ಬೆಂಗಳೂರು ಮಿಷನ್​-2022 ಸಾಕಾರಕ್ಕೆ ವಿಜಯವಾಣಿ ಅಭಿಯಾನ: ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಸಿಎಂ ಬಿಎಸ್​ವೈ

Nava Bengaluru Feature new
Published on

ಬೆಂಗಳೂರು: ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ, "ನವ ಬೆಂಗಳೂರು" ಹೆಸರಿನಲ್ಲಿ ಹೊರತಂದಿರುವ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಶುಕ್ರವಾರ ಬಿಡುಗಡೆ ಮಾಡಿದರು.

ಬೆಂಗಳೂರು ಅಭಿವೃದ್ಧಿಗೆ ಸಿಎಂ ಬಿಎಸ್​ವೈ ನೇತೃತ್ವದ ರಾಜ್ಯ ಸರ್ಕಾರ "ಬೆಂಗಳೂರು ಮಿಷನ್​-2022" ಯೋಜೆನೆಯನ್ನು ಹಮ್ಮಿಕೊಂಡಿದ್ದು, ಯೋಜನೆಯ ಸಾಕಾರಕ್ಕೆ "ಭವಿಷ್ಯದ ಭವ್ಯನಗರ" ಹೆಸರಿನಲ್ಲಿ ವಿಜಯವಾಣಿ ಅಭಿಯಾನ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ವಿಜಯವಾಣಿ ಪತ್ರಿಕೆ ಇಂದು 24 ಪುಟಗಳ ಪುರವಣಿಯನ್ನು ಹೊರತಂದಿದ್ದು, ಇದರ ಸಂಚಿಕೆಯನ್ನು ಸಿಎಂ ಬಿಎಸ್​ವೈ ತಮ್ಮ ಅಧಿಕೃತ ಕಾವೇರಿ ನಿವಾಸದಲ್ಲಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಬಿಎಸ್​ವೈ, ವಿಜಯವಾಣಿ ಪತ್ರಿಕೆಯವರು ಭವಿಷ್ಯದ ಭವ್ಯನಗರ ಅಂತ ವಿಶೇಷ ಸಂಚಿಕೆ ಹೊರ ತಂದಿದ್ದಾರೆ. ನಾಡಿನ ಜನರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ವಿಶೇಷ ಸಂಚಿಕೆಯನ್ನು ನಾನಿಂದು ಲೋಕಾರ್ಪಣೆ ಮಾಡಿದ್ದೇನೆ. ಬೆಂಗಳೂರು ಅಭಿವೃದ್ಧಿಗೆ ನನ್ನದೇ ಆದ ಕಲ್ಪನೆ ಇದೆ ಎಂದರು.

ಈಗಾಗಲೇ ನಮ್ಮ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದೇವೆ. ಒಂದೂವರೆ ವರ್ಷದಲ್ಲಿ ಎಲ್ಲವೂ ಪೂರ್ಣಗೊಳುತ್ತವೆ. ಬೆಂಗಳೂರು ಚಿತ್ರಣ ಸಂಪೂರ್ಣ ಬದಲಾವಣೆ ಆಗಬೇಕು. ಬೆಂಗಳೂರು ಮೊದಲಿನಂತೆ ಹಸಿರುಮಯ ಆಗಬೇಕು. ಈ ಉದ್ದೇಶ ನಮ್ಮದೆಂದು ಹೇಳಿದರು.

ಪ್ರಪಂಚ ಮತ್ತು ದೇಶದ ನಾನಾ ಭಾಗಗಳಿಂದ ಜನರು ಬೆಂಗಳೂರು ನಗರಕ್ಕೆ ಬರುತ್ತಾರೆ. ಆ ಹಿನ್ನೆಲೆಯಲ್ಲಿ ವಿಜಯವಾಣಿ ಅವರು ಈ ಲೇಖನ ಪ್ರಕಟಿಸಿರುವುದು ಇನ್ನೂ ಹೆಚ್ಚಿನ ಶಕ್ತಿಯನ್ನು ನಮಗೆ ಕೊಟ್ಟಂತೆ ಆಗಿದೆ. ಈ ಸಂದರ್ಭದಲ್ಲಿ ವಿಜಯವಾಣಿ ಸಂಸ್ಥೆಗೆ ಹೃತಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆಂದರು.

ವಿಶೇಷ ಸಂಚಿಕೆ ಕಾರ್ಯಕ್ರಮದಲ್ಲಿ ವಿಜಯವಾಣಿ ಸಂಪಾದಕರಾದ ಕೆ.ಎನ್​.ಚನ್ನೇಗೌಡ, ಡೆಪ್ಯುಟಿ ಜನರಲ್ ಮ್ಯಾನೇಜರ್ ಲಿಂಗಯ್ಯ ಕಾಡದೇವರ ಮಠ, ಸಹಾಯಕ ಸಂಪಾದಕರಾದ ರುದ್ರಣ್ಣ ಹರ್ತಿಕೋಟೆ, ಹಿರಿಯ ವಿಶೇಷ ವರದಿಗಾರ ಶಿವನಾಂದ ತಗಡೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net