ಜನಪರ ಘೋಷಣೆಗಳ ನಿರೀಕ್ಷೆಯ ಬಜೆಟ್

BasavarajBommai
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ

ವಿಧಾನಸಭೆ ಚುನಾವಣೆ ಸನಿಹದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸುತ್ತಿರುವ ಮುಂಗಡ ಪತ್ರದಲ್ಲಿ ಸಹಜವಾಗಿ ಜನಪರ ಯೋಜನೆಗಳ ಘೋಷಣೆಯ ನಿರೀಕ್ಷೆ ಇದೆ. ಫೆ.೧೭ ರಂದು ಕಳೆದ ೫ ವರ್ಷದ ಆಡಳಿತಾವಧಿಯ ಕೊನೆ ಮುಂಗಡ ಪತ್ರ ಮಂಡನೆಯಾಗಲಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಂಡಿಸುತ್ತಿದ್ದ ಮುಂಗಡ ಪತ್ರದಲ್ಲಿ ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಿಸುತ್ತಿದ್ದರು. ಈ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮೂಲಕ ಒಂದಿಷ್ಟು ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಇಂದಿಗೂ ಕೊಡಗಿನ ಜನತೆ ಒಳ್ಳೆಯ ರಸ್ತೆಗಾಗಿ ವಿಶೇಷ ಅನುದಾನದ ನಿರೀಕ್ಷೆಯಲ್ಲಿದ್ದಾರೆ.

ಕೊಡಗಿನ ಜನತೆ ಪ್ರಮುಖ ಬೇಡಿಕೆಗಳ ಪೈಕಿ ರಸ್ತೆ ಅಭಿವೃದ್ಧಿ ಮುಖ್ಯ. ಧಾರಾಕಾರವಾಗಿ ಮಳೆ ಸುರಿಯುವುದರಿಂದ ರಸ್ತೆಗಳು ದುಸ್ಥಿತಿಗೆ ತಲುಪುತ್ತದೆ. ಉತ್ತಮ ಗುಣಮಟ್ಟದ ಕಾಂಕ್ರಿಟ್ ರಸ್ತೆ ಇದಕ್ಕೆ ಶಾಶ್ವತ ಪರಿಹಾರ. ಅದಕ್ಕಾಗಿ ದೊಡ್ಡ ಮೊತ್ತದ ಅನುದಾನವನ್ನು ಮುಂಗಡ ಪತ್ರದಲ್ಲಿ ನಿರೀಕ್ಷಿಸಲಾಗಿದೆ.

ಕಾಡಾನೆ, ಹುಲಿ, ಹಂದಿ ಸೇರಿದ್ದಂತೆ ವನ್ಯಪ್ರಾಣಿಗಳ ಉಪಟಳದಿಂದ ಅರಣ್ಯದಂಚಿನ ಗ್ರಾಮಸ್ಥರು ತುಂಬಾ ಸಂಕಷ್ಟ ಅನುಭವಿಸುತ್ತಿ
ದ್ದಾರೆ. ಫಸಲು ನಷ್ಟದೊಂದಿಗೆ ಜೀವ ಹಾನಿಯೂ ಸಂಭವಿಸುತ್ತಿದೆ. ವನ್ಯಪ್ರಾಣಿಗಳ ಹಾವಳಿಯಿಂದ ಶಾಶ್ವತ ಪರಿಹಾರಕ್ಕಾಗಿ ಕೊಡಗಿನ ಜನತೆ ವಿಶೇಷ ಯೋಜನೆ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಹಲವು ವರ್ಷದಿಂದ ಕೊಡಗಿನಲ್ಲಿ ಪ್ರವಾಸೋದ್ಯಮ ಕ್ಷೇತ್ರ ಗಮನ ಸೆಳೆದಿದೆ. ಸರ್ಕಾರಕ್ಕಿಂತ ಖಾಸಗಿಯಾಗಿ ಪ್ರವಾಸೋದ್ಯಮ ಪ್ರಗತಿ ಕಂಡಿದೆ. ಪ್ರವಾಸಿ ತಾಣಗಳಲ್ಲಿ ಅಗತ್ಯ ಮೂಲಭೂತ ಸವಲತ್ತು ಒದಗಿಸುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಮುಂಗಡ ಪತ್ರದ ಮೇಲೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ರಾಜ್ಯ ಮುಂಗಡ ಪತ್ರದ ಮೇಲೆ ಕೊಡಗಿನ ಜನತೆ ಇಟ್ಟುಕೊಂಡಿರುವ ನಿರೀಕ್ಷೆಗೆ ಸಂಬಂಧಿಸಿದ್ದಂತೆ ಲೌಡ್ ಸ್ಪೀಕರ್‌ಗೆ ಜನಾಭಿಪ್ರಾಯ ಸಂಗ್ರಹಿಸಲಾಗಿದೆ.

**
ಕೊಡಗಿನ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು. ಕೃಷಿ, ಕೈಗಾರಿಕೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಬುಡಕಟ್ಟು ಜನಾಂಗ ಹೀಗೇ ಹಲವಾರು ಕಾರ್ಯಕ್ಕೆ ಒತ್ತು ನೀಡುವ ಬಜೆಟ್ ಮಂಡನೆಯಾಗಲಿ. ಕವಿ, ಸಾಹಿತಿಗಳಿಗೆ ಅವರ ಅರ್ಹತೆಗೆ ತಕ್ಕ ಗೌರವಧನ ನಿಗದಿ ಪಡಿಸಬೇಕಿದೆ. ಸಾಹಿತಿಗಳು ಬರೆದದ್ದು ಪ್ರಕಟಿಸಲು ಅರ್ಥಿಕ ಸಹಾಯವಾಗುತ್ತದೆ. ಸಾಹಿತಿಗಳಿಗೆ ಗೌರವ ಬಿಟ್ಟರೆ ಇನ್ನೇನು ಸಿಗುತ್ತಿಲ್ಲ. ಜಲ ಕಾಳಪ್ಪ, ಸಾಹಿತಿ, ಸೋಮವಾರಪೇಟೆ.

**
ಚುನಾವಣಾ ಬಜೆಟ್ ಆಗಿರುವುದರಿಂದ ಬಹಳಷ್ಟು ಭರವಸೆ ಮೂಡಿಸಿದೆ. ಜನಸಾಮಾನ್ಯರಿಗೆ ಹೊರೆಯಾಗದ ಬಜೆಟ್ ಆದರೆ ಒಳ್ಳೆಯದು. ಬಜೆಟ್ ಘೋಷಣೆ ಮಾಡಿ ಕಾರ್ಯಗತಗೊಳ್ಳದಿದ್ದರೆ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಚುನಾವಣೆ ವರ್ಷ ವಾಗಿರುವುದರಿಂದ ಬಜೆಟ್ನಲ್ಲಿ ಘೋಷಣೆ ಹೆಚ್ಚಿರುತ್ತದೆ. ಅದನ್ನು ಚುನಾವಣೆ ಬರುವ ಮುನ್ನ ಕಾರ್ಯಾಗತಗೊಳಿಸಬೇಕು. ರಸ್ತೆ, ಸರ್ಕಾರಿ ಶಾಲಾ- ಕಾಲೇಜು ಅಭಿವೃದ್ಧಿ, ಖಾಲಿ ಇರುವ ಸರ್ಕಾರಿ ಹುದ್ದೆ ಭರ್ತಿ ಮಾಡಬೇಕಿದೆ. ಮೋಹನ್ ಕುಮಾರ್, ಉಪನ್ಯಾಸಕರು, ಭಾರತಿ ಪ್ರಥಮ ದರ್ಜೆ ಕಾಲೇಜು, ಶನಿವಾರಸಂತೆ.
**
ಬಜೆಟ್ನಲ್ಲಿ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಬೇಕು. ಶ್ರೀಸಾಮಾನ್ಯನ ಬೆಲೆ ಏರಿಕೆ ನಿಯಂತ್ರಣ ಮಾಡಬೇಕು. ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯ ಉಚಿತವಾಗಿ ಬಡವರಿಗೆ ಸಿಗುವಂತಾಗಬೇಕು. ಮೂಲಭೂತ ಸೌಕರ್ಯಗಳು ಗ್ರಾಮೀಣ ಪ್ರದೇಶಗಳಲ್ಲಿ ಸಿಗು ವಂತಾಗಬೇಕು. ರಸ್ತೆ ಮತ್ತು ರೈಲ್ವೆ ಇಲಾಖೆಯಲ್ಲಿ ಅಭಿವೃದ್ಧಿ ಹೊಂದಬೇಕು. ಚಾಮೇರ ಪವನ್ ದೇವಯ್ಯ, ಉದ್ಯಮಿ, ನಂದಿಗುಂದ.

**
ಕೊಡಗಿನ ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಹೊರ ರಾಜ್ಯ, ದೇಶ ಅವಲಂಬಿತರಾಗಿರುತ್ತದೆ. ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿ ಪಡಿಸಿದರೆ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ವ್ಯಾಸಂಗ ಮಾಡಬಹುದು. ಜಿಲ್ಲೆಯ ಯುವ ಜನತೆ ಕೆಲಸ ಅರಸಿ, ಬೇರೆ ಊರುಗಳಿಗೆ ಹೋಗುವ ಪರಿಸ್ಥಿತಿ ತಪ್ಪಿಸಲು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡಬೇಕು. ಜಯಂತಿ ರೈ, ನ್ಯಾಯಾಲಯ ಉದ್ಯೋಗಿ, ಮಡಿಕೇರಿ.

**
ಕೊಡಗು ವನ್ಯಜೀವಿ ಸಂಪತ್ತು, ಜೀವ ವೈವಿಧ್ಯ ಕೇಂದ್ರವಾಗಿದೆ. ಮಾನವ- ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಬೇಕು. ಮೀಸಲು ಅರಣ್ಯ ಪ್ರದೇಶದಲ್ಲಿ ಆಗಿರುವ ವನ್ಯಸಂಪತ್ತುಗಳ ಮಾರಾಟ ಹೋಮ ತಡೆಗಟ್ಟಲು ಕ್ರಮ ತೆಗೆದುಕೊಳ್ಳಬೇಕು. ಕಾಡು ಪ್ರಾಣಿಗಳಿಗೆ ಬೇಸಿಗೆಯಲ್ಲಿ ನೀರಿನ ಲಭ್ಯತೆಗೆ ಪ್ಯಾಕೇಜ್ ಘೋಷಿಸಬೇಕು. ಸೋಮೆಯಂಡ ಕೌಸಲ್ಯ, ಗೃಹಿಣಿ, ಚಂಬೆಬೆಳ್ಳೂರು.

**
ಕೊಡಗು ಜಿಲ್ಲೆ ೨೦೧೮ ರಿಂದ ನಿರಂತರವಾಗಿ ಪ್ರಕೃತಿ ವಿಕೋಪಕ್ಕೆ ಒಳಗಾಗಿದೆ. ಕೊಡಗಿನ ಕೃಷಿ ಭೂಮಿಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಗಳಿಗೆ ನೀಡುವ ರೀತಿಯಲ್ಲಿ ವಿಶೇಷ ಅನುದಾನ ಒದಗಿಸಬೇಕು. ಕೊಡಗಿನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಕನಿಷ್ಠ ೨ ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ನೀಡಬೇಕು. ಪಾಳುಬಿದ್ದಿರುವ ಕೃಷಿ ಭೂಮಿ ಸುಸ್ಥಿತಿಗೆ ಬರುವ ಅನಿವಾರ್ಯತೆ ಇದೆ. ತೆನ್ನೀರ ಮೈನಾ, ಕಾಂಗ್ರೆಸ್ ವಕ್ತಾರರು.

**
ಕೊಡಗು ದೇಶ ಸೇವೆಗೆ, ಕ್ರೀಡಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ದೇಶ- ವಿದೇಶದಲ್ಲಿ ಪುಟ್ಟ ಜಿಲ್ಲೆ ಛಾಪು ಮೂಡಿಸಿದೆ. ಆದರೆ, ಜಿಲ್ಲೆಗೆ ತುರ್ತು ಸಂದರ್ಭ ನೆರವಾಗಲು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೊರತೆಯಿದೆ. ಜಿಲ್ಲೆಯ ಬಹುವರ್ಷಗಳ ಬೇಡಿಕೆಗೆ ಈ ಮುಂಗಡ ಪತ್ರದಲ್ಲಿ ಮನ್ನಣೆ ಸಿಗುವ ನಿರೀಕ್ಷೆಯಲ್ಲಿದ್ದೇವೆ. ಕಾಫಿ ಬೆಳೆಗಾರರು, ಪ್ರವಾಸೋದ್ಯಮ ಮತ್ತು ಕಾರ್ಮಿಕರ ಹಿತಾಸಕ್ತಿಗಾಗಿ ವಿಶೇಷ ಅನುದಾನ ಒದಗಿಸಲಿ. ಅಫ್ಸರ್ ಕೊಡ್ಲಿಪೇಟೆ, ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ.

**
ರೈತ ಪರ ಯೋಜನೆ ಜಾರಿಗೆ ತರಬೇಕು. ಆಧುನಿಕ ಶಿಕ್ಷಣ ನೀತಿಯನ್ನು ಪ್ರಾಥಮಿಕ ಹಂತದಿಂದಲೇ ಪ್ರಾರಂಭಿಸುವಂತಾಗಬೇಕು. ಕೊಡಗಿನಲ್ಲಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲು ಯೋಜನೆ ಜಾರಿಗೆ ತರುವಂತಾಗ ಬೇಕು. ಬಿ.ಎ. ಶಶಿಕಲಾ, ಉಪನ್ಯಾಸಕರು, ವಿರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜು.

**
ಕಾಡಾನೆ ಉಪಟಳ, ಲಾಭದಾಯಕವಲ್ಲ ಎಂಬ ಪ್ರಮುಖ ಕಾರಣ ಸೇರಿದ್ದಂತೆ ವಿವಿಧ ಕಾರಣಗಳಿಗಾಗಿ ಭತ್ತ ಬೆಳೆಯುತ್ತಿದ್ದ ಗದ್ದೆಗಳು ಪಾಳುಬಿದ್ದಿವೆ. ಭತ್ತದ ಗದ್ದೆ ದೊಡ್ಡ ಪ್ರಮಾಣದಲ್ಲಿ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಇದು ಕೊಡಗಿನಲ್ಲಿ ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗಿದೆ. ಭತ್ತ ಬೆಳೆಯುವಂತೆ ಮಾಡಲು ಕೊಡಗಿಗೆ ವಿಶೇಷ ಯೋಜನೆ ಘೋಷಿಸಬೇಕು. ಇಲ್ಲದಿದ್ದಲ್ಲಿ ಮತ್ತಷ್ಟು ದುಷ್ಪರಿಣಾಮ ಭವಿಷ್ಯದಲ್ಲಿ ಎದುರಿಸಬೇಕಾಗುತ್ತದೆ. ಮುಕ್ಕಾಟೀರ ಶಿವು ಮಾದಪ್ಪ, ಮಾಜಿ ಜಿಲ್ಲಾಧ್ಯಕ್ಷರು, ಕೊಡಗು ಜಿಲ್ಲಾ ಕಾಂಗ್ರೆಸ್.

**
ಪ್ರತಿವರ್ಷ ಅಕಾಲಿಕ ಮಳೆಯಿಂದ ಕಾಫಿ ಫಸಲಿಗೆ ಹಾನಿಯಾಗಿ, ನಷ್ಟವಾಗುತ್ತಿದೆ. ಕಾಫಿ ತೋಟಗಳು ರೋಗ ಪೀಡಿತವಾಗಿ ಉತ್ಪಾದನೆ ಕುಸಿಯುತ್ತಿದೆ. ಕಾಫಿ ಬೆಳೆಗಾರರ ೧೦ ಎಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕು. ಬಡ್ಡಿ, ಚಕ್ರ ಬಡ್ಡಿಯಿಂದ ಬೆಳೆಗಾರರ ವಿದ್ಯುತ್ ಬಿಲ್ ಲಕ್ಷಕ್ಕೆ ಮುಟ್ಟಿದೆ. ಬಿಲ್ ಮನ್ನಾ ಮಾಡಬೇಕು. ಈ ಬಜೆಟ್‌ನಲ್ಲಿ ಬೇಡಿಕೆ ಈಡೇರಿಸದಿದ್ದರೆ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ. ಕೆ.ಎಂ. ದಿನೇಶ್, ತಾಲೂಕು ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ.

**
ಸಣ್ಣ ಹಾಗೂ ಅತೀ ಸಣ್ಣ ಕಾಫಿ ಬೆಳೆಗಾರರ ಫಸಲು ಸಾಲ ಮನ್ನಾ ಮಾಡಿದರೆ, ಶೇ.೯೯ ರಷ್ಟು ಕಾಫಿ ಬೆಳೆಯುವ ರೈತರು ಆರ್ಥಿಕ ಸಂಕಷ್ಟದಿಂದ ಬಚವಾಗುತ್ತಾರೆ. ಈ ಬಜೆಟ್‌ನಲ್ಲೇ ಘೋಷಣೆ ಮಾಡಬೇಕು. ಭತ್ತ ಬೆಳೆಯುವ ರೈತರಿಗೆ ಎಕರೆಗೆ ೨೦ ಸಾವಿರ ರೂ. ಸಹಾಯಧನ ನೀಡಲು ಕ್ರಮ ಕೈಗೊಳ್ಳಬೇಕು. ಮೋಹನ್ ಬೋಪಣ್ಣ, ಅಧ್ಯಕ್ಷರು, ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net