಡಳಗಳಿಗೆ ವಿಜಯವಾಣಿ ಮುದ್ರಣ ಘಟಕ ವೀಕ್ಷಣೆಗೆ ಅವಕಾಶ ನೀಡುವ ಮೂಲಕ ಹೊಸ ಲೋಕವೊಂದನ್ನು ಪರಿಚಯ ಮಾಡಿಕೊಡುತ್ತಿದೆ.
ಇಲ್ಲಿಯ ದೇಶಪಾಂಡೆನಗರದ ನೇತ್ರಾವತಿ ಮಹಿಳಾ ಮಂಡಳದ ಸದಸ್ಯರು ಶುಕ್ರವಾರ ಹುಬ್ಬಳ್ಳಿಯ ವರೂರಿನಲ್ಲಿರುವ ವಿಜಯವಾಣಿ ಮುದ್ರಣ ಘಟಕಕ್ಕೆ ಭೇಟಿ ನೀಡಿ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡರು.
ಮಹಿಳೆಯರ ಸಂಘಟನೆ ಮೂಲಕ ಸಶಕ್ತಿಕರಣಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಮಹಿಳಾ ಮಂಡಳದವರು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಮುದ್ರಣ ಕಾರ್ಯವನ್ನು ವೀಕ್ಷಿಸಿ ಹೊಸ ಅನುಭವ ಪಡೆದರು.
ಪತ್ರಿಕೆಯ ಪ್ರಿಂಟಿಂಗ್ ನಲ್ಲಿ ಆಗಿರುವ ಬದಲಾವಣೆಗಳು, ಆಧುನಿಕ ಸಲಕರಣೆಗಳನ್ನು ನೋಡಿ ಅಚ್ಚರಿ ಪಟ್ಟರು. ಅತ್ಯಂತ ವೇಗವಾಗಿ ಪತ್ರಿಕೆ ಮುದ್ರಣವಾಗಿ ಕಡಿಮೆ ಅವಧಿಯಲ್ಲಿ ಹೆಚ್ಚು ಮಾಹಿತಿಪೂರ್ಣವಾಗಿ ಓದುಗರ ಕೈಗೆ ಹೇಗೆ ಸಿಗುತ್ತದೆ ಎಂಬುದನ್ನು ಕೇಳಿ ಮಾಹಿತಿ ಪಡೆದುಕೊಂಡರು.
ವಿಜಯವಾಣಿ ಮುದ್ರಣ ಘಟಕದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಪತ್ರಿಕೆ ಮುದ್ರಣ ಕಾರ್ಯ ನಡೆಯುತ್ತದೆ. ದಶಕಗಳ ಹಿಂದೆ ಇದ್ದ ವ್ಯವಸ್ಥೆ ಈಗಿಲ್ಲ. ಇಷ್ಟೊಂದು ಬೃಹತ್ ಪ್ರಮಾಣದ ವ್ಯವಸ್ಥೆ ನೋಡಿದ್ದು ಇದೇ ಮೊದಲು. ಕಡಿಮೆ ಹಣದಲ್ಲಿ ಪತ್ರಿಕೆ ತೆಗೆದುಕೊಳ್ಳುತ್ತೇವೆ. ಆದರೆ, ಅದರ ಹಿಂದೆ ಎಷ್ಟೊಂದು ಶ್ರಮ ಇದೆ, ಖರ್ಚು ಇದೆ ಎಂಬುದು ನೋಡಿದಾಗಲೇ ಗೊತ್ತಾಯಿತು.
ಇಂತಹ ಪ್ರಿಂಟಿಂಗ್ ಪ್ರೆಸ್ ವೀಕ್ಷಣೆಗೆ ಅವಕಾಶ ನೀಡಿದ ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರಿಗೆ ಧನ್ಯವಾದ ತಿಳಿಸುತ್ತೇವೆ ಎಂದು ಸದಸ್ಯರಾದ ಪದ್ಮಿನಿ ಭಟ್, ಶಶಿಮಂಗಳಾ ಐತಾಳ ಹೇಳಿದರು.