ಚರ್ಚೆಗೆ ಗ್ರಾಸವಾದ ಕಾವೇರಿ ನದಿ ಉತ್ಸವ

IMG-20221023-WA0015
Published on

ಕೆ.ಎಸ್. ನಾಗೇಶ್, ಕುಶಾಲನಗರ
ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ನೇತೃತ್ವದಲ್ಲಿ ನಡೆದ ಸತತ ಪ್ರಯತ್ನದ ಫಲವಾಗಿ ಕಾವೇರಿ ನೀರಾವರಿ ನಿಗಮ ಮೂಲಕ ಆಕ್ಟೊಬರ್ ೨೧ ರಂದು ಕಾವೇರಿ ನದಿ ಉತ್ಸವ ತಲಕಾವೇರಿ, ಭಾಗಮಂಡಲ, ಕುಶಾಲನಗರದಲ್ಲಿ ಆಚರಿಸಲಾಯಿತು.

ಕಾವೇರಿ ನದಿ ಸಂರಕ್ಷಣೆ ಮಾಡುವ ಮೂಲ ಉದ್ದೇಶದೊಂದಿಗೆ ನದಿ ಉತ್ಸವ ಆಚರಿಸಲಾಯಿತು. ಆದರೆ, ನದಿ ಉತ್ಸವ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಇದರಿಂದ ನದಿ ಸಂರಕ್ಷಣೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿದೆ. ಅದರೊಂದಿಗೆ ಈ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.

ತಲಕಾವೇರಿ, ಭಾಗಮಂಡಲ, ಕುಶಾಲನಗರದಲ್ಲಿ ಆಯೋಜಿಸಿದ ನದಿ ಉತ್ಸವದಿಂದ ಕಾವೇರಿ ನದಿ ಯಾವ ರೀತಿ ಸ್ವಚ್ಛವಾಗುತ್ತಾಳೆ. ಅದರ ಪಾವಿತ್ರ್ಯತೆ ಹೇಗೆ ಜನಸಾಮಾನ್ಯರಿಗೆ ತಿಳಿಯುತ್ತೆ ಎನ್ನುವ ಪ್ರಶ್ನೆಯನ್ನು ಹಿರಿಯ ಸಾಹಿತಿ ಭಾರದ್ವಾಜ್ ಆನಂದತೀರ್ಥ ಕೇಳುತ್ತಾರೆ.ಜನರು ಉತ್ಸವದಿಂದ ಎಚ್ಚೆತ್ತುಕೊಳ್ಳುತ್ತಾರೆ ಎನ್ನುವುದೇ ಹಾಸ್ಯಾಸ್ಪದ. ಸಾರ್ವಜನಿಕರಿಗೆ ಉತ್ಸವದ ಮಾಹಿತಿ ನೀಡದೆ ಕೆಲವರನ್ನ ಸೇರಿಸಿಕೊಂಡು ಮಾಡುವುದರಿಂದ ಏನು ಪ್ರಯೋಜನವಿಲ್ಲ ಮತ್ತು ಅರ್ಥವೂ ಇಲ್ಲ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ.

ಉತ್ಸವ ಹಾಗೂ ಅರತಿ ಎತ್ತುವ ಕಾರ್ಯಕ್ರಮ ಹಾರಂಗಿ ಮತ್ತು ಕಾವೇರಿ ಸಂಗಮವಾಗುವ ಕೂಡಿಗೆ ಗ್ರಾಮದಲ್ಲಿ ಮಾಡಿದರೆ ಚೆನ್ನಾಗಿರುತ್ತೆ. ಇಂತಹ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗಿಂತ ವಿದ್ಯಾರ್ಥಿಗಳನ್ನ ಕೂರಿಸಿಕೊಂಡು ಕಾರ್ಯಕ್ರಮ ಯಶಸ್ವಿಯಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಜನಪ್ರತಿನಿಧಿಗಳು ಯಾರದ್ದೋ ಕೈಗೊಂಬೆಗಳಾಗಿ ಕುಣಿಯುವ ಬದಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದ ರಿಂದ ಆಗಿರುವ ಪ್ರಯೋಜನದ ಬಗ್ಗೆ ಅರಿತುಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಉತ್ಸವದಲ್ಲಿ ಪಾಲ್ಗೊಳ್ಳಬೇಕಾಗಿದ್ದ ಬಹುತೇಕ ಜನಪ್ರತಿನಿಧಿಗಳು ಆಗಮಿಸಲಿಲ್ಲ. ಸಂಘ- ಸಂಸ್ಥೆ ಪ್ರಮುಖರನ್ನು ಕರೆದು ಪೂರ್ವಭಾವಿ ಸಭೆ ನಡೆಸಿ, ಉಪಸಮಿತಿ ರಚಿಸಿದರು. ಜವಾಬ್ದಾರಿ ಹೊತ್ತವರಿಗೆ ಏನು ಮಾಡಬೇಕೆಂದು ಕೂಡ ತಿಳಿಸದೆ ಎಲ್ಲಾ ಕಾರ್ಯಕ್ರಮ ಈವೆಂಟ್ ಮ್ಯಾನೇಜ್ಮೆಂಟ್‌ಗೆ ವಹಿಸಿರುವ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ.

ತಲಕಾವೇರಿ, ಭಾಗಮಂಡಲ, ಕುಶಾಲನಗರದಲ್ಲಿ ಆಯೋಜಿಸಿದ್ದ ಕಾವೇರಿ ಉತ್ಸವ ಕುರಿತು ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.

**
ಇತರೆ ಹಬ್ಬ, ಉತ್ಸವ ರೀತಿ ಕಾವೇರಿಗೂ ಉತ್ಸವ ಬೇಕೆನ್ನುವ ನಮ್ಮ ಹೋರಾಟಕ್ಕೆ ೧೨ ವರ್ಷ ಕಳೆದಿದೆ. ಸರ್ಕಾರ ಪ್ರತಿ ಬಾರಿ ಉತ್ಸವವನ್ನು ಅದ್ದೂರಿಯಾಗಿ, ಸ್ಥಳೀಯ ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಡೆಸಬೇಕು. ಈ ಬಾರಿಯ ಉತ್ಸವಕ್ಕೆ ಸಮಯಾವಕಾಶ ಸಾಕಾಗಲಿಲ್ಲ. ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು ತಡವಾಯಿತ್ತು. ಮುಂಗಡ ಪತ್ರದಲ್ಲಿ ಅನುದಾನ ಘೋಷಿಸುವಂತೆ ಮಾಡಲು ಪ್ರಯತ್ನಿಸಲಾಗುವುದು. ಶಾಸಕರ ನೇತೃತ್ವದಲ್ಲಿ ಜನೋತ್ಸವ ಆಗುವ ರೀತಿ ಮಾಡಬೇಕೆನ್ನುವ ಗುರಿ ನಮ್ಮದು. ಎಂ.ಎನ್. ಚಂದ್ರಮೋಹನ್, ಸಂಚಾಲಕರು, ಕಾವೇರಿ ನದಿ ಸ್ವಚ್ಛತಾ ಆಂದೋಲನ, ಕುಶಾಲನಗರ.

**
ಕಾವೇರಿ ನದಿಗಾಗಿ ಒಂದು ಉತ್ಸವವನ್ನು ಸರ್ಕಾರಿ ಪ್ರಯೋಜಕತ್ವದಲ್ಲಿ ಮಾಡಿಸಬೇಕೆನ್ನುವ ಕನಸು ಈಡೇರಿದ ತೃಪ್ತಿ ನನಗಿದೆ. ಈ ಬಾರಿ ನಡೆದ ಉತ್ಸವದಲ್ಲಿ ಆಗಿರುವ ತಪ್ಪು ಮುಂದಿನ ಬಾರಿ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅಧಿಕಾರಿಗಳದ್ದು. ಲೆಕ್ಕಾಚಾರ ವಿಚಾರ ದಲ್ಲಿ ನಾನಿಲ್ಲ. ಸಿಎಂ ಭೇಟಿಯಾಗಿ ಉತ್ಸವ ಪ್ರತಿ ವರ್ಷ ನಡೆಯುವಂತೆ ಮಾಡುವ ಒತ್ತಡ ಹಾಕುತ್ತೇವೆ. ಪಟ್ಟಡ ರೀನಾ ಪ್ರಕಾಶ್, ಜಿಲ್ಲಾಧ್ಯಕ್ಷೆ, ಕಾವೇರಿ ನದಿ ಸ್ವಚ್ಛತಾ ಆಂದೋಲನ.

**
ಅಧಿಕಾರಿಗಳು ಮುಂಜಾಗ್ರತೆ ಇಲ್ಲದೆ ಬೇಕಾಬಿಟ್ಟಿಯಾಗಿ ಉತ್ಸವ ನಡೆಸಿದ್ದಾರೆ. ಸ್ಥಳೀಯರನ್ನು ಸೇರಿಸಿಕೊಂಡು ಕಾರ್ಯಕ್ರಮ ಮಾಡಲು ವಿಫಲರಾಗಿದ್ದಾರೆ. ೨ ದಿನ ಮುಂಚಿತವಾಗಿ ಮೈಕ್ ಪ್ರಚಾರ ಮಾಡಿದ್ದಾರೆ ಜನ ಹೆಚ್ಚು ಸೇರಿ, ಕಾವೇರಿ ನದಿ ಉತ್ಸವ ಅದ್ಧೂರಿ ಕಾರ್ಯಕ್ರಮ ವಾಗಿ ಮಾಡಬಹುದಿತ್ತು. ಎಂ.ಕೃಷ್ಣ, ಜಿಲ್ಲಾಧ್ಯಕ್ಷರು, ಕರ್ನಾಟಕ ಕಾವಲು ಪಡೆ.

**
ನದಿ ಸ್ವಚ್ಚತೆ, ಪೂಜಾ ಭಾವನೆ ಮೂಡಿಸುವ ಆಯೋಜಿಸಿದ್ದ ನದಿ ಉತ್ಸವ ಯಶಸ್ವಿಯಾಗಿದೆ. ಉತ್ಸವದ ಹೊಣೆ ಹೊತ್ತಿದ್ದ ಕಾವೇರಿ ನೀರಾವರಿ ನಿಗಮ ಸ್ಧಳೀಯರನ್ನು ಹೆಚ್ಚಾಗಿ ತೊಡಗಿಸಿಕೊಂಡು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬಹುದಿತ್ತು. ವೇದಿಕೆಗೆ ಆಗಮಿಸಬೇಕಾದ ಹಲವು ಗಣ್ಯರ ಅನುಪಸ್ಥಿತಿ ನೋಡಿದರೆ ಅವರಿಗೆ ನದಿ ಮೇಲೆ ಎಷ್ಟು ಕಾಳಜಿ ಇದೆ ಎಂದು ತೋರುತಿತ್ತು. ಮುಂದಿನ ದಿನಗಳಲ್ಲಿ ಹೀಗಾಗದಿರಲಿ. ಕೆ.ಜಿ.ಮನು, ತಾಲೂಕು ಬಿಜೆಪಿ ವಕ್ತಾರ, ಕುಶಾಲನಗರ.

**
ನದಿ ಉತ್ಸವದ ಅಗತ್ಯತೆ ಇರಲೇ ಇಲ್ಲ. ದೇಶದ ಎಲ್ಲಾ ಕಡೆ ಜಲಸಂರಕ್ಷಣೆ ಅಗತ್ಯವಿದೆ. ಇದು ನಿತ್ಯ ಜಾಗರೂಕತೆ ವಹಿಸಬೇಕಾದ ವಿಷಯ. ಕಾವೇರಿ ಕಲುಷಿತ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ೨೫ ಲಕ್ಷ ರೂ. ವೆಚ್ಚ ಮಾಡಿ ಉತ್ಸವ ಆಚರಿಸಿರುವುದರಿಂದ ಉಪಯೋಗ ವಾಗುವುದಿಲ್ಲ. ಆರತಿ ಎತ್ತಿದರೆ ಏನು ಪ್ರಯೋಜನ. ಭಾರದ್ವಾಜ್ ಅನಂದತೀರ್ಥ, ಹಿರಿಯ ಸಾಹಿತಿ, ರಾಮಸ್ವಾಮಿ ಕಣಿವೆ.

**
ಸರ್ಕಾರದಿಂದ ೨೫ ಲಕ್ಷ ರೂ. ಹಣ ಬಿಡುಗಡೆಯಾಗಿದೆ. ಅಧಿಕಾರಿಗಳು ಪೂರ್ವ ತಯಾರಿ ಇಲ್ಲದೆ ಕುಶಾಲನಗರದ ಸಾರ್ವಜನಿಕರಿಗೂ ತಿಳಿಸದೆ ಅಧಿಕಾರಿಗಳು ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಿ ಮುಗಿಸಿದ್ದಾರೆ. ನದಿ ಹಬ್ಬ ಅಂದರೆ ಇವರ ಮನೆ ಕಾರ್ಯಕ್ರಮ ಅಲ್ಲ. ಕಾವೇರಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವಾಗಬೇಕು. ನದಿ ಹಬ್ಬ ಊರ ಹಬ್ಬ ರೀತಿ ಮಾಡಬಹುದಿತ್ತು. ಮುಂದಿನ ವರ್ಷ ಸ್ಥಳೀಯರೇ ಸೇರಿ ಆಚರಿಸುವಂತಾಗಲಿ. ವೆಂಕಟೇಶ್ ಪೂಜಾರಿ, ಜಿಲ್ಲಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ.

**
ಕೇವಲ ೫ ದಿನದಲ್ಲಿ ಜಿಲ್ಲೆಯ ೩ ಕಡೆ ಕಾವೇರಿ ನದಿ ಉತ್ಸವ ಆಚರಣೆಗಾಗಿ ಸಿದ್ಧತೆ ಮಾಡಿಕೊಂಡಿದ್ದೇವೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಮಾಡಿ, ಸಂಘ ಸಂಸ್ಥೆಗಳ ಪ್ರಮುಖರನ್ನು ಸೇರಿಸಿಕೊಂಡು ಮಾಡಲು ಸ್ವಲ್ಪ ಕಷ್ಟವಾಗಿದೆ. ಕೆಲವು ತಪ್ಪು ನಡೆದಿರುವುದನ್ನು ಗಮನಿಸಿದ್ದೇವೆ. ೨೫ ಲಕ್ಷ ರೂ. ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಖರ್ಚು ವೆಚ್ಚವನ್ನು ಸದ್ಯದಲ್ಲೇ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಪುಟ್ಟಸ್ವಾಮಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕಾವೇರಿ ನೀರಾವರಿ ನಿಗಮ.

**
ಕಾವೇರಿ ನದಿ ಉತ್ಸವ ನೆಪದಲ್ಲಿ ಕಾವೇರಿ ಮಾತೆಗೆ ಅರಿಶಿನ ಕುಂಕುಮ ಪೂಜೆ ಮಾಡಿದ ಪುಣ್ಯ ಸಿಕ್ಕಿದೆ. ಮೆರವಣಿಗೆಯಲ್ಲಿ ಕೋಲಾಟ ಅಡಿ ಕೊಂಡು ದೇವರ ನೆನೆಯುತ್ತ ಸಾಗಿದ್ದು ಖುಷಿ ನೀಡಿದೆ. ಕುಶಾಲನಗರದಲ್ಲಿ ಇದೆ ರೀತಿಯ ಕಾರ್ಯಕ್ರಮ ಆಯೋಜನೆ ಮಾಡುತ್ತಿರಬೇಕೆಂದು ಬಯಸುತ್ತೇನೆ. ಕತ್ತಲು ಅದ ನಂತರ ನದಿ ದಡದಲ್ಲಿ ಕುಳಿತು ಪ್ರಕೃತಿ ಮಾತೆಯನ್ನು ಸವಿದ ಆಕ್ಷಣಗಳು ಅವಿಸ್ಮರಣೀಯ. ನೇತ್ರ ಸುರೇಶ್, ಭಜನಾ ಮಂಡಳಿ ಸದಸ್ಯೆ, ಕುಶಾಲನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net