ವಿಜಯವಾಣಿ ಸಂಗೀತ ಸಂಜೆ,   ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಆಯೋಜನೆ,  ದಿಗ್ಗಜರ ಗಾಯನ, ವಾದನ ಕೇಳಲು ಪ್ರೇಕ್ಷಕರ ಕಾತರ

IMG_20241129_210130_915.jpg
Published on

ಹುಬ್ಬಳ್ಳಿ: ಸಂಗೀತ ಪ್ರಿಯರು ಕಾತರದಿಂದ ಕಾಯುತ್ತಿರುವ ವಿಜಯವಾಣಿ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.

ಕನ್ನಡದ ನಂಬರ್ ಒನ್ ಪತ್ರಿಕೆ ವಿಜಯವಾಣಿ ವತಿಯಿಂದ ಹಾಗೂ ವಿವಿಧ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ನ. 30ರಂದು ಸಂಜೆ 5ಕ್ಕೆ ಏರ್ಪಡಿಸಿರುವ ಸಂಗೀತ ಸಂಜೆ, ಸಿತಾರ್ ಜುಗಲ್ ಬಂದಿ ಹಾಗೂ ಅಭಂಗವಾಣಿ ಕಾರ್ಯಕ್ರಮಕ್ಕೆ ಭರ್ಜರಿ ವೇದಿಕೆ ಸಜ್ಜುಗೊಂಡಿದೆ.

ಪ್ರೇಕ್ಷಕರು ಅತ್ಯಂತ ಆಸಕ್ತಿಯಿಂದ ಈ ಕಾರ್ಯಕ್ರಮಕ್ಕಾಗಿ ಆಗಮಿಸುತ್ತಿದ್ದು, ಸಂಗೀತ ದಿಗ್ಗಜರ ಸಂಗೀತ ಕಚೇರಿಗಳಿಗೆ ಕಿವಿಯಾಗಲಿದ್ದಾರೆ. ಕಲೆ, ಸಂಗೀತಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಹುಬ್ಬಳ್ಳಿ-  ಧಾರವಾಡದಲ್ಲಿ ಸಂಗೀತ ಕಚೇರಿಗಳು ಮಹತ್ವ ಪಡೆದಿವೆ.

ಅದರಲ್ಲೂ ಹಿಂದುಸ್ತಾನಿ ಸಂಗೀತವು ಪ್ರೇಕ್ಷಕ ವರ್ಗವನ್ನು ಕೈಬೀಸಿ ಕರೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಕಾರ್ಯಕ್ರಮಕ್ಕೆ ಆಗಮಿಸಲು ಸಜ್ಜಾಗಿದ್ದಾರೆ.ಕನ್ನಡದ ನಂಬರ್ ಒನ್ ಪತ್ರಿಕೆ ವಿಜಯವಾಣಿಯು ದಶಕದಿಂದಲೂ ಸಂಗೀತ ಕಾರ್ಯಕ್ರಮಗಳಿಗೆ ತನ್ನದೇ ಆದ ಪ್ರೋತ್ಸಾಹ ನೀಡುತ್ತ ಬಂದಿದೆ. ಹಿಂದುಸ್ತಾನಿ ಸಂಗೀತದ ಬಗ್ಗೆ ಅತೀವ ಆಸಕ್ತಿ ಹೊಂದಿರುವ ವಿವಿಧ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಖ್ಯಾತ ಸಂಗೀತಗಾರರ ಸಿತಾರ್ ಜುಗಲಬಂದಿ, ಅಭಂಗವಾಣಿ ಏರ್ಪಡಿಸಲಾಗಿದೆ.

ಹಿಂದುಸ್ತಾನಿ ಸಂಗೀತದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಗಾಯಕ ಪಂ. ಜಯತೀರ್ಥ ಮೇವುಂಡಿ, ಸಿತಾರ್ ವಾದನದಲ್ಲಿ ಹಿರಿಮೆ ಮೆರೆದಿರುವ ಉಸ್ತಾದ ರಫೀಕ್ ಖಾನ್, ಅಂಕುಶ ನಾಯಕ ಅವರ ಸಂಗೀತ ಕಚೇರಿಗಳು ಜನಮನ ಸೂರೆಗೊಳ್ಳಲಿವೆ.

ರೀದಂ ಇನ್ಸ್ಟುಮೆಂಟ್ ಸೂರ್ಯಕಾಂತ ಗೋಪಾಲ ಸುರ್ವೆ, ಹಾಮೋರ್ನಿಯಂ ನರೇಂದ್ರ ನಾಯಕ, ತಬಲಾ ವಾದಕರಾದ ಹೇಮಂತ ಜೋಶಿ, ರಾಜೇಶ ಭಾಗವತ್ ಅವರು ಸಂಗೀತ ಕಚೇರಿಗೆ ಸಾಥ್ ನೀಡಲಿದ್ದಾರೆ.

ಶ್ರೀ ದುರ್ಗಾ ಡೆವಲಪರ್ಸ್ ಹಾಗೂ ಪ್ರಮೋಟರ್ಸ ಮುಖ್ಯ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ಕೊರವಿ ಗ್ರೀನ್ ಸಿಟಿ, ಪಾಟೀಲ ಹಿಯರಿಂಗ್, ವೆಟಿರ್ಗೋ ಹಾಗೂ ಸ್ಪೀಚ್ ಸೆಂಟರ್, ಎಚ್ಸಿಜಿ ಸುಚಿರಾಯು ಹಾಸ್ಪಿಟಲ್, ಕ್ಯಾರಕೊಪ್ಪದ ಶ್ರೀ ಸನ್ನಿಧಿ (ದತ್ತ ತಾಯಿ) ಆಶ್ರಮ, ಸಾಯಿರಾಮ ಡೆವಲಪರ್ಸ್ ಮತ್ತು ಬಿಲ್ಡರ್ಸನವರ ಸಹ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net