

ಬೆಂಗಳೂರು: ಅತಿವೃಷ್ಟಿ, ಪ್ರವಾಹದಿಂದ ತಲ್ಲಣಿಸಿದ ರೈತರಿಗೆ ವಿತರಿಸಿದ ಬೆಳೆ ಪರಿಹಾರ ಗುಳುಂ ಆಗಿದ್ದು, ನೆರೆ ಪರಿಹಾರದಲ್ಲಿ ಅಕ್ರಮಗಳ ಸರಮಾಲೆಗಳೇ ನಡೆದಿದ್ದರೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲವೆಂಬ ಆಕ್ರೋಶ ಮೇಲ್ಮನೆಯಲ್ಲಿ ವ್ಯಕ್ತವಾಯಿತು.
ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ ಜೆಡಿಎಸ್ನ ಶ್ರೀಕಂಠೇಗೌಡ ಈ ವಿಷಯ ಪ್ರಸ್ತಾಪಿಸಿದರು. ‘ನೆರೆ’ವು ಗುಳುಂ, ನೆರವಿಗೆ ಕನ್ನ ಎಂದು ‘ವಿಜಯವಾಣಿ’ ಪತ್ರಿಕೆಯಲ್ಲಿ ವಿಸõತ ವರದಿಗಳು ಪ್ರಕಟವಾಗಿವೆ ಎಂದು ಪ್ರಕಟಿತ ವರದಿ ತುಂಡು ತೋರಿಸಿ ನೆರೆ ಅವ್ಯವಹಾರಗಳತ್ತ ಸರ್ಕಾರದ ಗಮನಸೆಳೆದರು.
ಹಾವೇರಿ ಜಿಲ್ಲೆಯಲ್ಲಿ ಪಾಸ್ವರ್ಡ್ ಕದ್ದು ಜಮೀನು, ಬೆಳೆ ನಷ್ಟದ ಕೋಟ್ಯಂತರ ರೂ. ಪರಿಹಾರ ಕಬಳಿಸಿದ್ದು, ಅನ್ಯಾಯ ಗಮನಕ್ಕೆ ಬಂದಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ವತಃ ಒಪ್ಪಿಕೊಂಡಿದ್ದರೂ ಈವರೆಗೆ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಶ್ರೀಕಂಠೇಗೌಡ ಕಿಡಿಕಾರಿದರು.
ಹಾವೇರಿ ಜಿಲ್ಲೆ ಮಾತ್ರವಲ್ಲ ಬೆಳಗಾವಿ, ಬಾಗಲಕೋಟೆ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಇದೇ ರೀತಿ ನೆರೆ ಪರಿಹಾರದಲ್ಲಿ ಲೋಪಗಳಾಗಿದ್ದು, ನೂರಾರು ಕೋಟಿ ರೂ. ದುರ್ಬಳಕೆಯಾಗಿದೆ. ಜತೆಗೆ ನ್ಯಾಯಸಮ್ಮತ ಪರಿಹಾರ ಸಿಕ್ಕಿಲ್ಲವೆಂದು ಕೊಡಗು ಜಿಲ್ಲೆ ಸಂತ್ರಸ್ತರು ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
‘ನೆರೆ’ವು ಗುಳುಂ, ‘ನೆರೆ’ವು ಅವ್ಯಾಹತ ಶೀರ್ಷಿಕೆಗಳಲ್ಲಿ ‘ವಿಜಯವಾಣಿ’ ಫೆ.8ರಿಂದ ಸರಣಿ ವರದಿ ಪ್ರಕಟಿಸಿ ಹಾವೇರಿ ಜಿಲ್ಲೆಯಲ್ಲಿನ ನೆರೆ ಪರಿಹಾರದ ಅಕ್ರಮಗಳ ಮೇಲೆ ಬೆಳಕು ಚೆಲ್ಲಿದ್ದು, ಸರ್ಕಾರ ತನಿಖೆಗೂ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.